
ಭಾರತ ಕ್ರಿಕೆಟ್ ತಂಡವು ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂದಿನಿಂದ ಭಾರತದಲ್ಲಿ ಕ್ರಿಕೆಟ್‌ನ ಕ್ರಾಂತಿ ಆರಂಭವಾಗಿದ್ದು ನಿಜ. ಐಪಿಎಲ್ ಸೇರಿದಂತೆ ದೇಶೀಯ ಟೂರ್ನಿಯ ಮೂಲಕ ನೂರಾರು ಕ್ರಿಕೆಟಿಗರು ಹೊರಬಂದರು.
ವಿಶ್ವದ ಬೇರೆ ದೇಶಗಳಿಗಿಂತ ಭಾರತದಲ್ಲಿ ಕ್ರಿಕೆಟ್‌ಗೆ ಹೆಚ್ಚು ಮಹತ್ವ ಸಿಗುತ್ತಿದೆ. ಅನೇಕ ಪ್ರತಿಭಾವಂತ ಆಟಗಾರರು ತಮ್ಮ ಪ್ರದರ್ಶನ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಆದರೂ ಭಾರತ ತಂಡದ ಪ್ರದರ್ಶನದ ಬಗ್ಗೆ ಮಾಜಿ ನಾಯಕ ಸೌರವ್ ಗಂಗೂಲಿ ತೃಪ್ತಿ ಹೊಂದಿಲ್ಲ.
ಐಸಿಸಿ ಪಂದ್ಯಾವಳಿಗಳಲ್ಲಿ, ವಿಶೇಷವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಚುಟುಕು ಸ್ವರೂಪದಲ್ಲಿ ಯಶಸ್ವಿಯಾಗಲು ಭಾರತ ತಂಡವು ಆಕ್ರಮಣಕಾರಿ ಬ್ರಾಂಡ್ ಕ್ರಿಕೆಟ್ ಅನ್ನು ಆಡಬೇಕು ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

2000ರ ದಶಕದಲ್ಲಿ ಭಾರತೀಯ ತಂಡವನ್ನು ಉತ್ತುಂಗಕ್ಕೇರಿಸಿದ ಶ್ರೇಯಸ್ಸು ಸೌರವ್ ಗಂಗೂಲಿಗೆ ಸೇರುತ್ತದೆ. "ಭಾರತವು ಆಕ್ರಮಣಕಾರಿ ಕ್ರಿಕೆಟ್ ಆಡುವ ಪ್ರತಿಭಾವಂತ ಆಟಗಾರರ ತಂಡವನ್ನು ಹೊಂದಿದೆ ಮತ್ತು ದೊಡ್ಡ ಪಂದ್ಯಾವಳಿಗಳಲ್ಲಿ ತಮ್ಮ ವಿಧಾನವನ್ನು ಬದಲಾಯಿಸಿಕೊಳ್ಳಬೇಕಿದೆ," ಎಂದು ಸೌರವ್ ಗಂಗೂಲಿ ಹೇಳಿದರು.
"2023ರ ಏಕದಿನ ವಿಶ್ವಕಪ್ ವರ್ಷದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಹಂಗಾಮಿ ನಾಯಕನಾಗಿ ಹಾರ್ದಿಕ್ ಪಾಂಡ್ಯ ಟಿ20 ಸ್ವರೂಪದಲ್ಲಿ ಭಾರತ ತಂಡವನ್ನು ಮುನ್ನಡೆಸಿದರು. 2022ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಅವರನ್ನು ಟಿ20 ಸ್ವರೂಪದಲ್ಲಿ ಭಾರತ ತಂಡದ ಮುಂದಿನ ನಾಯಕನಾಗಿ ನೋಡುತ್ತೇನೆ," ಎಂದು ಸೌರವ್ ಗಂಗೂಲಿ ತಿಳಿಸಿದರು.

"ಐಪಿಎಲ್ ಉತ್ತಮ ಆಟಗಾರರನ್ನು ಸಂಶೋಧಿಸುವ ವೇದಿಕೆಯಾಗಿದೆ. ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಎಷ್ಟು ಚೆನ್ನಾಗಿ ನಾಯಕತ್ವ ವಹಿಸಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಅವರು ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕನ ಜವಾಬ್ದಾರಿ ನಿಭಾಯಿಸುವ ದಿನ ದೂರವಿಲ್ಲ," ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟರು.
"ಐಪಿಎಲ್‌ನಲ್ಲಿ ಯಾವಾಗಲೂ ಗೆಲುವು ಮತ್ತು ಸೋಲುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಈ ಪಂದ್ಯಾವಳಿ ತುಂಬಾ ಕಠಿಣವಾಗಿದೆ," ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮಾತನಾಡಿದರು.
ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತ್ತು. ಅನಂತರ ಭಾರತ ತಂಡ ಯಾವುದೇ ಐಸಿಸಿ ಪಂದ್ಯಾವಳಿಯನ್ನು ಗೆದ್ದಿಲ್ಲ.
ಯುಎಇಯಲ್ಲಿ ನಡೆದ 2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಸೂಪರ್- 12 ಹಂತದಲ್ಲಿಯೇ ಹೊರಬಿದ್ದಿತ್ತು. ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿತು.