
ಹೊಸ ಬೌಲಿಂಗ್ ಕೋಚ್‌ಗಾಗಿ ಟೀಂ ಇಂಡಿಯಾ ಎದುರು ನೋಡುತ್ತಿದೆ. ಅವರು ಬೇರಾರೂ ಅಲ್ಲ ಟೀಂ ಇಂಡಿಯಾದ ಮಾಜಿ ವೇಗಿ ಅಜಿತ್ ಅಗರ್ಕರ್. 2023ರ ಏಕದಿನ ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಟೀಂ ಇಂಡಿಯಾಕ್ಕೆ ಹೊಸ ಬೌಲಿಂಗ್ ಕೋಚ್ ನೇಮಕವನ್ನು ಬಿಸಿಸಿಐ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ.
ಅಜಿತ್ ಅಗರ್ಕರ್ ಹೆಸರನ್ನು ಟೀಂ ಇಂಡಿಯಾದ ಪ್ರಮುಖ ಆಟಗಾರರು ಮಂಡಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಹಿರಿಯ ಆಟಗಾರ ಅಜಿತ್ ಅಗರ್ಕರ್ ಅವರು ಕೋಚ್ ಆಗಿ ಆಯ್ಕೆಯಾದ್ರೆ ಉತ್ತಮ ಎಂದು ಬಿಸಿಸಿಐಗೆ ತಿಳಿಸಿದ್ದಾರೆ. ನೂತನ ಬೌಲಿಂಗ್ ಕೋಚ್ 2023ರಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ವರೆಗೂ ಕೋಚ್ ಆಗಿರುವಂತೆ ಯೋಜಿಸಲಾಗುತ್ತಿದೆ. ಹೀಗಾಗಿ ಹೊಸ ಕೋಚ್ ಅನ್ನು ಶೀಘ್ರದಲ್ಲಿಯೇ ನೇಮಕ ಮಾಡಲಾಗುವುದು ಎಂದು ಹೇಳಲಾಗುತ್ತಿದ್ದು, ಸದ್ಯ ಈ ಸುದ್ದಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಮಾಜಿ ಸೀಮರ್ ಪರಸ್ ಮಾಂಬ್ರೆ ಪ್ರಸ್ತುತ ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಆಗಿದ್ದಾರೆ. ಆದರೆ, ಭಾರತ ಎ ಮತ್ತು ಅಂಡರ್-19 ತಂಡಗಳ ಕೋಚ್ ಆಗಿ ಮಾಂಬ್ರೆ ನೇಮಕಗೊಳ್ಳುವ ಸಾಧ್ಯತೆಯಿದ್ದು, ಹಿರಿಯರ ತಂಡದ ಕೋಚ್ ಆಗಿ ಅಜಿತ್ ಅಗರ್ಕರ್ ನೇಮಕಗೊಳ್ಳುವ ಸಾಧ್ಯತೆ ಇದೆ. ಟೀಂ ಇಂಡಿಯಾದ ಮಾಜಿ ಬೌಲರ್ ಅಜಿತ್ ಅಗರ್ಕರ್(44) ಪ್ರಸ್ತುತ ಕಾಮೆಂಟೇಟರ್ ಮತ್ತು ಕ್ರಿಕೆಟ್ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಬಿಸಿಸಿಐ ಮುಖ್ಯ ಆಯ್ಕೆಗಾರ ಹುದ್ದೆಗೆ ಸ್ಪರ್ಧಿಸಿದ್ದರೂ ನಿರಾಸೆ ಅನುಭವಿಸಿದ್ದರು. ಈ ಹುದ್ದೆಯನ್ನು ಬಿಸಿಸಿಐ ಚೇತನ್ ಶರ್ಮಾ ಅವರಿಗೆ ಹಸ್ತಾಂತರಿಸಿದೆ. ಚೇತನ್ ಶರ್ಮಾ ಪ್ರಸ್ತುತ ಟೀಂ ಇಂಡಿಯಾದ ಮುಖ್ಯ ಆಯ್ಕೆಗಾರರಾಗಿದ್ದಾರೆ.
ಅಜಿತ್ ಅಗರ್ಕರ್ 1998 ರಿಂದ 2007 ರವರೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದರು. ಟೀಂ ಇಂಡಿಯಾ ಪರ 349 ವಿಕೆಟ್ ಕಬಳಿಸಿದ್ದಾರೆ. ಅವರು ಒಟ್ಟು 28 ಟೆಸ್ಟ್‌ಗಳು, 191 ಏಕದಿನ ಪಂದ್ಯಗಳು ಮತ್ತು ನಾಲ್ಕು ಟಿ20 ಪಂದ್ಯಗಳನ್ನು ಆಡಿದ್ದಾರೆ.
ಟೆಸ್ಟ್‌ನಲ್ಲಿ 58, ಏಕದಿನ ಕ್ರಿಕೆಟ್‌ನಲ್ಲಿ 288 ಮತ್ತು ಟಿ20ಯಲ್ಲಿ 3 ವಿಕೆಟ್‌ಗಳನ್ನು ಪಡೆದಿದ್ದಾರೆ. ವಾಂಡರರ್ಸ್ ಟಿ20 ಪ್ರಾರಂಭಿಸಿ, ಅದೇ ಮೈದಾನದಲ್ಲಿಯೇ ಕೊನೆಯ ಟಿ20 ಪಂದ್ಯವನ್ನಾಡಿದ್ದಾರೆ. ಅವರು ಐಪಿಎಲ್‌ನಲ್ಲಿ 42 ಪಂದ್ಯಗಳನ್ನು ಆಡಿದ್ದು, 29 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಬೌಲಿಂಗ್ ಅಷ್ಟೇ ಅಲ್ಲದೆ ಟೆಸ್ಟ್‌ನಲ್ಲಿ ಒಂದು ಶತಕ ಮತ್ತು ಏಕದಿನ ಕ್ರಿಕೆಟ್‌ನಲ್ಲಿ 3 ಅರ್ಧ ಶತಕಗಳನ್ನು ಗಳಿಸಿದರು. 2002ರಲ್ಲಿ ಇಂಗ್ಲೆಂಡ್‌ನ ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ಶತಕ ಬಾರಿಸಿದ್ದರು. ಹೊಸ ಮತ್ತು ಹಳೆಯ ಚೆಂಡನ್ನು ಎರಡು ಕಡೆಗೂ ಸ್ವಿಂಗ್ ಮಾಡುವಲ್ಲಿ ಅಗರ್ಕರ್ ಉತ್ತಮ ಕೌಶಲ್ಯವನ್ನು ಹೊಂದಿದ್ದರು.