ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಇನ್ನು ಗಾಯದಿಂದ ಚೇತರಿಸಿಕೊಂಡಿಲ್ಲ. ಗಾಯದ ಸಮಸ್ಯೆ ಟೀಮ್ ಇಂಡಿಯಾವನ್ನು ಬಹುವಾಗಿ ಕಾಡುತ್ತಿದೆ. ವರದಿಗಳ ಪ್ರಕಾರ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ವೇಳೆ ಶಮಿ ಇಂಜಕ್ಷನ್ ಪಡೆದು ಪ್ರದರ್ಶನ ನೀಡಿದ್ದರು ಎಂದು ವರದಿಗಳಿಂದ ಬಹಿರಂಗವಾಗಿದೆ. ಆದರೂ, ಅವರು ಗಾಯ ಸಂಪೂರ್ಣ ಮಾಸದೇ ಇರುವುದು ತಂಡಕ್ಕೆ ತಲೆ ನೋವು ತಂದಿದೆ.
ಇಂಗ್ಲೆಂಡ್ ಭಾರತದ ಪ್ರವಾಸವನ್ನು ಬೆಳೆಸಲಿದೆ. ಈ ಹಿನ್ನೆಲೆ ಇಂಗ್ಲೆಂಡ್ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ಆದರೆ ಇನ್ನು ಬಿಸಿಸಿಐ ಟೀಮ್ ಇಂಡಿಯಾವನ್ನು ಪ್ರಕಟಿಸಿಲ್ಲ. ಈ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಟೀಮ್ ಇಂಡಿಯಾದ ವಲಯದಲ್ಲಿ ಹಲವು ಆಟಗಾರರಿಗೆ ಗಾಯವಾಗಿದ್ದು ಆಯ್ಕೆದಾರರಿಗೆ ಬಿಸಿ ತುಪ್ಪದಂತೆ ಪರಿಣಮಿಸುತ್ತಿದೆ.

ಭಾರತ ತಂಡ ಇದೇ ತಿಂಗಳು ಜನವರಿ 25 ರಿಂದ ಇಂಗ್ಲೆಂಡ್ ವಿರುದ್ಧ ತವರಿನ ಟೆಸ್ಟ್ ಸರಣಿಯನ್ನು ಆಡಲಿದೆ. ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿರುವ ವೇಗಿ ಮೊಹಮ್ಮದ್ ಶಮಿ ತಂಡ ಸೇರುವುದು ಅನುಮಾನವಾಗಿದೆ. ಅವರು ಇಂಗ್ಲೆಂಡ್ ಸರಣಿಗೆ ಮೊದಲು ಫಿಟ್ ಆಗಿರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಈಗ ಅವರು ಆರಂಭಿಕ ಪಂದ್ಯಗಳಲ್ಲಿ ಆಡುವ ಸಾಧ್ಯತೆ ತುಂಬಾ ಕಡಿಮೆ ಎಂದು ವರದಿಗಳು ಬಂದಿವೆ.
ಪಾದದ ಗಾಯದಿಂದ ಬಳಲುತ್ತಿರುವ ಶಮಿ ಇನ್ನು ಫಿಟ್ ಆಗಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಮೊಹಮ್ಮದ್ ಶಮಿ ತಂಡದ ಭಾಗವಾಗಿರಲಿಲ್ಲ. 2023ರ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಅವರು ಕೊನೆಯದಾಗಿ ಭಾರತದ ಪರ ಆಡಿದ್ದರು. ಅಂದಿನಿಂದ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈಗ ಅವರ ಫಿಟ್‌ನೆಸ್‌ನ ಅಪ್‌ಡೇಟ್ ಬಂದಿದ್ದು, ಶಮಿ ಸಂಪೂರ್ಣ ಫಿಟ್ ಆಗಲು ಹೆಚ್ಚು ಸಮಯ ಬೇಕಾಗುತ್ತದೆ ಎಂದು ತಿಳಿದು ಬಂದಿದೆ.
ನವೆಂಬರ್ 30 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಘೋಷಿಸಲಾದ ಟೆಸ್ಟ್ ತಂಡದಲ್ಲಿ ಶಮಿ ಅವರನ್ನು ಸೇರಿಸಲಾಗಿತ್ತಿ. ಆದರೆ 33 ವರ್ಷದ ಬೌಲರ್ ಫಿಟ್ ಆಗಿರದ ಕಾರಣ ಅವರನ್ನು ಕೈಬಿಡಬೇಕಾಯಿತು.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಬಿಸಿಸಿಐ ಅಧಿಕಾರಿಯೊಬ್ಬರು ಶಮಿ ಅವರ ಫಿಟ್‌ನೆಸ್ ಕುರಿತು ಮಾಹಿತಿ ನೀಡಿದ್ದಾರೆ. 'ಶಮಿ ಇನ್ನೂ ಬೌಲಿಂಗ್ ಮಾಡಲು ಪ್ರಾರಂಭಿಸಿಲ್ಲ. ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ಹೋಗುವ ಮೂಲಕ ತಮ್ಮ ಫಿಟ್‌ನೆಸ್ ಅನ್ನು ಸಾಬೀತುಪಡಿಸಬೇಕಾಗಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಅವರು ಆಡುವುದು ಅನುಮಾನವಾಗಿದೆ ಎಂದು ತಿಳಿಸಿದ್ದಾರೆ.
ಬಿಸಿಸಿಐ ಶೀಘ್ರದಲ್ಲೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಸರಣಿಯಲ್ಲಿ 5 ಪಂದ್ಯಗಳು ನಡೆಯಲಿವೆ. ಆದಾಗ್ಯೂ, ಬಿಸಿಸಿಐ ಶಮಿ ಅವರಿಗೆ ಟೈಮ್ ನೀಡುವ ಸಾಧ್ಯತೆ ಇದೆ. ಏಕೆಂದರೆ ಭಾರತ ಈ ಟೆಸ್ಟ್ ಸರಣಿಯನ್ನು ತವರಿನಲ್ಲಿ ಆಡಬೇಕಾಗಿದೆ. ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ತಂಡಕ್ಕೆ ಲಭ್ಯವಿದ್ದಾರೆ. ಭಾರತದ ಪಿಚ್‌ಗಳಲ್ಲಿ ಸ್ಪಿನ್ ಬೌಲಿಂಗ್ ಹೆಚ್ಚು ಸಹಾಯಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶಮಿ ಸಂಪೂರ್ಣ ಫಿಟ್ ಆಗದಿದ್ದರೆ ಅವರಿಗೆ ವಿಶ್ರಾಂತಿ ನೀಡಲಾಗುವುದು.
ಮೊಹಮ್ಮದ್ ಶಮಿ ಭಾರತದ ಪರ 64 ಟೆಸ್ಟ್ ಪಂದ್ಯಗಳನ್ನು ಆಡಿದ್ದು 229 ವಿಕೆಟ್ ಪಡೆದಿದ್ದಾರೆ. ಈ ವೇಳೆ ಇವರ ಏಕನಾಮಿ 3.30 ಆಗಿದೆ. ತವರಿನಲ್ಲಿ ಶಮಿ ಅಪಾಯಕಾರಿ ಎಂಬುದು ಅವರ ಅಂಕಿ ಅಂಶಗಳು ಹೇಳುತ್ತವೆ. ಭಾರತದಲ್ಲಿ ಆಡಿದ 42 ಪಂದ್ಯಗಳಲ್ಲಿ ಶಮಿ 76 ವಿಕೆಟ್ ಪಡೆದು ಬೀಗಿದ್ದಾರೆ. ಇದರಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ 15 ಪಂದ್ಯಗಳಲ್ಲಿ 44 ವಿಕೆಟ್ ಕಬಳಿಸಿದ್ದಾರೆ.