ಈ ಆಟಗಾರರಿರುವ ಭಾರತ ತಂಡ ವಿಶ್ವದ ಯಾವುದೇ ದೇಶದಲ್ಲಿ ಬೇಕಾದರೂ ಗೆಲ್ಲಲಿದೆ: ತೆಂಡೂಲ್ಕರ್ ಮೆಚ್ಚುಗೆ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿ ಈಗಾಗಲೇ ಆರಂಭವಾಗಿದ್ದು ಇತ್ತಂಡಗಳ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯ ಮುಗಿದ ನಂತರ ಟೀಮ್ ಇಂಡಿಯಾ ಈ ಸರಣಿಯಲ್ಲಿ 1-0 ಅಂತರದ ಮುನ್ನಡೆಯನ್ನು ಸಾಧಿಸಿದೆ.
ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಸೆಂಚುರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ ಅವರ ನೆಲದಲ್ಲಿಯೇ ಸೋಲುಣಿಸಿರುವ ಟೀಮ್ ಇಂಡಿಯಾ ಪಂದ್ಯದಲ್ಲಿ 113 ರನ್‌ಗಳ ಬೃಹತ್ ಜಯವನ್ನು ಸಾಧಿಸಿದೆ. ಈ ಗೆಲುವಿನ ಮೂಲಕ ಐತಿಹಾಸಿಕ ದಾಖಲೆಯೊಂದನ್ನು ಬರೆದಿರುವ ಟೀಮ್ ಇಂಡಿಯಾ ಸೆಂಚುರಿಯನ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಏಷ್ಯಾಖಂಡದ ಚೊಚ್ಚಲ ತಂಡ ಎಂಬ ಖ್ಯಾತಿಗೆ ಭಾಜನವಾಗಿದೆ.
ಹೌದು, ಸೆಂಚುರಿಯನ್ ಕ್ರೀಡಾಂಗಣದಲ್ಲಿ ಏಷ್ಯಾದ ಯಾವುದೇ ತಂಡ ಕೂಡ ಟೆಸ್ಟ್ ಪಂದ್ಯವೊಂದನ್ನು ಇಲ್ಲಿಯವರೆಗೂ ಕೂಡ ಗೆದ್ದಿರಲಿಲ್ಲ. ಟೀಮ್ ಇಂಡಿಯಾ ಕೂಡ ಇದೇ ಕ್ರೀಡಾಂಗಣದಲ್ಲಿ ಈ ಹಿಂದೆ ನಡೆದಿದ್ದ ಎರಡೂ ಪಂದ್ಯಗಳಲ್ಲಿಯೂ ಜಯ ಸಾಧಿಸಲಾಗದೇ ಮಂಕಾಗಿತ್ತು. ಆದರೆ ಇದೀಗ ಸೆಂಚುರಿಯನ್ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಪಡೆ ಇನ್ನೂ ಒಂದೂವರೆ ಸೆಷನ್ ಬಾಕಿ ಇರುವಾಗಲೇ ಬೃಹತ್ ಮೊತ್ತದ ಅಂತರದಿಂದ ಜಯ ಸಾಧಿಸಿ ಕೆಟ್ಟ ದಾಖಲೆಯನ್ನು ಅಳಿಸಿಹಾಕಿದೆ. ಈ ಮೂಲಕ ಭಾರತ ಟೆಸ್ಟ್ ತಂಡ ಆಸ್ಟ್ರೇಲಿಯಾದ ಗಬ್ಬಾ, ಇಂಗ್ಲೆಂಡ್‌ನ ಓವಲ್ ಮತ್ತು ಲಾರ್ಡ್ಸ್ ಹಾಗೂ ದಕ್ಷಿಣ ಆಫ್ರಿಕಾದ ಸೆಂಚುರಿಯನ್ ಹೀಗೆ ಭಿನ್ನ ವಿಭಿನ್ನ ದೇಶಗಳ ಕಠಿಣ ಕ್ರೀಡಾಂಗಣಗಳಲ್ಲಿ ಗೆದ್ದು ವಿಜಯ ಪತಾಕೆಯನ್ನು ಹಾರಿಸಿ ಹಲವು ದಾಖಲೆಗಳನ್ನು ನಿರ್ಮಿಸಿದೆ. ಇನ್ನು ಟೀಮ್ ಇಂಡಿಯಾ ಸೆಂಚುರಿಯನ್ ರೀತಿಯ ಕಠಿಣ ಕ್ರೀಡಾಂಗಣದಲ್ಲಿ ಜಯ ಸಾಧಿಸಿರುವುದರ ಕುರಿತು ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಈ ಕೆಳಕಂಡಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬೌಲಿಂಗ್ ಪಡೆಯನ್ನು ಕೊಂಡಾಡಿದ ಸಚಿನ್
ಸೆಂಚುರಿಯನ್ ಜಯದ ನಂತರ ಟೀಮ್ ಇಂಡಿಯಾ ಕುರಿತಾಗಿ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್ ಭಾರತೀಯ ತಂಡದ ಬೌಲಿಂಗ್ ವಿಭಾಗದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾದ ಬೌಲಿಂಗ್ ವಿಭಾಗ ಉತ್ತಮ ಪ್ರದರ್ಶನವನ್ನು ನೀಡಿತು, ಈ ಬೌಲಿಂಗ್ ವಿಭಾಗ ವಿಶ್ವದ ಯಾವುದೇ ದೇಶದಲ್ಲಿ ಬೇಕಾದರೂ ಕೂಡ 20 ವಿಕೆಟ್ ಪಡೆದು ಗೆಲುವನ್ನು ತಂದು ಕೊಡಲಿದೆ ಎಂದು ಸಚಿನ್ ತೆಂಡೂಲ್ಕರ್ ಶ್ಲಾಘಿಸಿದ್ದಾರೆ.

5 ಬೌಲರ್‌ಗಳ ತಂಡದೊಂದಿಗೆ ಕಣಕ್ಕಿಳಿಯುವುದೇ ಪ್ಲಸ್ ಪಾಯಿಂಟ್ ಎಂದಿದ್ದ ರಾಹುಲ್
ಕೇವಲ ಸಚಿನ್ ತೆಂಡೂಲ್ಕರ್ ಮಾತ್ರವಲ್ಲದೇ ಸದ್ಯ ಭಾರತ ತಂಡದ ಉಪನಾಯಕನಾಗಿರುವ ಕೆಎಲ್ ರಾಹುಲ್ ದ. ಆಫ್ರಿಕಾ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯ ಆರಂಭವಾಗುವ ಮುನ್ನ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಬೌಲಿಂಗ್ ವಿಭಾಗವನ್ನು ಶ್ಲಾಘಿಸಿದ್ದರು. 5 ಬೌಲರ್‌ಗಳನ್ನೊಳಗೊಂಡ ತಂಡದೊಂದಿಗೆ ಕಣಕ್ಕಿಳಿಯಲಿದ್ದು 20 ವಿಕೆಟ್‍ಗಳನ್ನು ಪಡೆಯುವುದು ತಮ್ಮ ತಂಡದ ಗುರಿಯಾಗಿದೆ ಎಂಬುದನ್ನು ಕೆಎಲ್ ರಾಹುಲ್ ಅದೇ ವೇಳೆ ಬಿಚ್ಚಿಟ್ಟಿದ್ದರು. ಅದೇ ರೀತಿ ಟೀಮ್ ಇಂಡಿಯಾ ಬೌಲಿಂಗ್ ವಿಭಾಗ ಎದುರಾಳಿ ದಕ್ಷಿಣ ಆಫ್ರಿಕಾ ತಂಡದ 20 ವಿಕೆಟ್‍ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಪ್ರದರ್ಶನವನ್ನು ಮರೆಯುವ ಹಾಗಿಲ್ಲ
ಹಲವಾರು ಮಾಜಿ ಕ್ರಿಕೆಟಿಗರು ಹೇಳುತ್ತಿರುವಂತೆ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯವನ್ನು ಗೆಲ್ಲಲು ಬೌಲಿಂಗ್ ವಿಭಾಗದ ಕೊಡುಗೆ ದೊಡ್ಡ ಮಟ್ಟದಲ್ಲಿದೆ ಎಂಬುದು ನಿಜ. ಹಾಗೆಂದ ಮಾತ್ರಕ್ಕೆ ಬ್ಯಾಟಿಂಗ್ ವಿಭಾಗದ ಕೊಡುಗೆಯನ್ನು ಮರೆಯುವ ಹಾಗಿಲ್ಲ. ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ನೀಡಿದ ಜವಬ್ದಾರಿಯುತ ಆಟದಿಂದಲೇ ಟೀಮ್ ಇಂಡಿಯಾ ಉತ್ತಮ ಮೊತ್ತವನ್ನು ಕಲೆಹಾಕಿ ಲೀಡ್ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಒಂದುವೇಳೆ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಮೊದಲನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ನೀಡುವಲ್ಲಿ ವಿಫಲರಾಗಿದ್ದರೆ ಟೀಮ್ ಇಂಡಿಯಾ ದೊಡ್ಡ ಮೊತ್ತ ಕಲೆಹಾಕುವಲ್ಲಿ ಎಡವಿ ಸಂಕಷ್ಟಕ್ಕೆ ಸಿಲುಕುತ್ತಿತ್ತು ಎಂದರೆ ಬಹುಶಃ ತಪ್ಪಾಗಲಾರದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications