ಭಾರತ ಟಿ20 ವಿಶ್ವಕಪ್ ಗೆಲ್ಲಬೇಕೆಂದರೆ ಈ ಆಟಗಾರರು ಇರಲೇಬೇಕು ಎಂದ ಡೇಲ್ ಸ್ಟೇನ್

ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾ ನೆಲದಲ್ಲಿ ಆರಂಭವಾಗಲಿದ್ದು, ವಿವಿಧ ತಂಡಗಳು ಟೂರ್ನಿಗಾಗಿ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿವೆ. ಯಾವ ಆಟಗಾರರನ್ನು ಟೂರ್ನಿಗೆ ಆಯ್ಕೆ ಮಾಡಿದರೆ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂಬುದರ ಕುರಿತು ವಿವಿಧ ಕ್ರಿಕೆಟ್ ಬೋರ್ಡ್‌ಗಳ ಆಯ್ಕೆ ಸಮಿತಿ ಸದಸ್ಯರು ಯೋಜನೆ ರೂಪಿಸುತ್ತಿದ್ದು, ಪ್ರಸ್ತುತ ನಡೆಯುತ್ತಿರುವ ಪಂದ್ಯಗಳ ಮೇಲೆ ನಿಗಾ ವಹಿಸಿದ್ದಾರೆ.
ಹೀಗಾಗಿ ಸದ್ಯ ನಡೆಯುತ್ತಿರುವ ಹಣಾಹಣಿಗಳಲ್ಲಿ ಒಳ್ಳೆಯ ಪ್ರದರ್ಶನ ತೋರಿದ ಆಟಗಾರರಿಗೆ ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ತಂಡವನ್ನು ಪ್ರತಿನಿಧಿಸುವ ಅವಕಾಶ ಲಭಿಸುವುದು ಖಚಿತ. ಅದರಲ್ಲಿಯೂ ಟೀಮ್ ಇಂಡಿಯಾ ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಮುಗ್ಗರಿಸಿ ಲೀಗ್ ಹಂತದಲ್ಲಿಯೇ ಹೊರಬಿದ್ದಿದ್ದ ಕಾರಣ ಈ ಬಾರಿ ಉತ್ತಮ ಪ್ರದರ್ಶನ ನೀಡಬಹುದಾದ ಆಟಗಾರರನ್ನು ಆರಿಸಿ ಬಲಿಷ್ಠ ತಂಡ ನಿರ್ಮಿಸುವತ್ತ ಬಿಸಿಸಿಐ ಆಯ್ಕೆಗಾರರ ಸಮಿತಿ ಕಣ್ಣಿಟ್ಟಿದೆ.
ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಭಾರತ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟ ನಡೆಸುತ್ತಿದ್ದು, ಈ ಸರಣಿಯಲ್ಲಿ ಭಾರತ ತಂಡಕ್ಕೆ ನಾಯಕನಾಗಿ ಘೋಷಣೆಯಾಗಿದ್ದ ಕೆಎಲ್ ರಾಹುಲ್ ಸರಣಿಗೂ ಮುನ್ನವೇ ಗಾಯದ ಸಮಸ್ಯೆಗೆ ಒಳಗಾದ ಕಾರಣ ರಿಷಭ್ ಪಂತ್ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋತ ಟೀಂ ಇಂಡಿಯಾ ನಂತರ 2 ಪಂದ್ಯಗಳಲ್ಲಿ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿದೆ. ಸರಣಿಯಲ್ಲಿ ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಅವಕಾಶ ಗಿಟ್ಟಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ. ಈ ಕುರಿತಾಗಿ ಇದೀಗ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಡೇಲ್ ಸ್ಟೈನ್ ಮಾತನಾಡಿದ್ದು, ಟೀಮ್ ಇಂಡಿಯಾ ಟ್ರೋಫಿ ಎತ್ತಿ ಹಿಡಿಯಬೇಕೆಂದರೆ ಯಾವ ಆಟಗಾರರನ್ನು ಆಯ್ಕೆ ಮಾಡಬೇಕೆಂದು ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ವಿಶ್ವಕಪ್ ಗೆಲ್ಲಲು ಈ ಆಟಗಾರರಿಗೆ ಅವಕಾಶ ನೀಡಿ
ಟೀಮ್ ಇಂಡಿಯಾ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಲು ಉತ್ತಮ ಪ್ರದರ್ಶನ ನೀಡಿ ಫಾರ್ಮ್‌ನಲ್ಲಿರುವ ಆಟಗಾರರಿಗೆ ಕಡ್ಡಾಯವಾಗಿ ಅವಕಾಶ ನೀಡಬೇಕು ಎಂದು ಡೇಲ್ ಸ್ಟೇನ್ ಅಭಿಪ್ರಾಯಪಟ್ಟಿದ್ದಾರೆ. ಹೆಸರು ಮತ್ತು ಖ್ಯಾತಿಯನ್ನು ನೋಡದೇ ಒಳ್ಳೆಯ ಪ್ರದರ್ಶನವನ್ನು ನೋಡಿ ಅವಕಾಶ ನೀಡಿದರೆ ಮಾತ್ರ ತಂಡ ಯಶಸ್ವಿಯಾಗಿ ಟ್ರೋಫಿ ಗೆಲ್ಲಲಿದೆ ಎಂದು ಡೇಲ್ ಸ್ಟೇನ್ ಹೇಳಿಕೆ ನೀಡಿದ್ದಾರೆ.

ರಿಷಬ್ ಪಂತ್ ಮೀರಿಸಿದ ದಿನೇಶ್ ಕಾರ್ತಿಕ್
ಇನ್ನೂ ಮುಂದುವರಿದು ಮಾತನಾಡಿರುವ ಡೇಲ್ ಸ್ಟೇನ್ ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 4 ಅವಕಾಶ ಸಿಕ್ಕರೂ ಸಹ ರಿಷಭ್ ಪಂತ್ ಉತ್ತಮ ಪ್ರದರ್ಶನ ನೀಡಲಾಗಿಲ್ಲ, ಆದರೆ ಪ್ರತಿ ಬಾರಿಯೂ ದಿನೇಶ್ ಕಾರ್ತಿಕ್ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ ಎಂದು ಹೇಳಿಕೆ ನೀಡಿದ್ದು, ದಿನೇಶ್ ಕಾರ್ತಿಕ್ ರಿಷಭ್ ಪಂತ್ ಅವರನ್ನು ಮೀರಿಸಿ ಮುನ್ನಡೆಯುತ್ತಿದ್ದಾರೆ ಎಂದಿದ್ದಾರೆ.

ಹೀಗೆ ಆದರೆ ಡಿಕೆ ಹೆಸರು ಮುಂದಿರಲಿದೆ
ದಿನೇಶ್ ಕಾರ್ತಿಕ್ ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸಿದರೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗುವ ಭಾರತ ತಂಡದ ಪಟ್ಟಿಯಲ್ಲಿ ಕಾರ್ತಿಕ್ ಹೆಸರೇ ಮುಂದಿರಲಿದೆ ಎಂದು ಡೇಲ್ ಸ್ಟೇನ್ ಭವಿಷ್ಯ ನುಡಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications