ಮುಂಬೈ, ಸೆಪ್ಟೆಂಬರ್ 22: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ಧದ 2ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಜಯಗಳಿಸಲು ಕಾರಣರಾದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬೌಲರ್ ಗಳಾದ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್ ಬಗ್ಗೆ ಮಾಜಿ ಕ್ರಿಕೆಟಿಗ, ಭಾರತೀಯ ಕ್ರಿಕೆಟ್ ಲೋಕದ ದಂತಕತೆ ಸಚಿನ್ ತೆಂಡೂಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಈ ಮೂವರ ಬಗ್ಗೆ ಹಾಡಿ ಹೊಗಳಿರುವ ಅವರು, ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್ ಕೇವಲ ಬೌಲಿಂಗ್ ಮಾಡಲಿಲ್ಲ. ತಮ್ಮ ಸ್ಪಿನ್ ಮೋಡಿಯಿಂದ ಈ ಇಬ್ಬರೂ ಗೆಲುವಿನ ಸಿರಿಯು ಭಾರತದತ್ತ ಹೊರಳುವಂತೆ ಮಾಡಿದರು ಎಂದು ತಿಳಿಸಿದ್ದಾರೆ.

ಇದೇ ವೇಳೆ, ಅರ್ಧಶತಕ ಸಿಡಿಸಿದ ಆರಂಭಿಕ ಆಟಗಾರ ಅಜಿಂಕ್ಯ ರಹಾನೆ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರನ್ನೂ ಸಚಿನ್ ಕೊಂಡಾಡಿದ್ದಾರೆ.
ಕೋಲ್ಕತಾದಲ್ಲಿ ಗುರುವಾರ (ಸೆ. 21) ರಾತ್ರಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ, ಆಸ್ಟ್ರೇಲಿಯಾ ತಂಡವನ್ನು 50 ರನ್ ಗಳಿಂದ ಪರಾಭವಗೊಳಿಸಿತ್ತು.