ಟೆಸ್ಟ್ ಕ್ರಿಕೆಟ್‌ನಲ್ಲಿ ಮರಳಿ ನಂ.1 ಸ್ಥಾನ ಪಡೆಯುವತ್ತ ಜಿಮ್ಮಿ ಚಿತ್ತ

ಲಂಡನ್, ಜುಲೈ 23: ಐಸಿಸಿ ಟೆಸ್ಟ್ ಬೌಲರ್ಸ್ ಶ್ರೇಯಾಂಕದಲ್ಲಿ ಮರಳಿ ನಂ.1 ಸ್ಥಾನಕ್ಕೇರುವ ಕಡೆಗೆ ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ ಕಣ್ಣಿಟ್ಟಿದ್ದು, ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾಗಲಿರುವ ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಕಳೆದ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದ ಯುವ ವೇಗದ ಬೌಲರ್ ಕಗಿಸೊ ರಬಾಡ, ಇಂಗ್ಲೆಂಡ್‌ನ ಅನುಭವಿ ವೇಗಿಯನ್ನು ಹಿಂದಿಕ್ಕಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದರು. ಇದೀಗ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಅಗ್ರಸ್ಥಾನದಲ್ಲಿದ್ದು ಆಂಡರ್ಸನ್ 16 ಅಂಕಗಳ ಹಿನ್ನಡೆಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ.
ಇನ್ನು ಆಷಸ್ ಟೆಸ್ಟ್ ಸರಣಿ ಆರಂಭವಾಗುವ ಮೊದಲು ಪ್ಯಾಟ್ ಕಮಿನ್ಸ್ ಯಾವುದೇ ಪಂದ್ಯಗಳನ್ನು ಆಡದೇ ಇರುವ ಕಾರಣ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿ 16 ಅಂಕಗಳನ್ನು ಹಿನ್ನಡೆಯನ್ನು ಬದಿಗೊತ್ತಿ ಮರಳಿ ನಂ.1 ಸ್ಥಾನಕ್ಕೇರುವ ಉತ್ತಮ ಅವಕಾಶ ಇಂಗ್ಲೆಂಡ್ ಪರ ಸಾರ್ವಕಾಲಿಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವ ಆಂಡರ್ಸನ್ ಕೈಲಿದೆ.
ಇದೇ ವೇಳೆ ಆಂಡರ್ಸನ್ ಅವರ ಜೊತೆಗಾರ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಕೂಡ ಐಸಿಸಿ ಬೌಲರ್ಸ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 20ರ ಒಳಗೆ ಉಳಿದುಕೊಳ್ಳುವ ಪ್ರಯತ್ನ ನಡೆಸಲಿದ್ದಾರೆ. ಬ್ರಾಡ್ 2009ರಿಂದ ಈವರೆಗೆ ಒಮ್ಮೆಯೂ ಅಗ್ರ 20ರಿಂದ ಹೊರಬಿದ್ದಿಲ್ಲ ಎಂಬುದು ವಿಶೇಷ.
ಇನ್ನು ಬ್ಯಾಟ್ಸ್‌ಮನ್‌ಗಳ ಪೈಕಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಆರನೇ ಶ್ರೇಯಾಂಕದಲ್ಲಿದ್ದು, ಜಾನಿ ಬೈರ್‌ಸ್ಟೋವ್ (26ನೇ) ಮತ್ತು ಜೋಸ್ ಬಟ್ಲರ್ (27ನೇ) ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 30ರ ಒಳಗಿರುವ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.
ಐಸಿಸಿ ಟೆಸ್ಟ್ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡ 105 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಒಂದು ವೇಳೆ ಈ ಪಂದ್ಯವನ್ನು ಗೆದ್ದರೂ ಇಂಗ್ಲೆಂಡ್ ತಂಡದ ಅಂಕ 104ಕ್ಕೆ ಕುಸಿಯಲಿದ್ದು, ಸೋತರೆ 102ಕ್ಕೆ ಜಾರಲಿದೆ. ಮತ್ತೊಂದೆಡೆ ಐರ್ಲೆಂಡ್ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಸಿಕ್ಕರೆ 30 ಅಂಕಗಳನ್ನು ಪಡೆಯಲಿದ್ದು, ಡ್ರಾ ಸಾಧಿಸಿದರೆ 13 ಅಂಕಗಳನ್ನು ಖಾತೆಗಿಳಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications