ಕೊಹ್ಲಿ ನೀಡಿದ್ದ ಬೆಲೆ ಕಟ್ಟಲಾಗದ ಉಡುಗೊರೆಯನ್ನು ಕಣ್ಣೀರಿಟ್ಟು ವಾಪಸ್ ಮಾಡಿದ್ದೆ ಎಂದ ಸಚಿನ್!

ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‍ನಲ್ಲಿ ತಮ್ಮದೇ ಆದ ಹಲವಾರು ವಿಶಿಷ್ಟ ಹಾಗೂ ವಿನೂತನ ದಾಖಲೆಗಳಿಂದ ದೊಡ್ಡ ಮಟ್ಟದ ಹೆಸರನ್ನು ಮಾಡಿರುವಂತಹ ಕ್ರಿಕೆಟಿಗರು. ಸುಮಾರು ಎರಡೂವರೆ ದಶಕಗಳ ಕಾಲ ಕ್ರಿಕೆಟ್ ಆಡಿ ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ನಿರ್ಮಿಸಿರುವ ಸಚಿನ್ ತೆಂಡೂಲ್ಕರ್ 100 ಶತಕಗಳನ್ನು ಬಾರಿಸಿರುವ ವಿಶ್ವದ ಮೊದಲ ಹಾಗೂ ಏಕೈಕ ಕ್ರಿಕೆಟಿಗ ಎನಿಸಿಕೊಂಡು ಕ್ರಿಕೆಟ್ ದೇವರಾಗಿದ್ದಾರೆ.
ಇತ್ತ ಸಚಿನ್ ತೆಂಡೂಲ್ಕರ್ ನಿರ್ಮಿಸಿರುವ ಹಲವಾರು ದಾಖಲೆಗಳನ್ನು ಮುರಿಯಬಲ್ಲ ಸಾಮರ್ಥ್ಯವಿರುವ ಏಕೈಕ ಆಟಗಾರ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಈಗಾಗಲೇ ಹಲವಾರು ದಾಖಲೆಗಳನ್ನು ನಿರ್ಮಿಸಿ ಕಿಂಗ್ ಆಫ್ ಕ್ರಿಕೆಟ್ ಎಂದು ಹೆಸರನ್ನು ಮಾಡಿದ್ದಾರೆ. ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿ ತಂಡದಲ್ಲಿ ಖಾಯಂ ಸದಸ್ಯನಾಗುವ ಸಮಯಕ್ಕೆ ಸಚಿನ್ ತೆಂಡೂಲ್ಕರ್ ವಿದಾಯವನ್ನು ಹೇಳುವ ಹಂತಕ್ಕೆ ಬಂದು ತಲುಪಿದ್ದರು. ಹೌದು, 2013ರಲ್ಲಿ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆದಿದ್ದ ಟೆಸ್ಟ್ ಪಂದ್ಯ ಸಚಿನ್ ತೆಂಡೂಲ್ಕರ್ ಆಡಿದ ಅಂತಿಮ ಪಂದ್ಯವಾಗಿತ್ತು.
ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಜತೆಗೆ ವಿರಾಟ್ ಕೊಹ್ಲಿ ಕೂಡ ಭಾಗವಹಿಸಿದ್ದರು. ಸಚಿನ್ ತೆಂಡೂಲ್ಕರ್ ಆ ಪಂದ್ಯ ಮುಗಿದ ನಂತರ ಭಾವುಕರಾಗಿ ತಮ್ಮ ಕೊಠಡಿಯನ್ನು ತಲುಪಿದ್ದರು. ತಾವು ಆಡುತ್ತಿರುವ ಅಂತಿಮ ಪಂದ್ಯವಿದು ಎಂಬ ಸತ್ಯಾಂಶವನ್ನು ತಿಳಿದಿದ್ದ ಸಚಿನ್ ತೆಂಡೂಲ್ಕರ್ ಈ ಕೊಠಡಿಯಲ್ಲಿ ಕುಳಿತು ಕಣ್ಣೀರಿಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದರು. ಈ ಕುರಿತಾಗಿ ಇದೀಗ ಇತ್ತೀಚಿಗಷ್ಟೆ ನಡೆದ ಯುಟ್ಯೂಬ್ ಚಾನೆಲ್ ಒಂದರ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಚಿನ್ ತೆಂಡೂಲ್ಕರ್ ಈ ಕೆಳಕಂಡಂತೆ ಘಟನೆಯನ್ನು ಬಿಚ್ಚಿಟ್ಟಿದ್ದಾರೆ..

ಕ್ರಿಕೆಟ್ ದೇವರಿಗೆ ವಿರಾಟ್ ಕೊಹ್ಲಿ ವಿಶೇಷ ಉಡುಗೊರೆ
'ನನ್ನ ವೃತ್ತಿ ಜೀವನದ ಅಂತಿಮ ಪಂದ್ಯ ಮುಗಿದ ಬಳಿಕ ನಾನು ಕೊಠಡಿಗೆ ಹೋಗಿ ಭಾವುಕನಾಗಿ ಕುಳಿತಿದ್ದೆ. ಈ ಸಂದರ್ಭದಲ್ಲಿ ನನ್ನ ಬಳಿ ಬಂದ ವಿರಾಟ್ ಕೊಹ್ಲಿ ಕೈ ದಾರವನ್ನು ನನಗೆ ನೀಡಿದರು. ಕೊಹ್ಲಿಗೆ ಅವರ ತಂದೆ ಪ್ರೀತಿಯಿಂದ ನೀಡಿದ್ದ ಆ ಕೈ ದಾರವನ್ನು ನನಗೆ ಉಡುಗೊರೆಯನ್ನಾಗಿ ನೀಡಿದ್ದರು. ಆ ಸಂದರ್ಭದಲ್ಲಿ ನನಗೆ ಕಣ್ಣೀರನ್ನು ತಡೆಯಲಾಗಲಿಲ್ಲ' ಎಂದು ಸಚಿನ್ ತೆಂಡೂಲ್ಕರ್ ಅಂದು ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ.

ಸ್ವಲ್ಪ ಸಮಯದ ನಂತರ ಉಡುಗೊರೆಯನ್ನು ಹಿಂದಿರುಗಿಸಿದ ಸಚಿನ್
'ವಿರಾಟ್ ಕೊಹ್ಲಿ ಉಡುಗೊರೆಯಾಗಿ ನೀಡಿದ್ದ ಆ ಕೈ ದಾರವನ್ನು ಸ್ವಲ್ಪ ಸಮಯದವರೆಗೆ ನನ್ನ ಬಳಿಯೇ ಇಟ್ಟುಕೊಂಡಿದ್ದೆ. ನಂತರ ಅದನ್ನು ವಿರಾಟ್ ಕೊಹ್ಲಿಗೆ ವಾಪಸ್ ನೀಡಿದೆ. ಇದು ತಂದೆಯಿಂದ ನಿನಗೆ ಬಂದಿರುವ ವಿಶೇಷವಾದ ಉಡುಗೊರೆ ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಹೀಗಾಗಿ ಈ ವಿಶೇಷ ಉಡುಗೊರೆ ನಿನ್ನ ಬಳಿಯೇ ಇರಲಿ, ಈ ಕೈ ದಾರ ನಿನ್ನದು ಮಾತ್ರ, ಬೇರೆ ಯಾರಿಗೂ ಸೇರುವುದಿಲ್ಲ, ಇದನ್ನು ನೀವೇ ಇಟ್ಟುಕೊಳ್ಳಬೇಕು ಎಂದಿದ್ದೆ. ಹಾಗೂ ಆ ಘಟನೆ ನನಗೆ ಯಾವಾಗಲೂ ಅದ್ಬುತ ನೆನಪಾಗಿಯೇ ಉಳಿಯಲಿದೆ' ಎಂದು ಸಚಿನ್ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ.

ಕೊಹ್ಲಿ ಕೂಡ ಈ ವಿಶೇಷ ದಾರದ ಬಗ್ಗೆ ಈ ಹಿಂದೆ ಮಾತನಾಡಿದ್ದರು
ಸದ್ಯ ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿ ಉಡುಗೊರೆಯಾಗಿ ನೀಡಲು ಬಂದಿದ್ದ ಕೈ ದಾರದ ಕುರಿತು ಮೆಲುಕು ಹಾಕಿದ್ದು, ಇದೇ ಕೈ ದಾರದ ಕುರಿತು ಈ ಹಿಂದೆ ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಅವರು ಕೂಡಾ ಮಾತನಾಡಿದ್ದರು. ಭಾರತೀಯ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ಕೈ ದಾರಗಳನ್ನು ಕಟ್ಟಲಾಗುತ್ತದೆ, ಅದೇ ರೀತಿ ತನಗೆ ತನ್ನ ತಂದೆ ಈ ವಿಶೇಷ ದಾರವನ್ನು ನೀಡಿದ್ದರು ಹಾಗೂ ಅದನ್ನು ತಾನು ಸಚಿನ್ ತೆಂಡೂಲ್ಕರ್ ಅವರಿಗೆ ಉಡುಗೊರೆಯನ್ನಾಗಿ ನೀಡಲು ಮುಂದಾಗಿದ್ದೆ, ಅದಕ್ಕಿಂತ ವಿಶೇಷವಾದ ಉಡುಗೊರೆ ಬೇರೆ ಯಾವುದೂ ಇಲ್ಲ ಎಂದು ತನಗೆ ಎನಿಸಿತ್ತು ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications