ಹಿಟ್‌ಮ್ಯಾನ್ ರೋಹಿತ್ ಶರ್ಮಾರ 5 ಅವಿಸ್ಮರಣೀಯ ಏಕದಿನ ಪಂದ್ಯಗಳು

ಬೆಂಗಳೂರು, ಅಕ್ಟೋಬರ್ 22: ಏಕದಿನ ಕ್ರಿಕೆಟ್ ನಲ್ಲಿ ಅಧಿಕ ರನ್ ಗಳಿಸಿದ ವಿಶ್ವದ ಆಟಗಾರರಲ್ಲಿ ಇಂದಿಗೂ ಅಗ್ರ ಸ್ಥಾನದಲ್ಲಿ ನಿಲ್ಲುವವರು ರೋಹಿತ್ ಶರ್ಮಾ. ಭಾನುವಾರ (ಅಕ್ಟೋಬರ್ 21) ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲೂ ರೋಹಿತ್ ದಾಖಲೆಗಳನ್ನು ಬರೆದಿದ್ದರು.
ಪ್ರವಾಸಿ ವಿಂಡೀಸ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್ ಅಮೋಘ ಜಯ ಸಾಧಿಸಿತ್ತು. ಈ ವೇಳೆ 152 ರನ್ ಸಿಡಿಸಿದ್ದ ರೋಹಿತ್, 20ನೇ ಏಕದಿನ ಶತಕವನ್ನೂ ಪೂರೈಸಿಕೊಂಡಿದ್ದರು.
ಏಕದಿನದಲ್ಲಿ 264 ರನ್ ಗಳಿಸಿರುವ ರೋಹಿತ್ ವಿಶ್ವದ ಅಧಿಕ ರನ್ ಸರದಾರರಲ್ಲಿ ಮೊದಲಿನವರು. 3 ಬಾರಿ 200ಕ್ಕೂ ಹೆಚ್ಚು ರನ್ ಗಳಿಸಿರುವ ಶರ್ಮಾ 6 ಬಾರಿ 150 ರನ್ ಗಡಿ ದಾಟಿಸಿದ್ದಾರೆ. ಆಕರ್ಷಕ ಬ್ಯಾಟಿಂಗ್ ಮೂಲಕ ಅವಿಸ್ಮರಣೀಯವಾಗಿ ಉಳಿಯುವ ರೋಹಿತ್ ಅಪರೂಪದ ಪಂದ್ಯಗಳ ಮಾಹಿತಿ ಇಲ್ಲಿದೆ.

1. ಭರ್ಜರಿ 264 ರನ್
ಕ್ರಿಕೆಟ್ ಬದುಕಿನಲ್ಲಿ ಒಮ್ಮೆಯಾದ್ರೂ ದ್ವಿಶತಕ ಬಾರಿಸಿ ಅದನ್ನು ಸಂಭ್ರಮಿಸಬೇಕು ಅಂತ ಕಾಯೋರಿದ್ದಾರೆ. ಅಂಥದ್ದರಲ್ಲಿ ರೋಹಿತ್ ಬರೋಬ್ಬರಿ ಮೂರು ಸಾರಿ 200ಕ್ಕೂ ಹೆಚ್ಚು ಏಕದಿನ ರನ್ ಗಳಿಸಿದ್ದಾರೆ. 2014ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶರ್ಮಾ 264 ರನ್ ಬಾರಿಸಿದ್ದರು. ಇದರಲ್ಲಿ ಭಾರತ 153 ರನ್ ಜಯ ಗಳಿಸಿತ್ತು.

2. ಮೂರನೇ ದ್ವಿಶತಕ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಮೊದಲ ದ್ವಿಶತಕ (209) ಬಾರಿಸಿದ್ದರಲ್ಲದೆ ದ್ವಿಶತಕ ಬಾರಿಸಿದ ವಿಶ್ವದ ಮೂರನೇ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಇದಕ್ಕೂ ಮುನ್ನ ಭಾರತೀಯರೇ ಆದ ಸಚಿನ್ ತೆಂಡೂಲ್ಕರ್ (200 ರನ್ 2010), ವೀರೇಂದ್ರ ಸೆಹ್ವಾಗ್ (219 ರನ್ 2011) ದ್ವಿಶತಕ ಬಾರಿಸಿದ್ದರು. ರೋಹಿತ್ ಮೊದಲ ದ್ವಿಶತಕ ಬಾರಿಸಿದ್ದಾಗಲೂ ಭಾರತ 57 ರನ್ ಗಳಿಂದ ಗೆದ್ದಿತ್ತು.

3. ಇಂಗ್ಲೆಂಡ್ ವಿರುದ್ಧ 137 ರನ್
ಇಂಗ್ಲೆಂಡ್ ನ ನಾಟಿಂಗ್ಹ್ಯಾಮ್ ನಲ್ಲಿ 2018ರಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಕುಲದೀಪ್ ಮಾರಕ ದಾಳಿಯ (25 ರನ್ ಗೆ 6 ವಿಕೆಟ್) ಹೊರತಾಗಿಯೂ ಇಂಗ್ಲೆಂಡ್ 268 ರನ್ ಪೇರಿಸಿತ್ತು. ಆದರೆ ಭಾರತ 40.1 ಓವರ್ ನಲ್ಲಿ ಗೆಲುವಿನ ಗುರಿ ದಾಟಿತ್ತು. ಈ ವೇಳೆ ಶರ್ಮಾ 15 ಬೌಂಡರಿ, 4 ಸಿಕ್ಸರ್ ಸೇರಿ 137 ರನ್ ಚಚ್ಚಿದ್ದರು.

4. ಬಾಂಗ್ಲಾ ವಿರುದ್ಧವೂ ಅದೇ ಸ್ಪೋಟಕ ಬ್ಯಾಟಿಂಗ್
ಇಂಗ್ಲೆಂಡ್ ವಿರುದ್ಧ 137 ರನ್ ಬಾರಿಸುವುದಕ್ಕೂ ಮುನ್ನ ರೋಹಿತ್, 2015ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ನಡೆದಿದ್ದ ಪಂದ್ಯದಲ್ಲೂ ಬಾಂಗ್ಲಾ ದೇಶದ ವಿರುದ್ಧ 137 ರನ್ ಗಳಿಸಿದ್ದರು. ಭಾರತ ಇದರಲ್ಲಿ 109 ರನ್ ಜಯ ಸಾಧಿಸಿತ್ತು.

5. ವಿಂಡೀಸ್ ವಿರುದ್ಧ ಆಕರ್ಷಕ 86 ರನ್
ವೆಸ್ಟ್ ಇಂಡೀಸ್ ವಿರುದ್ಧ ಭಾರತ ಜಯ ಸಾಧಿಸಿದ ಅಪರೂಪದ ಪಂದ್ಯಗಳಲ್ಲಿ ಒಂದಿದು. ಆಂಟಿಗುವಾದಲ್ಲಿ 2011ರಲ್ಲಿ ವೆಸ್ಟ್ ಇಂಡೀಸ್ ತಂಡ ಆ್ಯಂಡ್ರೆ ರಸೆಲ್ 92 ರನ್ ನೆರವಿನಿಂದ ವಿಂಡೀಸ್ 8 ವಿಕೆಟ್ ಕಳೆದು 225 ರನ್ ಸೇರಿಸಿತ್ತು. ಪ್ರಮುಖ ಆಟಗಾರರೆಲ್ಲಾ ಪೆವಿಲಿಯನ್ ಕಡೆ ಸಾಗಿ ಭಾರತ ಸೋಲಿನತ್ತ ಮುಖ ಮಾಡಿತ್ತು. ಆ ವೇಳೆ ಭಾರತಕ್ಕೆ ಬಲವಾಗಿ ನಿಂತ ಶರ್ಮಾ 86 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಭಾರತ 3-0ಯಿಂದ ಆ ಏಕದಿನ ಸರಣಿ ಜಯಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications