ಟೀಮ್ ಇಂಡಿಯಾಗೆ ಗೆಲ್ಲುವ ನಂಬಿಕೆ ಹೆಚ್ಚಿರುವುದು ಆ ಒಬ್ಬನಿಂದಲೇ ಎಂದ ನಾಯಕ ಕೆಎಲ್ ರಾಹುಲ್

ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಈಗಾಗಲೇ ಹರಿಣಗಳ ವಿರುದ್ಧ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1 - 2 ಅಂತರದಿಂದ ಹೀನಾಯ ಸೋಲನ್ನು ಅನುಭವಿಸಿ ಮುಖಭಂಗಕ್ಕೆ ಒಳಗಾಗಿದೆ. ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲಿಗೆ ನಡೆದ ಟೆಸ್ಟ್ ಸರಣಿಯಲ್ಲಿ ಸೋಲನುಭವಿಸಿರುವ ಟೀಮ್ ಇಂಡಿಯಾ ಇದೀಗ ಹರಿಣಗಳ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿ ಜನವರಿ 19ರಂದು ಬೊಲ್ಯಾಂಡ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಥಮ ಏಕದಿನ ಪಂದ್ಯದ ಮೂಲಕ ಆರಂಭವಾಗಲಿದೆ.
ಇನ್ನು ಈ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಬಿಸಿಸಿಐ ಟೀಮ್ ಇಂಡಿಯಾವನ್ನು ಪ್ರಕಟಿಸಿದ ಸಂದರ್ಭದಲ್ಲಿ ಭಾರತ ಏಕದಿನ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿಯಿಂದ ರೋಹಿತ್ ಶರ್ಮ ಹೆಗಲಿಗೆ ಹಾಕಿತ್ತು. ಆದರೆ ರೋಹಿತ್ ಶರ್ಮಾ ಪ್ರವಾಸ ಆರಂಭವಾಗುವುದಕ್ಕೂ ಮುನ್ನ ನಡೆಸುತ್ತಿದ್ದ ಅಭ್ಯಾಸದ ವೇಳೆ ಗಾಯದ ಸಮಸ್ಯೆಗೊಳಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಬಿದ್ದರು. ಹೀಗಾಗಿ ರೋಹಿತ್ ಶರ್ಮಾ ನಿಭಾಯಿಸಬೇಕಿದ್ದ ಭಾರತ ಏಕದಿನ ತಂಡದ ನಾಯಕತ್ವದ ಜವಾಬ್ದಾರಿಯನ್ನು ಇದೀಗ ಕೆಎಲ್ ರಾಹುಲ್ ಹೊತ್ತುಕೊಂಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾಗ ಕೆಎಲ್ ರಾಹುಲ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಸೋಲನುಭವಿಸಿತ್ತು. ಹೀಗೆ ತನ್ನ ನಾಯಕತ್ವದ ಮೊದಲನೇ ಪಂದ್ಯದಲ್ಲಿಯೇ ಸೋತಿರುವ ಕೆಎಲ್ ರಾಹುಲ್ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಗೆಲ್ಲಿಸುವುದರ ಮೂಲಕ ಕಮ್ ಬ್ಯಾಕ್ ಮಾಡಬೇಕಿದೆ. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ನಾಯಕ ಕೆಎಲ್ ರಾಹುಲ್ ಮಾಧ್ಯಮಗೋಷ್ಠಿಯೊಂದರಲ್ಲಿ ಮಾತನಾಡಿದ್ದು, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕುರಿತಾಗಿ ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ಕೊಹ್ಲಿ ಕುರಿತು ರಾಹುಲ್ ಹೇಳಿದ್ದಿಷ್ಟು
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‍ಗೆ ಎಷ್ಟರ ಮಟ್ಟಿಗಿನ ಪ್ರಾತಿನಿಧ್ಯವನ್ನು ನೀಡುತ್ತಾರೆ ಮತ್ತು ಟೆಸ್ಟ್ ಕ್ರಿಕೆಟ್‍ನಲ್ಲಿ ಎಷ್ಟು ಉತ್ಸುಕರಾಗಿ ಕಣಕ್ಕಿಳಿಯುತ್ತಾರೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಪ್ರಸ್ತುತ ಟೀಮ್ ಇಂಡಿಯಾದಲ್ಲಿ ಗೆಲ್ಲುವ ನಿರೀಕ್ಷೆ ಹೆಚ್ಚಿರುವುದು ನಾಯಕ ವಿರಾಟ್ ಕೊಹ್ಲಿಯಿಂದಲೇ ಎಂದು ಕೆಎಲ್ ರಾಹುಲ್ ವಿರಾಟ್ ಕೊಹ್ಲಿ ನಾಯಕತ್ವವನ್ನು ಹೊಗಳಿದ್ದಾರೆ.

ಕೊಹ್ಲಿ ಹಾದಿಯಲ್ಲೇ ನಾಯಕತ್ವ ಮಾಡಲಿದ್ದೇನೆ ಎಂದ ರಾಹುಲ್
ಇನ್ನೂ ಮುಂದುವರಿದು ವಿರಾಟ್ ಕೊಹ್ಲಿ ಕುರಿತು ಮಾತನಾಡಿರುವ ಕೆ ಎಲ್ ರಾಹುಲ್ ಟೀಮ್ ಇಂಡಿಯಾದ ಆಟಗಾರರಲ್ಲಿನ ಅತ್ಯುತ್ತಮ ಪ್ರತಿಭೆಯನ್ನು ಹೊರತರುವಂತಹ ಸಾಮರ್ಥ್ಯವಿರುವ ಅದ್ಭುತ ಆಟಗಾರ ಕೊಹ್ಲಿ, ಈ ವಿಷಯವನ್ನು ನಾನು ಕೊಹ್ಲಿ ಅವರನ್ನು ನೋಡಿ ಕಲಿತಿದ್ದೇನೆ ಹಾಗೂ ಅದೇ ರೀತಿ ನಾಯಕತ್ವವನ್ನು ನಿಭಾಯಿಸುತ್ತೇನೆ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಭಾರತ vs ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ವೇಳಾಪಟ್ಟಿ
ಜನವರಿ 19ರಿಂದ 3 ಪಂದ್ಯಗಳ ಏಕದಿನ ಸರಣಿ ಶುರುವಾಗಲಿದ್ದು ಅದರ ವೇಳಾ ಪಟ್ಟಿ ಈ ಕೆಳಕಂಡಂತಿದೆ. .
ಮೊದಲ ಏಕದಿನ: ಜನವರಿ 19 , ಬೆಟ್ವೇ, ಸಮಯ - 2.00 PM
ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM
ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್ ಟೌನ್, ಸಮಯ - 2.00 PM
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications