ಕ್ರಿಕೆಟ್‌ನಲ್ಲಿ ನಿವೃತ್ತಿಯನ್ನು ನೀಡಿ ಬಳಿಕ ವಾಪಸಾಗುವುದು ಹೊಸತೇನಲ್ಲ. ಈ ಹಿಂದಿನಿಂದಲೂ ಇದು ನಡದುಕೊಂಡು ಬಂದಿದೆ. ಆಟಗಾರರು ಒಮ್ಮೆ ನಿವೃತ್ತಿಯನ್ನು ಘೋಷಣೆ ಮಾಡಿದ ಬಳಿಕ ನಾನಾ ಕಾರಣಗಳಿಂದಾಗಿ ಕಮ್‌ಬ್ಯಾಕ್ ಮಾಡಿರುವ ದೃಷ್ಟಾಂತಗಳು ಸಾಕಷ್ಟು ಇವೆ. ಕೆಲ ಸಂದರ್ಭಗಳಲ್ಲಿ ಸ್ವತಃ ಆಟಗಾರರೇ ನಿರ್ಧಾರವನ್ನು ಬದಲಾಯಿಸಿಕೊಂಡಿದ್ದರೆ ಇನ್ನೂ ಕೆಲ ಆಟಗಾರರನ್ನು ತಂಡಗಳಿಗೆ ಸಂಬಂಧಿಸಿದವರು ಮನವೊಲಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿರುತ್ತಾರೆ.
ಇಂಥಾ ಘಟನೆಗಳು ಅಪರೂಪಕ್ಕೆ ನಡೆದರೂ ಹೊಸತೇನೂ ಅಲ್ಲ ಎನ್ನುವುದು ಇದೇ ಕಾರಣಕ್ಕೆ. ಪಾಕಿಸ್ತಾನದ ಮಾಝಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಇದನ್ನು ಒಂದಕ್ಕೂ ಹೆಚ್ಚು ಮಾಡಿ ಮಾಡಿ ಸುದ್ದಿಯಾಗಿದ್ದರು. ಕೆಲ ಆಟಗಾರರು ತಮ್ಮಲ್ಲಿ ಕ್ರಿಕೆಟ್ ಸಾಕಷ್ಟು ಉಳಿದುಕೊಂಡಿದ್ದರೂ ಇನ್ಯಾವುದೋ ಅಸಮಾದಾನಕ್ಕೆ ಅಥವಾ ವೈಯಕ್ತಿಕ ಕಾರಣಗಳಿಗೆ ಬೇಗನೆ ನಿವೃತ್ತಿ ಪ್ರಕಟಿಸಿರುತ್ತಾರೆ. ಅಂಥಾ ಆಟಗಾರರ ಅಗತ್ಯವನ್ನು ತಂಡ ಪರಿಗಣಿಸಿ ತಂಡಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವಂತೆ ಮಾಡುವುದು ಇಂಥಾ ಪ್ರಕರಣಗಳಲ್ಲಿ ಹೆಚ್ಚಾಗಿರುತ್ತದೆ ಎಂಬುದು ಗಮನಾರ್ಹ.

ಈ ವರ್ಷ ಇಬ್ಬರು ಆಟಗಾರರು ಹೀಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ ಬಳಿಕ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಹಾಗಾದರೆ ಆ ಇಬ್ಬರು ಆಟಗಾರರು ಯಾರು? ಮುಂದೆ ಓದಿ..
ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಮೊಯೀನ್ ಅಲಿ 2021ರ ಸೆಪ್ಟೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಆದರೆ ಪ್ರಸ್ತುತ ಆಶಸ್ ಸರಣಿಗಾಗಿ ಇಂಗ್ಲೆಂಡ್ ತಂಡ ಅವರನ್ನು ಮತ್ತೆ ಟೆಸ್ಟ್ ತಂಡಕ್ಕೆ ವಾಪಸ್ ಆಗುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್ ತಂಡದ ಪ್ರಮುಖ ಸ್ಪಿನ್ನರ್ ಜಾಕ್ ಲೀಚ್ ಗಾಯದಿಂದಾಗಿ ತಂಡದಿಂದ ಹೊರಬಿದ್ದ ಕಾರಣ ಪ್ರತಿಷ್ಠಿತ ಆಶಸ್ ಸರಣಿಯಲ್ಲಿ ಭಾಗವಹಿಸಲು ನಿವೃತ್ತಿ ವಾಪಸ್ ಪಡೆಯುವಂತೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊಯೀನ್ ಅಲಿ ಬಳಿ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಮೊಯೀನ್ ಅಲಿ ಮತ್ತೆ ಅಂತಾರಾಷ್ಟ್ರೀಯ ಟೆಸ್ಟ್ ಮಾದರಿಗೆ ಕಮ್‌ಬ್ಯಾಕ್ ಮಾಡಿದ್ದಾರೆ.
ಅಂದಹಾಗೆ ಮೊಯಿನ್ ಅಲಿ ಇಂಗ್ಲೆಂಡ್ ಟಿ20 ಹಾಗೂ ಏಕದಿನ ತಂಡದಲ್ಲಿ ಈಗಾಗಲೇ ಸಕ್ರಿಯವಾಗಿದ್ದು ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಮತ್ತೆ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದು ಆಶಸ್ ಸರಣಿಯ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಲಾರ್ಡ್ಸ್ ಪಂದ್ಯದಲ್ಲಿ ಹೊರಗುಳಿದಿದ್ದ ಅವರು ಹೆಡಿಂಗ್ಲೆ ಟೆಸ್ಟ್‌ನಲ್ಲಿ ಕಣಕ್ಕಿಳಿಸಿದ್ದಾರೆ.
ಈ ಪಟ್ಟಿಯಲ್ಲಿ ಬರುವ ಮತ್ತೋರ್ವ ಆಟಗಾರ ಬಾಂಗ್ಲಾದೇಶ ತಂಡದ ನಾಯಕನಾಗಿದ್ದ ತಮಿಮ್ ಇಕ್ಬಾಲ್. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ನಾಯಕನಾಗಿ ಮುನ್ನಡೆಸಿದ್ದ ತಮಿಮ್ ಇಕ್ಬಾಲ್ ಈ ಪಂದ್ಯದಲ್ಲಿ ಬಾಂಗ್ಲಾದೇಶ ಮೊದಲ ಪಂದ್ಯದಲ್ಲಿ ಅಫ್ಘನ್ ಪಡೆಯ ವಿರುದ್ಧ ಸೋಲು ಕಂಡ ಬಳಿಕ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಇದ್ದಕ್ಕಿದ್ದಂತೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಮಾಧ್ಯಮಗೋಷ್ಠಿ ಕರೆದು ಇದ್ದಕ್ಕಿದ್ದಂತೆಯೇ ಬಾಂಗ್ಲಾದೇಶ ನಾಯಕ ತಮಿಮ್ ಇಕ್ಬಾಲ್ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದ್ದರು.
ತಮಿಮ್ ಇಕ್ಬಾಲ್ ಅವರ ಈ ನಿರ್ಧಾರ ತಂಡದ ಅಭಿಮಾನಿಗಳಿಗೆ ಮಾತ್ರವಲ್ಲದೆ ಮ್ಯಾನೇಜ್‌ಮೆಂಟ್‌ಗೂ ಆಘಾತ ನೀಡಿತ್ತು. ಈ ಹಿನ್ನೆಲೆಯಲ್ಲಿ ತುರ್ತು ಸಭೆ ಕರೆದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಮಿಮ್ ಇಕ್ಬಾಲ್ ನಿರ್ವೃತ್ತಿ ವಾಪಸ್ ಪಡೆಯಲು ಮನವಿ ಮಾಡುವ ನಿರ್ಧಾರಕ್ಕೆ ಬಂದಿತ್ತು. ವಿಶ್ವಕಪ್‌ಗೆ ಇನ್ನು ಖೇವಮ ಮೂರು ತಿಂಗಳು ಇರುವಾಗ ತಂಡದ ನಾಯಕನ ಈ ನಿರ್ಧಾರ ಎಲ್ಲರಿಗೂ ಆಘಾತ ನೀಡಿತ್ತು. ಈ ಹಿನ್ನೆಲೆಯಲ್ಲಿ ಸ್ವತಃ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಈ ವಿಚಾರವಾಗಿ ಮಧ್ಯಪ್ರವೇಶಿಸಿ ತಮಿಮ್ ಇಕ್ಬಾಲ್ ಜೊತೆಗೆ ಮಾತುಕತೆ ನಡೆಸಿದ್ದು ಮನವೊಲಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ತಮಿಮ್ ಇಕ್ಬಾಲ್ ತಮ್ಮ ನಿವೃತ್ತಿ ನಿರ್ಧಾರವನ್ನು ವಾಪಸ್ ಪಡೆದುಕೊಂಡಿದ್ದಾರೆ.