2023ರ ವಿಶ್ವಕಪ್‌ನಲ್ಲಿ ಈ ಇಬ್ಬರೇ ದೊಡ್ಡ ಹೆಸರುಗಳು; ಇವರಿಂದ ಉತ್ತಮ ಪ್ರದರ್ಶನದ ಅವಶ್ಯಕತೆ ಇದೆ; ಶೋಯೆಬ್ ಅಖ್ತರ್
2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ಸಮೀಪಿಸುತ್ತಿದ್ದು, ಇದಕ್ಕಾಗಿ ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಕಾದು ಕುಳಿತಿದ್ದಾರೆ. ಈ ಬಾರಿ ಭಾರತದಲ್ಲೇ ಐಸಿಸಿ ಟೂರ್ನಿ ನಡೆಯಲಿರುವುದರಿಂದ ಭಾರತದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಈ ಕುರಿತು ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಭಾರತದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕ್ರಿಕೆಟ್ ಜಗತ್ತಿನ ದೊಡ್ಡ ಹೆಸರುಗಳಾಗಿದ್ದು, 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕಾಗಿ ಅವರಿಂದ ಉತ್ತಮ ಪ್ರದರ್ಶನದ ಅಗತ್ಯತೆ ಇದೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ತಿಳಿಸಿದ್ದಾರೆ.
ಸಂವಾದದಲ್ಲಿ ಮಾತನಾಡಿದ ಶೋಯೆಬ್ ಅಖ್ತರ್, ಕಳೆದ ಎರಡು ವರ್ಷಗಳಿಂದ ಭಾರತ ಸ್ಥಿರವಾದ ತಂಡವನ್ನು ಹೊಂದಿಲ್ಲ. ಯಾರು ಎಲ್ಲಿ ಆಡುತ್ತಾರೆ ಎಂದು ಯಾರಿಗೂ ತಿಳಿದಿಲ್ಲ. ಇದು ನನಗೆ ತುಂಬಾ ವಿಚಿತ್ರವಾಗಿ ಕಾಣುತ್ತಿದೆ ಎಂದರು.

ಮಾತು ಮುಂದುವರೆಸಿದ ಶೋಯೆಬ್ ಅಖ್ತರ್, "ನಾನು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬೆಂಬಲಕ್ಕೆ ಇದ್ದೇನೆ. ಆದರೆ, ಅವರು ಪ್ರತಿದಿನ ಉತ್ತಮ ಪ್ರದರ್ಶನ ನೀಡಬೇಕು. ಏಕೆಂದರೆ ಅವರು ದೊಡ್ಡ ಆಟಗಾರರು ಎಂದು ಗುರುತಿಸಿಕೊಂಡಿದ್ದಾರೆ," ಎಂದು ಹೇಳಿದರು.
ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ದೊಡ್ಡ ಹೆಸರುಗಳಾಗಿರುವುದರಿಂದ, ವಿಶ್ವಕಪ್‌ನಲ್ಲಿ ಅವರಿಂದ ನಿರೀಕ್ಷೆ ಹೆಚ್ಚಾಗಿರುತ್ತದೆ. ಏಕೆಂದರೆ, ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಅಸ್ಥಿರವಾಗಿದೆ ಎಂದು ಶೋಯೆಬ್ ಅಖ್ತರ್ ಮುಕ್ತವಾಗಿ ಮಾತನಾಡಿದರು.
ಭಾರತ ತಂಡದ ಪರ ಅನುಭವಿ ಆಟಗಾರನಾಗಿರುವ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ 13,000 ರನ್‌ಗಳ ಗಡಿ ದಾಟಿದ ಐದನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಶೀಘ್ರದಲ್ಲೇ ಪಾತ್ರರಾಗಲಿದ್ದಾರೆ.

"ಈ ಇಬ್ಬರು ಆಟಗಾರರು ಜವಾಬ್ದಾರಿ ತೆಗೆದುಕೊಳ್ಳಬೇಕು. ಯುವ ಆಟಗಾರರಿಗೆ ಅವರ ಆಟವ ಅವರು ಆಡಲು ಬಿಡಬೇಕು. ಭಾರತದ ವಿಶ್ವಕಪ್ ಟ್ರೋಫಿ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪಾತ್ರ ಪ್ರಮುಖವಾಗಿದೆ," ಎಂದರು.
"ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಆತಿಥೇಯ ಭಾರತ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿವೆ," ಎಂದು ಶೋಯೆಬ್ ಅಖ್ತರ್ ತಿಳಿಸಿದ್ದಾರೆ.
ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸೆಣೆಸಾಟದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್, ಇದು ವಿಶ್ವಕಪ್ ಟೂರ್ನಿಯ ಹೈಲೈಟ್ ಆಗಿರಲಿದೆ ಎಂದಿದ್ದಾರೆ.
2023ರ ವಿಶ್ವಕಪ್‌ನಲ್ಲಿ ಭಾರತದ ಮೊದಲ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಏಕದಿನ ವಿಶ್ವಕಪ್‌ಗೆ ಭಾರತ ತನ್ನ 15 ಸದಸ್ಯರ ತಂಡವನ್ನು ಇತ್ತೀಚೆಗೆ ಪ್ರಕಟಿಸಿದೆ.
2023ರ ಏಕದಿನ ವಿಶ್ವಕಪ್ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications