ಟೀಮ್ ಇಂಡಿಯಾದ ಅನುಭವಿ ಆಟಗಾರ ಯುಜುವೇಂದ್ರ ಚಾಹಲ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಈವರೆಗೆ ಕೇವಲ ಒಂದು ಪಂದ್ಯದಲ್ಲಿ ಮಾತ್ರವೇ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಚಾಹಲ್ ಚಂಪುರ್ಣವಾಗಿ ಬೆಂಚ್ ಕಾದಿದ್ದು ಅವರಿಗೆ ಆಡುವ ಅವಕಾಶವೇ ದೊರೆತಿರಲಿಲ್ಲ. ಚಾಹಲ್ ಬದಲಿಗೆ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಹಾಗೂ ಕುಲ್‌ದೀಪ್ ಯಾದವ್‌ಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವಕಾಶ ದೊರೆತಿತ್ತು.
ಆದರೆ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಚಾಹಲ್ ಆಡುವ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದರು. ಈ ಸರಣಿಯ ಎಲ್ಲ ಐದು ಪಂದ್ಯಗಳಲ್ಲಿಯೂ ಚಾಹಲ್‌ಗೆ ಅವಕಾಶ ದೊರೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ವಿಂಡೀಸ್ ಪ್ರವಾಸದಲ್ಲಿ ತಮಗೆ ಈವರೆಗೆ ನಿರೀಕ್ಷಿತ ಪ್ರಮಾಣದಲ್ಲಿ ಅವಕಾಶ ದೊರೆಯದ ಬಗ್ಗೆ ಸ್ವತಃ ಚಾಹಲ್ ಮಾತನಾಡಿದ್ದು ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಎರಡನೇ ಪಂದ್ಯಕ್ಕೂ ಮುನ್ನ ಮಾತನಾಡಿದ ಚಾಹಲ್ "ತಂಡದ ಸಂಯೋಜನೆ ನಮ್ಮ ಮೊದಲ ಆದ್ಯತೆ ಹಾಗೂ ಅದೇನೂ ಹೊಸತಲ್ಲ" ಎಂದು ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ವಿವರಿಸಿದ್ದಾರೆ ಚಾಹಲ್. "ಏಳನೇ ಕ್ರಮಾಂಕದಲ್ಲಿ ನಾವು ಸಾಮಾನ್ಯವಾಗಿ ರವೀಂದ್ತ ಜಡೇಜಾ ಅಥವಾ ಅಕ್ಷರ್ ಪಟೇಲ್ ಅವರನ್ನು ಕಣಕ್ಕಿಳಿಸುತ್ತೇವೆ. ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡುತ್ತಿದ್ದಾಗ ಮಾತ್ರವೇ ಮೂವರು ಸ್ಪಿನ್ನರ್‌ಗಳನ್ನು ಆಡಿಸುತ್ತೇವೆ.ಕುಲ್‌ದೀಪ್ ನಿಜಕ್ಕೂ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಹಾಗಾಗಿ ತಂಡ ಅವರ ಬೆನ್ನಿಗೆ ನಿಂತಿದೆ. ನಾನು ಕೂಡ ನೆಟ್ಸ್‌ನಲ್ಲಿ ಕಠಿಣ ಪರಿಶ್ರಮಪಡುತ್ತಿದ್ದು ಅವಕಾಶ ದೊರೆತಾದ ಬಾಚಿಕೊಳ್ಳುತ್ತೇನೆ" ಎಂದಿದ್ದಾರೆ.
"ನಾವು ವೃತ್ತಿಪರ ಆಟಗಾರರು. ನಾನು ಕೊನೆಯ ಬಾರಿಗೆ ಐಪಿಎಲ್‌ನಲ್ಲಿ ಆಡಿದ್ದು ಎರಡು ತಿಂಗಳ ಬಳಿಕ ಕಣಕ್ಕಿಳಿಯುತ್ತಿದ್ದೇನೆ. ಇದು ಸಿದ್ಧತೆಯ ಭಾಗ. ಕ್ರಿಕೆಟ್ ಅಂದರೆ ವೈಯಕ್ತಿಕ ಆಟ ಅಲ್ಲ, ಅದು ತಂಡದ ಆಟ. ಇಲ್ಲಿ ನೀವು ನಿಮ್ಮ ತಂಡಕ್ಕಾಗಿ ಆಡುತ್ತಿರುತ್ತೀರಿ. ಕೆಲ ಸಂದರ್ಭಗಳಲ್ಲಿ ಆಟಗಾರರು ಒಂದೆರಡು ಸರಣಿಗಳಿಂದ ಹೊರಗುಳಿದರೆ ಅವರು ತಂಡದಿಂದಲೇ ಹೊರಬಿದ್ದಿದ್ದಾರೆ ಎಂದು ಅರ್ಥವಲ್ಲ" ಎಂದಿದ್ದಾರೆ ಯುಜುವೇಂದ್ರ ಚಾಹಲ್.
"ನಾನು ನೀಲಿ ಜರ್ಸಿಯನ್ನು ಯಾವಾಗಲೂ ತೊಟ್ಟುಕೊಳ್ಳಲು ಬಹಳ ಹರ್ಷಪಡುತ್ತೇನೆ. ನಾನು ಮನೆಯಲ್ಲಿ ಸುಮ್ಮನೆ ಕುಳಿತಿಲ್ಲ. ತಂಡದ ಜೊತೆಗೆ ಪ್ರಯಾಣಿಸುತ್ತಿದ್ದೇನೆ. ನಾನು ಕೂಡ ತಂಡದ ಭಾಗ. ನಾನು ಚೆಸ್ ಆಡಿದ್ದೇನೆ ಅದು ವೈಯಕ್ತಿಕ ಆಟ. ಆದರೆ ಕ್ರಿಕೆಟ್ ಹಾಗಲ್ಲ. ಅದು ತಂಡದ ಆಟ. ಹದಿನೈದು ಆಟಗಾರರ ಪೈಕಿ ಕೇವಲ 11 ಆಟಗಾರರಿಗೆ ಮಾತ್ರ ಆಡುವ ಬಳಗದಲ್ಲಿ ಅವಕಾಶ ದೊರೆಯುತ್ತದೆ. ಈ ಹಿಂದಿನ ಕೆಲ ಸರಣಿಗಳಲ್ಲಿ ನಾನು ಆಡುತ್ತಿದ್ದಾಗ ಕುಲ್‌ದೀಪ್‌ಗೆ ಅವಕಾಶ ದೊರೆತಿರಲಿಲ್ಲ" ಎಂದಿದ್ದಾರೆ ಯುಜುವೇಂದ್ರ ಚಾಹಲ್.
ಭಾರತ ಹಾಗೂ ವೆಸ್ಟ್ ಇಂಡಿಸ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯ ಭಾನುವಾರ ನಡೆಯಲಿದೆ. ಗಯಾನದಲ್ಲಿ ಈ ಪಂದ್ಯ ಆಯೋಜನೆಯಾಘಲಿದ್ದು ಟೀಮ್ ಇಂಡಿಯಾ ಗೆಲುವಿನ ನಿರೀಕ್ಷೆಯಲ್ಲಿದೆ. ಮೊದಲ ಪಂದ್ಯದಲ್ಲಿ ಭಾರತ ಆಘಾತಕಾರಿ ರೀತಿಯಲ್ಲಿ ಸೋಲು ಅನುಭವಿಸಿದ ಬಳಿಕ ಸರಣಿಯಲ್ಲಿ ಸಮಬಲ ಸಾಧಿಸಲು ಇಂದಿನ ಪಂದ್ಯ ಗೆಲುವು ಮುಖ್ಯವಾಗಿದೆ.
ವೆಸ್ಟ್ ಇಂಡೀಸ್ ತಂಡ: ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್ (ನಾಯಕ), ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಜಾನ್ಸನ್ ಚಾರ್ಲ್ಸ್, ಶಿಮ್ರಾನ್ ಹೆಟ್ಮೆಯರ್, ರೊಮಾರಿಯೋ ಶೆಫರ್ಡ್, ಜೇಸನ್ ಹೋಲ್ಡರ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್, ಶಾಯ್ ಹೋಪ್, ರೋಸ್ಟನ್ ಚೇಸ್, ಓಶನ್ ಥಾಮಸ್, ಓಡಿಯನ್ ಸ್ಮಿತ್
ಭಾರತ ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್, ಯಶಸ್ವಿ ಜೈಸ್ವಾಲ್, ರವಿ ಬಿಷ್ಣೋಯ್, ಉಮ್ರಾನ್ ಮಲಿಕ್, ಅವೇಶ್ ಖಾನ್