ಐಪಿಎಲ್ 2020: ಚೆನ್ನೈvs ಬೆಂಗಳೂರು: ಸಿಎಸ್‌ಕೆ ವಿರುದ್ಧ ಆರ್‌ಸಿಬಿಗೆ ಭರ್ಜರಿ ಗೆಲುವು

ಐಪಿಎಲ್ 13ನೇ ಆವೃತ್ತಿಯ 25ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 37 ರನ್‌ಗಳ ಭರ್ಜರಿಯಾಗಿ ಗೆಲುವು ಸಾಧಿಸಿತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎಲ್ಲಾ ವಿಭಾಗಗಳಲ್ಲೂ ಭರ್ಜರಿ ಪ್ರದರ್ಶನ ನೀಡಿದ ಕೊಹ್ಲಿ ಪಡೆ ಮತ್ತೊಂದು ಗೆಲುವು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಪಡೆ 4 ವಿಕೆಟ್ ಕಳೆದುಕೊಂಡು ನಿಗದಿತ 20 ಓವರ್‌ಗಳಲ್ಲಿ 169 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಧೋನಿ ಪಡೆ ಟೂರ್ನಿಯಲ್ಲಿ 5ನೇ ಸೋಲುಕಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭದಲ್ಲಿ ಫಿಂಚ್ ವಿಕೆಟ್ ಕಳೆದುಕೊಂಡ ನಂತರ ಯುವ ಆಟಗಾರ ಪಡಿಕ್ಕಲ್ ಜೊತೆ ಸೇರಿದ ಕೊಹ್ಲಿ ನಿಧಾನವಾಗಿ ಇನ್ನಿಂಗ್ಸ್ ಬೆಳೆಸಲು ಆರಂಭಿಸಿದರು. ಬಳಿಕ ಪಡಿಕ್ಕಲ್ ಜೊತೆಗೆ ಡಿವಿಲಿಯರ್ಸ್ ಕೂಡ ಫೆವಿಲಿಯನ್ ಸೇರಿಕೊಂಡರು. ಆದರೆ ಕೊಹ್ಲಿ ತಂಡವನ್ನು ಕುಸಿತದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲದೆ ಅಂತಿಮ ಹಂತದಲ್ಲಿ ಭರ್ಜರಿಯಾಗಿ ಆಡುವ ಮೂಲಕ ರನ್ ವೇಗವನ್ನು ಹೆಚ್ಚಿಸಿದರು.

ಕೊಹ್ಲಿ ಭರ್ಜರಿ ಆಟ
ವಿರಾಟ್ ಕೊಹ್ಲಿ 53 ಎಸೆತಗಳನ್ನು ಎದುರಿಸಿ 90 ರನ್ ಗಳಿಸಿದರು. ಇದರಲ್ಲಿ ನಾಲ್ಕು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸೇರಿತ್ತು. ಡೆತ್ ಓವರ್‌ನಲ್ಲಿ ಕೊಹ್ಲಿಗೆ ಸಾಥ್ ನೀಡಿದ ಶಿವಮ್ ದುಬೆ 14 ಎಸೆತಗಳಲ್ಲಿ 22 ರನ್ ಬಾರಿಸಿ ಮಿಂಚಿದರು.

ಬೌಲಿಂಗ್ ವಿಭಾಗದ ಯಶಸ್ಸು
ಆರ್‌ಸಿಬಿ ನೀಡಿದ ಗುರಿಯನ್ನು ಬೆನ್ನತ್ತಿದ ಸಿಎಸ್‌ಕೆ ತಂಡಕ್ಕೆ ಆರಂಭಿಕ ಆಟಗಾರರಾದ ವಾಟ್ಸನ್ ಹಾಗೂ ಡೆಪ್ಲೆಸಿಸ್ ಸಾಥ್ ನೀಡಲಿಲ್ಲ. ಅಂಬಾಟಿ ರಾಯುಡು ಹಾಗೂ ಜಗದೀಶನ್ ಸ್ವಲ್ಪ ಹೋರಾಟವನ್ನು ನಡೆಸಿದರಾದರೂ ಆರ್‌ಸಿಬಿಯ ಬೌಲಿಂಗ್ ಮುಂದೆ ಆಟ ನಡೆಯಲಿಲ್ಲ. ಡೆತ್ ಓವರ್‌ನಲ್ಲಿ ಸಾಕಷ್ಟು ರನ್ ಬಿಟ್ಟುಕೊಡುವ ಅಭ್ಯಾಸ ಹೊಂದಿರುವ ಆರ್‌ಸಿಬಿ ಇಂದು ಸಂಪೂರ್ಣವಾಗಿ ನಿಯಂತ್ರಣ ಸಾಧಿಸಿತ್ತು. ಮಾತ್ರವಲ್ಲ ವಿಕೆಟ್‌ಗಳನ್ನೂ ಪಡೆದುಕೊಂಡಿತು. ಆರ್‌ಸಿಬಿಗೆ ಈ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ ಮೋರಿಸ್ ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಮೋಡಿ ಮಾಡಿದರು.

ಅಂಕಪಟ್ಟಿಯಲ್ಲಿ ಆರ್‌ಸಿಬಿ 4ನೇ ಸ್ಥಾನಕ್ಕೆ
ಈ ಪಂದ್ಯ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಆರು ಪಂದ್ಯಗಳನ್ನಾಡಿರುವ ಕೊಹ್ಲಿ ಪಡೆ ನಾಲ್ಕು ಗೆಲುವು ಹಾಗೂ ಎರಡು ಸೋಲು ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ 7 ಪಂದ್ಯಗಳಲ್ಲಿ 5ನೇ ಸೋಲು ಕಂಡಿದ್ದು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications