12 ಸಿಕ್ಸರ್ ಸಹಿತ ಶತಕ ಸಿಡಿಸಿ ಅಬ್ಬರಿಸಿದ ಮುರಳಿ ವಿಜಯ್!; ಆದರೂ ಹೀನಾಯವಾಗಿ ಸೋತ ತಂಡ

ಪ್ರಸ್ತುತ ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿ ಜರುಗುತ್ತಿದ್ದು, ಟೂರ್ನಿಯ 19ನೇ ಪಂದ್ಯದಲ್ಲಿ ಮುರಳಿ ವಿಜಯ್ ಅಬ್ಬರದ ಶತಕ ಸಿಡಿಸಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಹೌದು, ಕೊಯಮತ್ತೂರಿನ ಎಸ್ ಎನ್ ಆರ್ ಕಾಲೇಜು ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ನೆಲ್ಲೈ ರಾಯಲ್ ಕಿಂಗ್ಸ್ ಮತ್ತು ರೂಬಿ ತ್ರಿಚಿ ವಾರಿಯರ್ಸ್ ನಡುವಿನ ಪಂದ್ಯದಲ್ಲಿ ಮುರಳಿ ವಿಜಯ್ ಅಬ್ಬರಿಸಿದ್ದಾರೆ.
ನಿನ್ನೆ ( ಜುಲೈ 15 ) ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ರೂಬಿ ತ್ರಿಚಿ ವಾರಿಯರ್ಸ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ನೆಲ್ಲೈ ರಾಯಲ್ಸ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ನೆಲ್ಲೈ ರಾಯಲ್ ಕಿಂಗ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಶ್ರೀ ನಿರಂಜನ್ 5 ರನ್ ಮತ್ತು ಲಕ್ಷ್ಮೀಶ ಸೂರ್ಯಪ್ರಕಾಶ್ 18 ರನ್ ಕಲೆ ಹಾಕುವುದರ ಮೂಲಕ ತಂಡ ಆರಂಭಿಕ ಆಘಾತ ಅನುಭವಿಸಿತು. ಹೀಗೆ 3.4 ಓವರ್‌ಗಳಲ್ಲಿ 29 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ನೆಲ್ಲೈ ರಾಯಲ್ ಕಿಂಗ್ಸ್ ತಂಡಕ್ಕೆ ಆಸರೆಯಾದದ್ದು ಮೂರನೇ ವಿಕೆಟ್‍ಗೆ ಜತೆಯಾದ ಬಾಬಾ ಅಪರಾಜಿತ್ ಮತ್ತು ಸಂಜಯ್ ಯಾದವ್. ಈ ಜೋಡಿ ಅಜೇಯ 207 ರನ್‌ಗಳ ಬೃಹತ್ ಜತೆಯಾಟ ಆಡುವುದರ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ದೊಡ್ಡ ಪಾತ್ರವಹಿಸಿದರು.
ಬಾಬಾ ಅಪರಾಜಿತ್ 48 ಎಸೆತಗಳಲ್ಲಿ ಅಜೇಯ 96 ರನ್ ಕಲೆಹಾಕಿದರೆ ಸಂಜಯ್ ಯಾದವ್ 55 ಎಸೆತಗಳಲ್ಲಿ ಅಜೇಯ 103 ರನ್ ಕಲೆಹಾಕಿ ಶತಕ ಸಿಡಿಸಿ ಅಬ್ಬರಿಸಿದರು. ಈ ಮೂಲಕ ನೆಲ್ಲೈ ರಾಯಲ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 236 ರನ್ ಕಲೆಹಾಕಿ ಎದುರಾಳಿ ರೂಬಿ ತ್ರಿಚಿ ವಾರಿಯರ್ಸ್ ತಂಡಕ್ಕೆ 237 ರನ್‌ಗಳ ಬೃಹತ್ ಗುರಿಯನ್ನು ನೀಡಿತು.

ತ್ರಿಚಿ ವಾರಿಯರ್ಸ್ ಪರ ಅಬ್ಬರಿಸಿದ ಮುರಳಿ ವಿಜಯ್
ಇತ್ತ ನೆಲ್ಲೈ ರಾಯಲ್ ಕಿಂಗ್ಸ್ ತಂಡ ನೀಡಿದ್ದ ಬೃಹತ್ ಗುರಿಯನ್ನು ಬೆನ್ನತ್ತಿದ ರೂಬಿ ತ್ರಿಚಿ ವಾರಿಯರ್ಸ್ ತಂಡದ ಪರ ಆರಂಭಿಕ ಆಟಗಾರನಾಗಿ ಮುರಳಿ ವಿಜಯ್ ಕಣಕ್ಕಿಳಿದು 66 ಎಸೆತಗಳಲ್ಲಿ 121 ರನ್ ಚಚ್ಚಿ ಅಬ್ಬರಿಸಿದರು. ಒಂದೆಡೆ ತಂಡದ ಇತರೆ ಆಟಗಾರರು ವಿಕೆಟ್ ಒಪ್ಪಿಸುತ್ತಾ ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೆ, ಸಾಥ್ ಸಿಗದ ಮುರಳಿ ವಿಜಯ್ ಮಾತ್ರ ಏಕಾಂಗಿ ಹೋರಾಟ ನಡೆಸಿದರು. ಮುರಳಿ ವಿಜಯ್ ಅವರ ಈ ಇನ್ನಿಂಗ್ಸ್‌ನಲ್ಲಿ 7 ಫೋರ್ ಮತ್ತು 12 ಸಿಕ್ಸರ್ ಕೂಡ ಇದ್ದವು. ಹೀಗೆ ಭರ್ಜರಿ ಬ್ಯಾಟಿಂಗ್ ನಡೆಸುವುದರ ಮೂಲಕ 38 ವರ್ಷದ ಮುರಳಿ ವಿಜಯ್ ತಮ್ಮ ವಿರುದ್ಧ ಟೀಕೆ ನಡೆಸುತ್ತಿದ್ದವರಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ.

ವಿಜಯ್ ಅಬ್ಬರದ ನಡುವೆಯೂ ಸೋತ ತ್ರಿಚಿ
ಒಂದೆಡೆ ಮುರಳಿ ವಿಜಯ್ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದರೆ ಮತ್ತೊಂದೆಡೆ ರೂಬಿ ತ್ರಿಚಿ ವಾರಿಯರ್ಸ್ ತಂಡದ ಇತರೆ ಬ್ಯಾಟ್ಸ್‌ಮನ್‌ಗಳು ಅಲ್ಪ ಮೊತ್ತಕ್ಕೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರು. ರೂಬಿ ತ್ರಿಚಿ ವಾರಿಯರ್ಸ್ ತಂಡದ ಆರಂಭಿಕ ಆಟಗಾರ ಸಂತೋಷ್ ಶಿವ್ 9, ಅಮಿತ್ ಸಾತ್ವಿಕ್ ಗೋಲ್ಡನ್ ಡಕೌಟ್, ನಿಧೀಶ್ ರಾಜಗೋಪಾಲ್ 1, ಆದಿತ್ಯ ಗಣೇಶ್ 13, ಅಂಟೋನಿ ದಾಸ್ 1, ಗೋಕುಲ್ ಮೂರ್ತಿ 4 ಮತ್ತು ಸರವಣ ಕುಮಾರ್ ಅಜೇಯ 10 ರನ್ ಕಲೆ ಹಾಕಿದರು. ಈ ಮೂಲಕ ರೂಬಿ ತ್ರಿಚಿ ವಾರಿಯರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿ 66 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಈ ಮೂಲಕ ಮುರಳಿ ವಿಜಯ್ ಶತಕ ವ್ಯರ್ಥವಾಯಿತು.

ಸತತ ಆರನೇ ಜಯ ಸಾಧಿಸಿದ ನೆಲ್ಲೈ ರಾಯಲ್ ಕಿಂಗ್ಸ್
ರೂಬಿ ತ್ರಿಚಿ ವಾರಿಯರ್ಸ್ ತಂಡವನ್ನು ಈ ಪಂದ್ಯದಲ್ಲಿ ಸೋಲಿಸುವುದರ ಮೂಲಕ ನೆಲ್ಲೈ ರಾಯಲ್ ಕಿಂಗ್ಸ್ ಈ ಬಾರಿಯ ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ ಆರನೇ ಜಯ ದಾಖಲಿಸಿತು. ಈ ಮೂಲಕ ಆಡಿರುವ ಎಲ್ಲ ಪಂದ್ಯಗಳಲ್ಲಿಯೂ ಗೆದ್ದಿರುವ ನೆಲ್ಲೈ ರಾಯಲ್ ಕಿಂಗ್ಸ್ 12 ಅಂಕಗಳೊಂದಿಗೆ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications