ವೇಗದ ಏಕದಿನ ಅರ್ಧಶತಕ ಬಾರಿಸಿರುವ ಆಟಗಾರರ ಟಾಪ್ 5 ಪಟ್ಟಿ; ಮುರಿಯಲಾಗಿಲ್ಲ 7 ವರ್ಷದ ಈ ಹಳೆಯ ದಾಖಲೆ!

ಇಂಡಿಯನ್ ಪ್ರೀಮಿಯರ್ ಲೀಗ್ ಹದಿನೈದನೇ ಆವೃತ್ತಿ ಮುಕ್ತಾಯವಾದ ಬೆನ್ನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಹೆಚ್ಚಾಗಿ ಆಯೋಜನೆಗೊಂಡಿದ್ದು, ಒಮ್ಮೆಲೆಯೇ ವಿವಿಧ ಸರಣಿಗಳು ಜರುಗುತ್ತಿವೆ. ಒಂದೆಡೆ ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ ಟ್ವೆಂಟಿ ಸರಣಿ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಟೆಸ್ಟ್ ಸರಣಿ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಸರಣಿ ಹಾಗೂ ಇಂಗ್ಲೆಂಡ್ ಮತ್ತು ನೆದರ್ಲೆಂಡ್ ನಡುವಿನ ಏಕದಿನ ಸರಣಿಗಳು ಜರುಗುತ್ತಿವೆ.
ಹೀಗೆ ಅಂತರರಾಷ್ಟ್ರೀಯ ಕ್ರಿಕೆಟ್ ಪುನರ್ ಆರಂಭವಾಗಿದೆ ಎಂದೇ ಹೇಳಬಹುದಾಗಿದ್ದು, ಇಂಗ್ಲೆಂಡ್ ಮತ್ತು ನೆದರ್ಲೆಂಡ್ಸ್ ನಡುವಿನ ಏಕದಿನ ಸರಣಿಯಲ್ಲಿ ನೆದರ್ಲೆಂಡ್ಸ್ ವಿರುದ್ಧ ಇಂಗ್ಲೆಂಡ್ ಅಬ್ಬರದ ಬ್ಯಾಟಿಂಗ್ ನಡೆಸಿ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಹೌದು, ಇಂಗ್ಲೆಂಡ್ ತಂಡ ನೆದರ್ಲೆಂಡ್ಸ್ ಪ್ರವಾಸವನ್ನು ಕೈಗೊಂಡಿದ್ದು ನೆದರ್ಲೆಂಡ್ಸ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸುತ್ತಿದೆ. ಈ ಸರಣಿಯ ಪ್ರಥಮ ಪಂದ್ಯ ನಿನ್ನೆಯಷ್ಟೆ ( ಜೂನ್ 17 ) ಅಮ್ಸ್ಟೆಲ್ವೀನ್‌ನ ವಿ ಆರ್ ಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲೆಂಡ್ಸ್ ತಂಡ ಬೌಲಿಂಗ್ ಆಯ್ದುಕೊಂಡು ಇಂಗ್ಲೆಂಡ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಿತು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಅಬ್ಬರಿಸಿ ಬೊಬ್ಬಿರಿದು ವಿಶ್ವ ದಾಖಲೆ ನಿರ್ಮಿಸಿದೆ. 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಇಂಗ್ಲೆಂಡ್ 498 ರನ್ ಕಲೆಹಾಕಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡ ಎಂಬ ನೂತನ ವಿಶ್ವ ದಾಖಲೆ ಬರೆದಿದೆ. ತಂಡದ ಪರ ಫಿಲ್ ಸಾಲ್ಟ್, ಡೇವಿಡ್ ಮಲನ್ ಮತ್ತು ಜೋಸ್ ಬಟ್ಲರ್ ಶತಕಗಳನ್ನು ಬಾರಿಸಿದರೆ, ಲಿಯಾಮ್ ಲಿವಿಂಗ್ ಸ್ಟನ್ ಅಬ್ಬರದ ಅರ್ಧಶತಕ ಬಾರಿಸಿ ಮಿಂಚಿದರು. ಹೀಗೆ ಈ ಪಂದ್ಯದಲ್ಲಿ ಲಿಯಾಮ್ ಲಿವಿಂಗ್ ಸ್ಟನ್ ವೇಗದ ಏಕದಿನ ಅರ್ಧಶತಕ ಬಾರಿಸಿದ ಆಟಗಾರ ಎಂಬ ನೂತನ ವಿಶ್ವ ದಾಖಲೆ ಬರೆಯುವುದರಲ್ಲಿ ಕೊಂಚ ಅಂತರದಲ್ಲಿ ಎಡವಿದ್ದಾರೆ. ಆದರೆ ಈ ದಾಖಲೆಯ ಟಾಪ್ 5 ಪಟ್ಟಿಯಲ್ಲಿ ಲಿಯಾಮ್ ಲಿವಿಂಗ್ ಸ್ಟನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಕುರಿತ ವಿವರ ಮುಂದೆ ಇದೆ ಓದಿ.

ವೇಗದ ಏಕದಿನ ಅರ್ಧಶತಕ ಬಾರಿಸಿದ ಆಟಗಾರರ ಟಾಪ್ 5 ಪಟ್ಟಿ
ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ ಏಕದಿನ ಅರ್ಧಶತಕ ಬಾರಿಸಿರುವ ಟಾಪ್ 5 ಆಟಗಾರರ ಪಟ್ಟಿ ಕೆಳಕಂಡಂತಿದೆ.
1. ಎಬಿ ಡಿವಿಲಿಯರ್ಸ್ vs ವೆಸ್ಟ್ ಇಂಡೀಸ್, 2015 - 16 ಎಸೆತಗಳಲ್ಲಿ 50
2. ಸನತ್ ಜಯಸೂರ್ಯ vs ಪಾಕಿಸ್ತಾನ , 1996 - 17 ಎಸೆತಗಳಲ್ಲಿ
3. ಕುಸಾಲ್ ಪೆರೆರಾ vs ಪಾಕಿಸ್ತಾನ, 2015 - 17 ಎಸೆತಗಳಲ್ಲಿ
4. ಮಾರ್ಟಿನ್ ಗಪ್ತಿಲ್ vs ಶ್ರೀಲಂಕಾ, 2017 - 17 ಎಸೆತಗಳಲ್ಲಿ
5. ಲಿಯಾಮ್ ಲಿವಿಂಗ್ ಸ್ಟನ್ vs ನೆದರ್ಲೆಂಡ್ಸ್, 2022 - 17 ಎಸೆತಗಳಲ್ಲಿ

ಎಬಿಡಿ ದಾಖಲೆ ಸೇಫ್
ಇನ್ನು 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಏಕದಿನ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇಂದಿಗೂ ಸಹ ಎಬಿ ಡಿವಿಲಿಯರ್ಸ್ ಅವರ ಈ ಅರ್ಧಶತಕವೇ ಏಕದಿನ ಕ್ರಿಕೆಟ್‌ನ ಅತಿವೇಗದ ಅರ್ಧಶತಕದ ದಾಖಲೆಯಾಗಿ ಉಳಿದುಕೊಂಡಿದೆ. ಈ ಮೂಲಕ 7 ವರ್ಷ ಕಳೆದರೂ ಸಹ ಈ ದಾಖಲೆ ಇನ್ನೂ ಯಾರಿಂದಲೂ ಮುರಿಯಲಾಗದೇ ಹಾಗೆಯೇ ಉಳಿದಿದೆ.

ಎಡವಿದ ಲಿಯಾಮ್ ಲಿವಿಂಗ್‌ಸ್ಟನ್
ಇನ್ನು ನೆದರ್ಲೆಂಡ್ಸ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ 22 ಎಸೆತಗಳಲ್ಲಿ 66 ರನ್ ಕಲೆಹಾಕಿದ ಲಿಯಾಮ್ ಲಿವಿಂಗ್‌ಸ್ಟನ್ 17 ಎಸೆತಗಳಲ್ಲಿ ಅರ್ಧಶತಕದ ಗಟಿದಾಟಿದರು. ಈ ಮೂಲಕ ಲಿವಿಂಗ್‌ಸ್ಟನ್ ಕೂಡ ಎಬಿಡಿ ಅವರ ಸಾರ್ವಕಾಲಿಕ ದಾಖಲೆ ಮುರಿಯುವುದನ್ನು ಎರಡು ಎಸೆತಗಳಲ್ಲಿ ಕೈತಪ್ಪಿಸಿಕೊಂಡರು. ಲಿಯಾಮ್ ಲಿವಿಂಗ್‌ಸ್ಟನ್ ಈ ಇನ್ನಿಂಗ್ಸ್‌ನಲ್ಲಿ ಆರು ಸಿಕ್ಸರ್ ಮತ್ತು ಆರು ಬೌಂಡರಿ ಬಾರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications