ಚೆನ್ನೈ, ಆಗಸ್ಟ್ 10: ತ್ರಿಕೋನ ಏಕದಿನ ಸರಣಿಯಲ್ಲಿ ಅಜೇಯವಾಗಿ ಉಳಿದಿರುವ ಆಸ್ಟ್ರೇಲಿಯಾ ಎ ತಂಡ ಸೋಮವಾರ ನಡೆದ ಪಂದ್ಯದಲ್ಲಿ ಭಾರತ ಎ ತಂಡವನ್ನು ಸೋಲಿಸಿ ಫೈನಲಿಗೆ ಲಗ್ಗೆ ಇಟ್ಟಿದೆ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಎ ತಂಡ 3 ವಿಕೆಟ್ ಗಳ ಅಂತರದ ಸೋಲು ಕಂಡಿದೆ.
ಗೆಲ್ಲಲು ಬೇಕಿದ್ದ 259ರನ್ ಗಳ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಿದ ಆಸ್ಟ್ರೇಲಿಯಾ ಎ ಬ್ಯಾಟ್ಸ್ ಮನ್ ಗಳು ಅತಿಥೇಯ ಭಾರತದ ವಿರುದ್ಧ ಸತರ ಎರಡನೇ ಜಯ ದಾಖಲಿಸಿದರು. [ದಕ್ಷಿಣ ಆಫ್ರಿಕಾ ಪರ ಮಂದೀಪ್ ಫೀಲ್ಡಿಂಗ್, ಟ್ವೀಟ್ಸ್ ಪ್ರತಿಕ್ರಿಯೆ]
ಈ ಗೆಲುವಿನೊಂದಿಗೆ 14 ಅಂಕಗಳನ್ನು ಪಡೆದು ಸರಣಿಯ ಫೈನಲಿಗೆ ಆಸ್ಟ್ರೇಲಿಯಾ ಪ್ರವೇಶಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಬೋನಸ್ ಅಂಕಗಳೊಂದಿಗೆ ಜಯ ದಾಖಲಿಸಿದ ಭಾರತ ಎ ತಂಡ 5 ಅಂಕಗಳೊಂದಿಗೆ ಫೈನಲ್ ಪ್ರವೇಶಿಸುವುದು ಖಾತ್ರಿಯಾಗಿದೆ.

ಆಸ್ಟ್ರೇಲಿಯಾ ಎ ತಂಡ 34.3 ಓವರ್ ಗಳಲ್ಲಿ 178/6 ಸ್ಕೋರ್ ಮಾಡಿ ದುಃಸ್ಥಿತಿಯಲ್ಲಿದ್ದಾಗ ಬಲಗೈ ಬ್ಯಾಟ್ಸ್ ಮನ್ ಆಡಂ ಝಂಪಾ 54 ರನ್ (49 ಎಸೆತ, 7x4,1x6), ಫರ್ಗುಸನ್ ಅಜೇಯ 45 ರನ್ ಗಳಿಸಿ 80 ಜೊತೆಯಾಟದಿಂದ ಪಂದ್ಯ ಗೆಲ್ಲಲು ಸಾಧ್ಯವಾಯಿತು. ಭಾರತದ ಪರ ಕರಣ್ ಶರ್ಮ 3/45 ಗಳಿಸಿ ಉತ್ತಮ ಪ್ರದರ್ಶನ ನೀಡಿದರು.
ಆಗಸ್ಟ್ 12 ರಂದು ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ಎ ಆಡಲಿದೆ. ಇದಕ್ಕೂ ಮುನ್ನ ಆಗಸ್ಟ್ 11 ರಂದು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಸೆಣಸಾಡಲಿವೆ. (ಒನ್ ಇಂಡಿಯಾ ಸುದ್ದಿ)