

ಹರಾರೆ, ಜುಲೈ 2: ಆಸ್ಟ್ರೇಲಿಯಾದ ವೇಗಿ ಬಿಲ್ಲಿ ಸ್ಟಾನ್ಲೇಕ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡ ತ್ರಿಕೋನ ಟಿ20 ಸರಣಿಯ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿತು.
ಜಿಂಬಾಬ್ವೆಯ ಹರಾರೆ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಪಾಕ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಪಾಕಿಸ್ತಾನದ ಶೋಯೆಬ್ ಮಲಿಕ್ ಅವರು ತಮ್ಮ ದಾಖಲೆಯ 100ನೇ ಟಿ20 ಪಂದ್ಯವನ್ನು ಸ್ಮರಣೀಯವನ್ನಾಗಿಸಿಕೊಳ್ಳುವ ಕನಸನ್ನು ಸ್ಟಾನ್ಲೇಕ್ ಭಗ್ನಗೊಳಿಸಿದರು.
ಸರಣಿಯ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸುಲಭ ಗೆಲುವು ಸಾಧಿಸಿದ್ದ ಪಾಕಿಸ್ತಾನ, ಆಸ್ಟ್ರೇಲಿಯಾ ಎದುರು ತಡಬಡಾಯಿಸಿತು.
ಈ ಗೆಲುವಿನಿಂದ ಏಕದಿನ ಮತ್ತು ಟಿ20 ಸೇರಿದಂತೆ ಕಳೆದ ಹತ್ತು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿ ಕುಗ್ಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ಹೊಸ ಚೈತನ್ಯ ದೊರಕಿದಂತಾಗಿದೆ.
ಕೇವಲ 8 ರನ್ ನೀಡಿ 4 ವಿಕೆಟ್ ಕಬಳಿಸಿ ಬಿಲ್ಲಿ ಸ್ಟಾನ್ಲೇಕ್, ಪಾಕಿಸ್ತಾನದ ಆರಂಭಿಕ ಆಟಗಾರರನ್ನು ಬೇಗನೆ ಪೆವಿಲಿಯನ್‌ಗೆ ಅಟ್ಟಿದರು. ಹೀಗಾಗಿ ಪಾಕ್ ತಂಡ 19.5 ಓವರ್‌ಗಳಲ್ಲಿ 116 ರನ್‌ಗಳಿಗೆ ತನ್ನ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಸುಲಭದ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಕೇವಲ 10.5 ಓವರ್‌ಗಳಲ್ಲಿಯೇ 1 ವಿಕೆಟ್ ಕಳೆದುಕೊಂಡು ಜಯ ದಾಖಲಿಸಿತು.
ನಾಯಕ ಆರೋನ್ ಫಿಂಚ್ ಅವರು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 33 ಎಸೆತಗಳಲ್ಲಿ 68 ರನ್ ಗಳಿಸಿದರು. ಇದರಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್‌ಗಳಿದ್ದವು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 116/10 (19.5 ಓವರ್) ಶಬದ್ ಖಾನ್ 29, ಆಸಿಫ್ ಅಲಿ 22, ಫಹೀಮ್ ಅಶ್ರಫ್ 21, ಬಿಲ್ಲಿ ಸ್ಟಾನ್ಲೇಕ್ 8/4, ಆಂಡ್ರೂ ಟೈ 38/3.
ಆಸ್ಟ್ರೇಲಿಯಾ: 117/1 (10.5 ಓವರ್) ಆರೋನ್ ಫಿಂಚ್ 68, ಟ್ರಾವಿಸ್ ಹೆಡ್ 20, ಡಿ ಆರ್ಸಿ ಶಾರ್ಟ್ 15, ಹಸನ್ ಅಲಿ 18/1. ಫಲಿತಾಂಶ: ಆಸ್ಟ್ರೇಲಿಯಾಕ್ಕೆ ಒಂಬತ್ತು ವಿಕೆಟ್‌ಗಳ ಗೆಲುವು.