
ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಹರಿಣಗಳ ವಿರುದ್ಧ ಮೊದಲಿಗೆ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿರುವ ಟೀಮ್ ಇಂಡಿಯಾ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ 1-0 ಮುನ್ನಡೆಯನ್ನು ಸಾಧಿಸಿದ್ದು ಇದೀಗ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದು ಎರಡನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹಿಡಿತವನ್ನು ಸಾಧಿಸಿದೆ.
ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂದು ಟೀಮ್ ಇಂಡಿಯಾ ಬೌಲಿಂಗ್ ಪಡೆ ಹರಿಣಗಳ ಮೇಲೆ ಸವಾರಿ ಮಾಡಿದೆ. ಮೊದಲನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ಬೌಲಿಂಗ್ ಎದುರು ಟೀಮ್ ಇಂಡಿಯಾ ತುಸು ಮಂಕಾಗಿತ್ತು. ಮೊದಲನೇ ಇನ್ನಿಂಗ್ಸ್‌ನಲ್ಲಿ ಹರಿಣಗಳ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 202 ರನ್‌ಗಳಿಗೆ ಆಲ್ ಔಟ್ ಆಗಿತ್ತು. ಇದೀಗ ಎರಡನೇ ದಿನದಾಟದಂದು ದಕ್ಷಿಣ ಆಫ್ರಿಕಾ ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿದ್ದು ಮೊದಲನೇ ಇನ್ನಿಂಗ್ಸ್‌ನಲ್ಲಿ 229 ರನ್‌ಗಳಿಗೆ ಆಲ್ ಔಟ್ ಆಗಿದೆ.
ಮೊದಲನೇ ದಿನದಾಟದಂತ್ಯಕ್ಕೆ ಕೇವಲ 1 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿತ್ತು ಎಂದೇ ಹೇಳಬಹುದು. ಮೊದಲನೆ ದಿನದಾಟದಂದು ದಕ್ಷಿಣ ಆಫ್ರಿಕಾ ತಂಡದ ಏಡನ್ ಮಾರ್ಕ್ರಮ್ ಅವರ ವಿಕೆಟ್‍ನ್ನು ಮೊಹಮ್ಮದ್ ಶಮಿ ಪಡೆದಿದ್ದರು. ಹೀಗೆ ಮೊದಲನೇ ದಿನ ಉತ್ತಮ ಆಟ ಪ್ರದರ್ಶಿಸಿದ್ದ ದಕ್ಷಿಣ ಆಫ್ರಿಕಾ ಎರಡನೇ ದಿನದಾಟ ಆರಂಭ ಆಗುತ್ತಿದ್ದಂತೆ ಸಾಲುಸಾಲಾಗಿ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು. ಭಾರತದ ಬೌಲರ್ ಶಾರ್ದೂಲ್ ಠಾಕೂರ್ ಅವರಿಗೆ ದಕ್ಷಿಣ ಆಫ್ರಿಕಾ ಎರಡನೇ ದಿನದಾಟದಂದು ತನ್ನ ಮೊದಲ 5 ವಿಕೆಟ್‍ಗಳನ್ನು ಒಪ್ಪಿಸಿತು.
ಮೊದಲಿಗೆ ಡೀನ್ ಎಲ್ಗರ್ ಮತ್ತು ಕೀಗನ್ ಪೀಟರ್ಸನ್ ಉತ್ತಮ ಜೊತೆಯಾಟಕ್ಕೆ ಬ್ರೇಕ್ ಹಾಕಿದ ಶಾರ್ದೂಲ್ ಠಾಕೂರ್ ಇಬ್ಬರ ವಿಕೆಟ್‍ನ್ನೂ ಪಡೆದರು. ನಂತರ ರಸಿ ವಾನ್ ಡರ್ ರಸ್ಸನ್ ಅವರು ಕೂಡ ಶಾರ್ದೂಲ್ ಠಾಕೂರ್ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಅರ್ಧಶತಕದ ಜತೆಯಾಟವನ್ನಾಡಿ ಭರವಸೆಯನ್ನು ಮೂಡಿಸಿದ್ದ ಟೆಂಬಾ ಬವುಮಾ ಮತ್ತು ಕೈಲ್ ವೆರೈಯ್ನೆ ಅವರ ವಿಕೆಟ್‍ಗಳನ್ನೂ ಸಹ ಶಾರ್ದೂಲ್ ಠಾಕೂರ್ ಪಡೆದರು. ಅಂತಿಮವಾಗಿ ಮಾರ್ಕೋ ಜನ್ಸೆನ್ ಮತ್ತು ಲುಂಗಿ ಎನ್ ಗಿಡಿ ವಿಕೆಟ್‍ಗಳನ್ನೂ ಸಹ ಪಡೆದ ಶಾರ್ದೂಲ್ ಠಾಕೂರ್ ಒಟ್ಟು 7 ವಿಕೆಟ್ ಪಡೆದು ಮಿಂಚಿದರು.
ಹೀಗೆ 7 ವಿಕೆಟ್ ಪಡೆಯುವ ಮೂಲಕ ಪಂದ್ಯದ ಮೇಲೆ ದಕ್ಷಿಣ ಆಫ್ರಿಕಾ ಹಿಡಿತ ಕಳೆದುಕೊಳ್ಳುವಂತೆ ಮಾಡಿದ ಶಾರ್ದೂಲ್ ಠಾಕೂರ್ ಅವರಿಗೆ ಟ್ವಿಟರ್ ತುಂಬಾ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಹಲವಾರು ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳು ಈ ಕೆಳಕಂಡಂತೆ ಟ್ವೀಟ್ ಮಾಡಿ ಜೈಕಾರ ಹಾಕಿದ್ದಾರೆ.
ಲಾರ್ಡ್ ಶಾರ್ದೂಲ್ ಠಾಕೂರ್ ಹಾಗೂ ಟೀಮ್ ಇಂಡಿಯಾ ಯಾವಾಗಲೂ ನ್ಯಾಯೋಚಿತ ಆಟವನ್ನು ಆಡುತ್ತಾರೆ. ಹೀಗಾಗಿಯೇ ಶಾರ್ದೂಲ್ ಠಾಕೂರ್ ಯಾವಾಗಲೂ ಹೊಸದಾಗಿ ಕಣಕ್ಕಿಳಿದ ಬ್ಯಾಟ್ಸ್ ಮನ್ ವಿರುದ್ಧ ಬೌಲಿಂಗ್ ಮಾಡುವುದಿಲ್ಲ, ಬದಲಾಗಿ ಈಗಾಗಲೇ ಕಣಕ್ಕಿಳಿದು ನೆಲಕಚ್ಚಿರುವ ಆಟಗಾರರಿಗೆ ಬೌಲಿಂಗ್ ಮಾಡಲು ಶಾರ್ದೂಲ್ ಠಾಕೂರ್ ಅವರಿಗೆ ಚೆಂಡನ್ನು ನೀಡಲಾಗುತ್ತದೆ ಎಂದು ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಶ್ಲಾಘಿಸಿದ್ದಾರೆ.
ಶಾರ್ದೂಲ್ ಠಾಕೂರ್ ಭಾರತೀಯ ವೇಗಿಗಳ ನಡುವೆ ಇರುವ ಕಪ್ಪು ಕುದುರೆ. ಅವರು ಕಣಕ್ಕಿಳಿದಾಗಲೆಲ್ಲಾ ಅಭಿಮಾನಿಗಳಲ್ಲಿ ಕಡಿಮೆ ನಿರೀಕ್ಷೆ ಇದ್ದರೂ ಸಹ ಅವರು ಹೆಚ್ಚಿನ ಫಲಿತಾಂಶವನ್ನು ನೀಡುತ್ತಾರೆ ಎಂದು ನೆಟ್ಟಿಗನೋರ್ವ ಶಾರ್ದೂಲ್ ಠಾಕೂರ್ ಅವರನ್ನು ಕುದುರೆಗೆ ಹೋಲಿಕೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ಸಮಯದಲ್ಲಿ ಮತ್ತೋರ್ವ ನಟಿಯ ಶಾರ್ದೂಲ್ ಠಾಕೂರ್ ಅವರ ಆಯ್ಕೆಯನ್ನು ಪ್ರಶ್ನಿಸಿದವರಿಗೆ ಟ್ವೀಟ್ ಮೂಲಕ ಚಾಟಿ ಬೀಸಿದ್ದಾರೆ. ಶಾರ್ದೂಲ್ ಠಾಕೂರ್ ಅವರ ಆಯ್ಕೆಯನ್ನು ಟೀಕಿಸಿ ಅನುಮಾನಿಸಿದವರೇ ಈಗ ಎಲ್ಲಿದ್ದೀರಾ ಎಂದು ಟ್ವೀಟ್ ಮಾಡಿ ಪ್ರಶ್ನೆ ಹಾಕಿದ್ದಾರೆ.