
ನವದೆಹಲಿ, ಜೂ. 30: ದುರಂತಕ್ಕೀಡು ಮಾಡಬಲ್ಲ ಪರಿಪೂರ್ಣ ಪಾಕ ವಿಧಾನ'ವೆಂದು ಸಚಿನ್ ಹೇಳಿದ್ದ ಏಕದಿನ ಕ್ರಿಕೆಟ್ ನಲ್ಲಿನ 'ಎರಡು ಚೆಂಡು ನಿಯಮ'ವನ್ನು ಭಾರತದ ವೇಗಿ ಉಮೇಶ್ ಯಾದವ್ ಅವರೂ ಖಂಡಿಸಿದ್ದಾರೆ. ರಿವರ್ಸ್ ಸ್ವಿಂಗ್ ಕಲೆಯನ್ನೇ ಕೊಲ್ಲುವುದರಿಂದ ಈ ನಿಯಮ ವೇಗಿಗಳಿಗೆ ತುಂಬಾ ತೊಂದರೆ ತರಲಿದೆ ಎಂದು ಉಮೇಶ್ ಹೇಳಿದ್ದಾರೆ.
ಎರಡು ಚೆಂಡು ನಿಯಮವನ್ನು ಐಸಿಸಿ 2011ರಲ್ಲಿ ಪರಿಚಯಿಸಿತ್ತು. ಅದಾಗಿ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಏಕದಿನ ಸರಣಿಯ ಪಂದ್ಯವೊಂದರಲ್ಲಿ ಇಂಗ್ಲೆಂಡ್ 481 ರನ್ ಸಿಡಿಸಿ ವಿಶ್ವ ದಾಖಲೆಯನ್ನೂ ನಿರ್ಮಿಸಿತ್ತು. ಇದು ಎರಡು ಚೆಂಡು ನಿಯಮ ಬ್ಯಾಟ್ಸ್ಮನ್ ಗಳಿಗೆ ಪೂರಕ-ಬೌಲರ್ ಗಳಿಗೆ ಮಾರಕ ಎಂಬುದಕ್ಕೆ ಸಾಕ್ಷಿಯನ್ನೂ ಕ್ಷೀಣವಾಗಿ ಹೇಳಿತ್ತು. ಇದೇ ವಿಚಾರಗಳನ್ನು ಕೈಗೆತ್ತಿಕೊಂಡು ಉಮೇಶ್ ಪ್ರತಿಕ್ರಿಯಿಸಿದ್ದಾರೆ.
'ಎರಡು ಚೆಂಡು ನಿಯಮ ಬೌಲರ್ ಗಳಿಗೆ ಯಾಕೆ ಮಾರಕವೆಂದರೆ ಇದು ವೇಗಿಗಳ ಓವರ್ ನಲ್ಲಿ ಹೆಚ್ಚು ರನ್ ನೀಡುತ್ತದೆ. ಒಂದೇ ಚೆಂಡಿದ್ದರೆ ಪಂದ್ಯದ ವೇಳೆ ಆ ಚೆಂಡು ಹಳತಾಗುತ್ತಾ ಸಾಗುವುದರಿಂದ ನಾವು ರಿವರ್ಸ್ ಸ್ವಿಂಗ್ ಮಾಡಬಹುದು. ಎರಡು ಚೆಂಡು ಇದ್ದಾಗ ಏಕದಿನದಲ್ಲಿ ನೀವು ರಿವರ್ ಸ್ವಿಂಗ್ ನೋಡಲು ಸಾಧ್ಯವಿಲ್ಲ. ನೋಡಿದರೂ ತೀರಾ ಅಪರೂಪಕ್ಕಷ್ಟೇ' ಎಂದು ಉಮೇಶ್ ವಿವರಿಸಿದರು.
ಇಂಗ್ಲೆಂಡ್ ನಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್ ಸರಣಿಯ ವೇಳೆ ಎರಡು ಬಾಲ್ ನಿಯಮದಿಂದಾಗಿ ವೇಗಿಗಳು ಎದುರಿಸಿದ ಸಮಸ್ಯೆಯನ್ನೂ ಯಾದವ್ ತಿಳಿಸಿದರು. 'ಎರಡು ಬಾಲ್ ಬಳಸಿದಾಗ ಡೆತ್ ಓವರ್ ನಲ್ಲಿ ಬೌಲರ್ ಗಳು ಏನೂ ಮಾಡಲು ಸಾಧ್ಯವಿಲ್ಲ. ಅದೂ ಎದುರಾಳಿ ತಂಡ ಹೆಚ್ಚು ವಿಕೆಟ್ ಉಳಿಸಿಕೊಂಡಿದ್ದರೆ ಬೌಲರ್ ಗಳು ಇನ್ನಷ್ಟು ಒತ್ತಡಕ್ಕೆ ಸಿಲುಕುತ್ತಾರೆ' ಎಂದು ಉಮೇಶ್ ಹೇಳಿದ್ದಾರೆ.