U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು

ಭಾನುವಾರ, ಜನವರಿ 29ರಂದು 2023ರ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನ ಪ್ರಶಸ್ತಿ ಹಣಾಹಣಿ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ಇಂಗ್ಲೆಂಡ್ ಮಹಿಳಾ ತಂಡವನ್ನು ಮಣಿಸಿ ನೂತನ ಚಾಂಪಿಯನ್ ಪಟ್ಟಕ್ಕೇರಿದೆ.
ದಕ್ಷಿಣ ಆಫ್ರಿಕಾದ ಪೊಟ್ಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಂಗ್ಲರನ್ನು ಹೀನಾಯವಾಗಿ ಸೋಲಿಸುವ ಮೂಲಕ ಶಫಾಲಿ ವರ್ಮಾ ನಾಯಕತ್ವದ ಭಾರತೀಯ ವನಿತೆಯರು ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.
ಎದುರಾಳಿ ಇಂಗ್ಲೆಂಡ್ ಮಹಿಳಾ ತಂಡ ನೀಡಿದ್ದ 69 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಭಾರತ ಮಹಿಳಾ ತಂಡವು, 14 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 69 ರನ್ ಗಳಿಸಿ ಗೆಲುವಿನ ಗುರಿ ತಲುಪಿತು.

ಭಾರತದ ನಾಯಕಿ ಶಫಾಲಿ ವರ್ಮಾ 11 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 15 ರನ್ ಗಳಿಸಿ ಔಟಾದರು. ಸರಣಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಶ್ವೇತಾ ಸೆಹ್ರಾವತ್ ಫೈನಲ್ ಪಂದ್ಯದಲ್ಲಿ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ಮೂರನೇ ವಿಕೆಟ್ ಜೊತೆಯಾಟಕ್ಕೆ ಸೌಮ್ಯ ತಿವಾರಿ ಮತ್ತು ಗೊಂಗಾಡಿ ತ್ರಿಶಾ 46 ರನ್‌ಗಳನ್ನು ಪೇರಿಸಿ ಭಾರತಕ್ಕೆ ಗೆಲುವು ತಂದುಕೊಡಲು ನೆರವಾದರು ಮತ್ತು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ಸೌಮ್ಯ ತಿವಾರಿ (24 ರನ್) ಮತ್ತು ಗೊಂಗಾಡಿ ತ್ರಿಶಾ (24 ರನ್) ಗಳಿಸಿ ಮಿಂಚಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 17.1 ಓವರ್‌ಗಳಲ್ಲಿ 68 ರನ್‌ಗಳಿಗೆ ಸರ್ವಪತನ ಕಂಡಿತು. ಇಂಗ್ಲೆಂಡ್ ಪರ ಬ್ಯಾಟಿಂಗ್‌ನಲ್ಲಿ ರಿಯಾನಾ ಮ್ಯಾಕ್ಡೊನಾಲ್ಡ್-ಗೇ 19 ರನ್ ಗಳಿಸಿದರೆ, ಅಲೆಕ್ಸಾ ಸ್ಟೋನ್‌ಹೌಸ್ 11 ರನ್ ಮತ್ತು ನಿಯಾಮ್ ಹಾಲೆಂಡ್ 10 ರನ್ ಗಳಿಸಿದ್ದೇ ದೊಡ್ಡದಾಗಿತ್ತು.
ಭಾರತ ಪರ ಬೌಲಿಂಗ್‌ನಲ್ಲಿ ಟಿಟಾಸ್ ಸಾಧು, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಮನ್ನತ್ ಕಶ್ಯಪ್, ಶಫಾಲಿ ವರ್ಮಾ, ಸೋನಮ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 4 ಓವರ್‌ಗಳಲ್ಲಿ ಕೇವಲ 6 ರನ್ ನೀಡಿ ಪ್ರಮುಖ 2 ವಿಕೆಟ್ ಪಡೆದ ಭಾರತದ ಟಿಟಾಸ್ ಸಾಧು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಇಂಗ್ಲೆಂಡ್‌ನ ಗ್ರೇಸ್ ಸ್ಕ್ರಿವೆನ್ಸ್ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications