ಭಾನುವಾರ, ಫೆಬ್ರವರಿ 11ರಂದು ದಕ್ಷಿಣ ಆಫ್ರಿಕಾ ಬೆನೋನಿಯಲ್ಲಿ ನಡೆಯಲಿರುವ 2024ರ ಐಸಿಸಿ ಅಂಡರ್-19 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಕ್ರಿಕೆಟ್‌ನ ಮದಗಜಗಳಾದ ಭಾರತ ಮತ್ತು ಆಸ್ಟ್ರೇಲಿಯಾ ಸೆಣಸಾಡಲು ಸಿದ್ಧವಾಗಿದೆ.
ಭಾರತ ಯುವ ಪಡೆ ಅಂಡರ್-19 ವಿಶ್ವಕಪ್ ಪಂದ್ಯಾವಳಿಯಲ್ಲಿ ಅಜೇಯ ತಂಡವಾಗಿದೆ ಮತ್ತು ಸೆಮಿಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ.

ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ಈಗಾಗಲೇ 5 ಪ್ರಶಸ್ತಿಗಳನ್ನು ಗೆದ್ದು ದಾಖಲೆಯ ಆರನೇ ಪ್ರಶಸ್ತಿಯನ್ನು ಎದುರು ನೋಡುತ್ತಿದೆ. ಭಾರತ ತಂಡ 2022ರ ಆವೃತ್ತಿಯ ಹಾಲಿ ಚಾಂಪಿಯನ್ ಆಗಿದೆ. ಅಂದು ಭಾರತ ತಂಡ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು.
ಅಂಡರ್-19 ವಿಶ್ವಕಪ್ ಫೈನಲ್‌ಗೆ ಮುನ್ನ ಮಾತನಾಡಿದ ಟೀಮ್ ಇಂಡಿಯಾ ನಾಯಕ ಉದಯ್ ಸಹರಾನ್, ಪಂದ್ಯಾವಳಿಯನ್ನು ಗೆಲ್ಲುವುದು ತಂಡದ ಕನಸು ಮತ್ತು ನಾವು ಇತಿಹಾಸವನ್ನು ಪುನರಾವರ್ತಿಸಲು ಬಯಸುತ್ತೇವೆ ಎಂದು ಹೇಳಿದರು.

"ಈ ಟೂರ್ನಿಯಲ್ಲಿ ಗೆಲುವು ಸಾಧಿಸುವುದು ನಮ್ಮೆಲ್ಲರ ಕನಸಾಗಿದೆ. ಪ್ರತಿಯೊಬ್ಬರೂ ಅಂಡರ್-19 ವಿಶ್ವಕಪ್ ಗೆಲ್ಲುವ ವಿಶ್ವಾಸ ಹೊಂದಿದ್ದೇವೆ ಮತ್ತು ನಾವು ಇತಿಹಾಸವನ್ನು ಪುನರಾವರ್ತಿಸಲು ಬಯಸುತ್ತೇವೆ. ನಾವು ನಮ್ಮ ಹೆಸರನ್ನು ಇತಿಹಾಸದಲ್ಲಿ ನೋಂದಾಯಿಸಲು ಎದುರು ನೋಡುತ್ತಿದ್ದೇವೆ. ನಾವು ಅತ್ಯುತ್ತಮವಾದದ್ದನ್ನು ನೀಡುವತ್ತ ಗಮನಹರಿಸಿದ್ದೇವೆ," ಎಂದು ಉದಯ್ ಸಹರಾನ್ ತಿಳಿಸಿದ್ದಾರೆ.
"ಇದೇ ರೀತಿ ನಮ್ಮನ್ನು ಬೆಂಬಲಿಸುವುದನ್ನು ಮುಂದುವರಿಸುವಂತೆ ನಾನು ಭಾರತ ದೇಶವಾಸಿಗಳಿಗೆ ಹೇಳಲು ಬಯಸುತ್ತೇನೆ. ವಿಶ್ವಕಪ್ ಮರಳಿ ತರಲು ನಾವು ಎಲ್ಲವನ್ನೂ ನೀಡುತ್ತೇವೆ," ಎಂದು ಭರವಸೆ ನೀಡಿದರು.

ಈ ಅಂಡರ್-19 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಪವರ್-ಪ್ಯಾಕ್ಡ್ ಪ್ರದರ್ಶನವು ಮೂರು ಬಾರಿ 200 ಪ್ಲಸ್ ರನ್ ಅಂತರದ ಗೆಲುವುಗಳಿಂದ ಹೈಲೈಟ್ ಅಗಿದೆ. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬಲಿಷ್ಠ ಬೌಲಿಂಗ್ ದಾಳಿಯನ್ನು ಎದುರಿಸಲಿದೆ.
ಆಸ್ಟ್ರೇಲಿಯಾದ ಟಾಮ್ ಸ್ಟ್ರೇಕರ್ ಪಾಕಿಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 6 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಆದರೆ, ಟೀಮ್ ಇಂಡಿಯಾ ನಾಯಕ ಉದಯ್ ಸಹಾರಾನ್ ಅಂತಹ ಯಾವುದರ ಬಗ್ಗೆಯೂ ಚಿಂತಿಸಲಿಲ್ಲ ಮತ್ತು ತಂಡವನ್ನು ಉತ್ತಮವಾಗಿ ಆಡಲು ಬೆಂಬಲಿಸಿದರು.
"ನಮ್ಮ ತಂಡದ ಉತ್ತಮ ಪ್ರದರ್ಶನದ ರಹಸ್ಯವೆಂದರೆ, ತಂಡದ ಬಾಂಧವ್ಯ. ಡ್ರೆಸ್ಸಿಂಗ್ ರೂಮ್‌ನಲ್ಲಿನ ವಾತಾವರಣವು ತುಂಬಾ ಸ್ನೇಹಪರವಾಗಿದೆ. ಪ್ರತಿಯೊಬ್ಬರೂ ಒಬ್ಬರನ್ನೊಬ್ಬರು ನಂಬುತ್ತಾರೆ ಮತ್ತು ಪರಸ್ಪರ ಸಹಾಯ ಮಾಡಲು ಸಿದ್ಧರಾಗಿದ್ದಾರೆ. ಅದಕ್ಕಾಗಿಯೇ ಕಾರ್ಯಕ್ಷಮತೆಯ ಗ್ರಾಫ್ ನಿರಂತರವಾಗಿ ಉತ್ತಮವಾಗಿದೆ," ಎಂದು ಉದಯ್ ಸಹರಾನ್ ಭಾರತ ತಂಡದ ಯಶಸ್ಸಿನ ಗುಟ್ಟು ತಿಳಿಸಿದರು.
"ನಾವು ಪ್ರತಿಸ್ಪರ್ಧಿ ತಂಡದ ಮೇಲೆ ಕೇಂದ್ರೀಕರಿಸುತ್ತಿಲ್ಲ, ನಾವು ನಮ್ಮದೇ ಆಟದ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ನಾವು ಪಂದ್ಯವಾರು ತಂತ್ರ ರೂಪಿಸಿದ್ದೇವೆ ಮತ್ತು ಪ್ರತಿ ಪಂದ್ಯವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ," ಎಂದು ಈ ವಿಶ್ವಕಪ್‌ನಲ್ಲಿ ಆಡಿದ ಆರು ಪಂದ್ಯಗಳಲ್ಲಿ 389 ರನ್ ಗಳಿಸಿರುವ ಉದಯ್ ಸಹರಾನ್ ಹೇಳಿದರು.
ಗಮನಾರ್ಹವಾಗಿ, 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಹಿರಿಯರ ತಂಡಗಳು ಮುಖಾಮುಖಿಯಾಗಿದ್ದವು. ಭಾರತ ವಿರುದ್ಧ ಆಸ್ಟ್ರೇಲಿಯಾ 6 ವಿಕೆಟ್‌ಗಳ ಗೆಲುವು ಸಾಧಿಸಿ ಚಾಂಪಿಯನ್ ಆಗಿತ್ತು. ಇದೀಗ ಆ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುವ ತವಕದಲ್ಲಿ ಭಾರತ ಯುವ ಪಡೆ ಸಜ್ಜಾಗಿದೆ.
ಹಾಲಿ ಚಾಂಪಿಯನ್ ಭಾರತ ತನ್ನ ಒಂಬತ್ತನೇ ಫೈನಲ್ ಪಂದ್ಯವನ್ನು ಆಡುತ್ತಿದ್ದರೆ, ಆಸ್ಟ್ರೇಲಿಯಾ ತನ್ನ ಆರನೇ ಫೈನಲ್‌ನಲ್ಲಿ ಕಾಣಿಸಿಕೊಳ್ಳುತ್ತಿದೆ. ಭಾರತ ತಂಡವು ದಾಖಲೆಯ ಐದು ಬಾರಿ ಅಂಡರ್-19 ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದಿದೆ.
ಆಸ್ಟ್ರೇಲಿಯಾ ಮೂರು ಪ್ರಶಸ್ತಿಗಳನ್ನು ಎತ್ತಿ ಹಿಡಿದಿದೆ. ಆಸೀಸ್ ತಂಡ ಕೊನೆಯ ಬಾರಿಗೆ 2010ರಲ್ಲಿ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಆ ಆವೃತ್ತಿಯು ನೆರೆಯ ನ್ಯೂಜಿಲೆಂಡ್‌ನಲ್ಲಿ ನಡೆದಿತ್ತು.