ಅರ್ಧಶತಕ ಗಳಿಸಿ ಶ್ರೇಯಸ್ ದಾಖಲೆ ಮುರಿದ ದೇವದತ್ ಪಡಿಕ್ಕಲ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಅವರು ಮತ್ತೊಂದು ದಾಖಲೆ ಬರೆದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕೊನೆ ಲೀಗ್ ಪಂದ್ಯದಲ್ಲಿ ಪಡಿಕ್ಕಲ್ ಅರ್ಧಶತಕ ಗಳಿಸಿದರು. ಇದು ಈ ಐಪಿಎಲ್ ನಲ್ಲಿ ಅವರ 5ನೇ ಅರ್ಧಶತಕವಾಗಿದೆ. ಈ ಮೂಲಕ 20 ವರ್ಷ ವಯಸ್ಸಿನ ಎಡಗೈ ಬ್ಯಾಟ್ಸ್ ಮನ್ ಪಡಿಕ್ಕಲ್ ಅವರು ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ದಾಖಲೆಯನ್ನು ಮುರಿದಿದ್ದಾರೆ. ಇವರಿಬ್ಬರು ಆಟಗಾರರು ಚೊಚ್ಚಲ ಸರಣಿಯಲ್ಲಿ 4 ಬಾರಿ 50ಪ್ಲಸ್ ರನ್ ಗಳಿಸಿದ್ದರು.
ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಅವರು ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ ಮೊದಲ ಸೀಸನ್ ನಲ್ಲೇ ಅತಿ ಹೆಚ್ಚು 50 ಪ್ಲಸ್ ರನ್ ಗಳಿಸಿದ ಸಾಧನೆ ಮಾಡಿದ್ದರು. ಧವನ್ 2008ರಲ್ಲಿ ಹಾಗೂ ಅಯ್ಯರ್ 2015ರಲ್ಲಿ ಈ ದಾಖಲೆ ಬರೆದಿದ್ದರು. ಈಗ 2020ರಲ್ಲಿ ಅನ್ ಕ್ಯಾಪ್ಡ್ ಆಟಗಾರರಾಗಿ ದೇವದತ್ ಪಡಿಕ್ಕಲ್ ಅವರು ಈ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇದಲ್ಲದೆ, ಚೊಚ್ಚಲ ಐಪಿಎಲ್ ಸೀಸನ್ ನಲ್ಲಿ 472ರನ್ ಗಳಿಸಿದ್ದು, ಇದು ಕೂಡಾ ಹೊಸ ದಾಖಲೆಯಾಗಿದೆ. 5ನೇ ಅರ್ಧಶತಕ ಗಳಿಸುವ ಮೂಲಕ ಈಗ ಈ ಸೀಸನ್ ನಲ್ಲಿ ಆರ್ ಸಿಬಿ ಪರ 14 ಇನ್ನಿಂಗ್ಸ್ ಗಳಲ್ಲಿ ಅಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇಲ್ಲಿ ತನಕ ಪಡಿಕ್ಕಲ್ 51 ಬೌಂಡರಿ, 8 ಸಿಕ್ಸರ್ ಸಿಡಿಸಿದ್ದು 472ರನ್ ಗಳಿಸಿದ್ದಾರೆ. ಆರ್ ಸಿಬಿ ಬಹುತೇಕ ಪ್ಲೇ ಆಫ್ ಹಂತಕ್ಕೆ ಅರ್ಹತೆ ಪಡೆದಿದ್ದು, ಇನ್ನೂ ಮೂರು ಪಂದ್ಯಗಳನ್ನಾಡಬಹುದಾಗಿದೆ. ಹೀಗಾಗಿ, ಚೊಚ್ಚಲ ಸೀಸನ್ ನಲ್ಲೇ 500 ಪ್ಲಸ್ ಗಳಿಸಿದ ಸಾಧನೆಯನ್ನು ಪಡಿಕ್ಕಲ್ ಮಾಡಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications