
ಈ ಬಾರಿಯ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಅಂಡರ್ 19 ಮತ್ತು ಇಂಗ್ಲೆಂಡ್ ಅಂಡರ್ 19 ತಂಡಗಳು ಕಣಕ್ಕಿಳಿದಿದ್ದವು. ವೆಸ್ಟ್ ಇಂಡೀಸ್‌ನ ಆಂಟಿಗುವದ ಸರ್ ವಿವಿಯನ್ ರಿಚರ್ಡ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡು 44.5 ಓವರ್‌ಗಳಲ್ಲಿ ಆಲ್ ಔಟ್ ಆಗಿ 189 ರನ್ ಗಳಿಸಿತು. ಇಂಗ್ಲೆಂಡ್ ಇಡೀ ತಂಡ ಜವಾಬ್ದಾರಿಯುತ ಪ್ರದರ್ಶನ ನೀಡದೇ ಇದ್ದರೂ ತಂಡದ ಜೇಮ್ಸ್ ರ‍್ಯೂ 116 ಎಸೆತಗಳಲ್ಲಿ 95 ರನ್ ಗಳಿಸಿ ಆಪದ್ಭಾಂದವನಾದರು.
ಇನ್ಮುಳಿದಂತೆ ಜಾರ್ಜ್ ಥಾಮಸ್ 27, ಜೇಕಬ್ ಬೆಥೆಲ್ 2, ನಾಯಕ ಟಾಮ್ ಪ್ರೆಸ್ಟ್ ಡಕ್ ಔಟ್, ವಿಲ್ ಲಂಕ್ಷ್ಟನ್ 4, ಜಾರ್ಜ್ ಬೆಲ್ ಡಕ್ ಔಟ್, ರೆಹಾನ್ ಅಹ್ಮೆದ್ 10, ಅಲೆಕ್ಸ್ ಹಾರ್ಟನ್ 10, ಜೇಮ್ಸ್ ಸೇಲ್ಸ್ ಅಜೇಯ 34, ಥಾಮಸ್ ಆಪ್ಸಿನ್‌ವಲ್ ಡಕ್ ಔಟ್ ಮತ್ತು ಜೋಶ್ವಾ ಬೊಯ್ಡನ್ 1 ರನ್ ಗಳಿಸಿದರು. ಹೀಗೆ ಜೇಮ್ಸ್ ರ‍್ಯೂ ಅಮೋಘ ಆಟದ ನೆರವಿನಿಂದ ಇಂಗ್ಲೆಂಡ್ ಹೀನಾಯ ಮೊತ್ತಕ್ಕೆ ಆಲ್ ಔಟ್ ಆಗುವುದರಿಂದ ತಪ್ಪಿಸಿಕೊಂಡು ಭಾರತ ಅಂಡರ್ 19 ತಂಡಕ್ಕೆ ಗೆಲ್ಲಲು 190 ರನ್‌ಗಳ ಗುರಿಯನ್ನು ನೀಡಿತು.
ಹೀಗೆ ಇಂಗ್ಲೆಂಡ್ ತಂಡ ನೀಡಿದ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಉತ್ತಮ ಆರಂಭ ದೊರೆಯಲಿಲ್ಲ. ಭಾರತ ತಂಡದ ಆರಂಭಿಕ ಆಟಗಾರನಾದ ಅಂಗ್ಕ್ರಿಷ್ ರಘುವಂಶಿ ಶೂನ್ಯಕ್ಕೆ ಔಟ್ ಆದರೆ ಮತ್ತೋರ್ವ ಆರಂಭಿಕ ಆಟಗಾರ ಹರ್ನೂರ್ ಸಿಂಗ್ 21 ರನ್ ಗಳಿಸಿದರು. ಹೀಗೆ ಬಹು ಬೇಗನೆ ಆರಂಭಿಕ ಆಟಗಾರರನ್ನು ಕಳೆದುಕೊಂಡ ಟೀಮ್ ಇಂಡಿಯಾಗೆ ಆಸರೆಯಾದದ್ದು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶೈಖ್ ರಷೀದ್. ಹೌದು, ಕಠಿಣ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ಆಸರೆಯಾದ ಶೇಖ್ ರಶೀದ್ 84 ಎಸೆತಗಳಲ್ಲಿ 50 ರನ್ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿದರು. ಇನ್ನುಳಿದಂತೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಯಶ್ ಧುಲ್ 17 ರನ್, ರಾಜ್ ಬವಾ 35 ರನ್, ಕೌಶಲ್ ತಾಂಬೆ 1 ರನ್, ನಿಶಾಂತಂ ಸಿಂಧು ಅಜೇಯ 50 ರನ್ ಮತ್ತು ವಿಕೆಟ್ ಕೀಪರ್ ದಿನೇಶ್ ಬನ 5 ಎಸೆತಗಳಲ್ಲಿ ಅಜೇಯ 13 ರನ್ ಗಳಿಸಿದರು.
ಈ ಮೂಲಕ ಭಾರತ ಅಂಡರ್ 19 ತಂಡ 47.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿ 4 ವಿಕೆಟ್‍ಗಳ ಜಯವನ್ನು ಸಾಧಿಸಿ ಐದನೇ ಬಾರಿಗೆ ಅಂಡರ್ 19 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.