CSK vs LSG IPL 2025: ಹಳೆಯ ಖದರ್‌ನಲ್ಲಿ ಬ್ಯಾಟ್ ಮಾಡಿದ ಧೋನಿ: ಎಲ್‌ಎಸ್‌ಜಿಗೆ ಸೋಲು
ಸತತ ಐದು ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಗೂ ಜಯದ ಹಳಿಗೆ ಮರಳಿದೆ. ಲಕ್ನೋ ಸೂಪರ್ ಜೈಂಟ್ಸ್ ನೀಡಿದ್ದ 167 ರನ್‌ಗಳ ಗುರಿಯನ್ನು ಸಿಎಸ್‌ಕೆ ಐದು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದು ಬೀಗಿದೆ. ಈ ಪಂದ್ಯವನ್ನು ಗೆದ್ದು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆಯುವ ಕನಸು ಕಾಣುತ್ತಿದ್ದ ಎಲ್‌ಎಸ್‌ಜಿ ಆಸೆ ಮಣ್ಣುಪಾಲಾಗಿದೆ. ಸಿಎಸ್‌ಕೆ 18ನೇ ಆವೃತ್ತಿಯ ಐಪಿಎಲ್‌ನಲ್ಲಿ 2ನೇ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ ಎಲ್‌ಎಸ್‌ಜಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 166 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸಿಎಸ್‌ಕೆ ಇನ್ನು ಮೂರು ಎಸೆತ ಬಾಕಿ ಇರುವಂತೆ ಐದು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ತಮ್ಮ 43ನೇ ವಯಸ್ಸಿನಲ್ಲಿ ಧೋನಿ ತಮ್ಮ ಹಳೆಯ ಖದರ್‌ನಲ್ಲಿ ಬ್ಯಾಟಿಂಗ್ ಮಾಡಿ ಅಜೇಯ 26 ರನ್ ಬಾರಿಸಿದರೆ, ಶಿವಂ ದುಬೆ ಅಜೇಯ 43 ರನ್ ಸಿಡಿಸಿದರು. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಎಲ್‌ಎಸ್‌ಜಿ ಸೋಲು ಕಂಡರೂ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದೆ.

ಉತ್ತಮ ಆರಂಭ
167 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರ್ ಅಶ್ವಿನ್ ಬದಲಿಗೆ ಸ್ಥಾನ ಪಡೆದ ಶೇಕ್ ರಶೀದ್ ಹಾಗೂ ರಚಿನ್ ರವೀಂದ್ರ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 4.5 ಓವರ್‌ಗಳಲ್ಲಿ 52 ರನ್ ಸೇರಿಸಿದರು. ಶೇಕ್ ರಶೀದ್ 6 ಉತ್ತಮ ಬೌಂಡರಿಗಳ ನೆರವಿನಿಂದ 27 ರನ್ ಬಾರಿಸಿ ಔಟ್ ಆದರು.
37 ರನ್ ಬಾರಿಸಿ ಉತ್ತಮವಾಗಿ ಆಡುತ್ತಿದ್ದ ರಚಿನ್ ರವೀಂದ್ರ ಅವರಿಗೆ ಮಾರ್ಕ್ರಮ್ ಪೆವಿಲಿಯನ್ ಹಾದಿ ತೋರಿಸಿದರು. ರಾಹುಲ್ ತ್ರಿಪಾಠಿ ಸಹ 10 ಎಸೆತಗಳಲ್ಲಿ 9 ರನ್ ಬಾರಿಸಿದರೆ, ರವೀಂದ್ರ ಜಡೇಜಾ 11 ಎಸೆತಗಳಲ್ಲಿ 7 ರನ್ ಬಾರಿಸಿ ಇಬ್ಬರೂ ರವಿ ಬಿಷ್ಣೋಯಿ ತೋಡಿದ ಖೆಡ್ಡಾಗೆ ಬಲಿಯಾದರು. ಮಧ್ಯಮ ಕ್ರಮಾಂಕದಲ್ಲಿ ವಿಜಯ್ ಶಂಕರ್ ನಿರಾಸೆ ಮೂಡಿಸಿದರು.
6ನೇ ವಿಕೆಟ್‌ಗೆ ಅಜೇಯ 57 ರನ್ ಜತೆಯಾಟ
111 ರನ್‌ಗಳಿಗೆ 5 ವಿಕೆಟ್‌ಗೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಧೋನಿ ಬ್ಯಾಟಿಂಗ್ ಮಾಡಲು ಬಂದರು. ಇವರು ಮಧ್ಯಮ ಕ್ರಮಾಂಕದ ಶಿವಂ ದುಬೆ ಅವರೊಂದಿಗೆ ಸೇರಿಕೊಂಡ ಧೋನಿ 28 ಎಸೆತಗಳಲ್ಲಿ ಅಜೇಯ 57 ರನ್‌ಗಳನ್ನು ಸೇರಿಸಿ ತಂಡಕ್ಕೆ ಆಧಾರವಾಯಿತು. ಧೋನಿ 11 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 26 ರನ್ ಸಿಡಿಸಿ ಮಿಂಚಿದರು. ಇವರ ಸಂಘಟಿತ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. 2175 ದಿನಗಳ ಬಳಿಕ ಮಹೇಂದ್ರ ಸಿಂಗ್ ಧೋನಿ ಮ್ಯಾನ್ ಅಫ್ ದಿ ಮ್ಯಾಚ್ ಪಡೆದರು.

ಆರಂಭಿಕ ಆಘಾತ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭ ಕಳಪೆಯಾಗಿತ್ತು. ಎಡೇನ್ ಮಾರ್ಕ್ರಮ್ (6), ಪ್ರಸಕ್ತ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಹೊಂದಿರುವ ನಿಕೋಲಸ್ ಪೂರನ್ (8) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲದಾರು. 23 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ರಿಷಭ್ ಪಂತ್ ಹಾಗೂ ಮಿಚೆಲ್ ಮಾರ್ಷ್ ಜೋಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿತು. ಮಿಚೆಲ್ ಮಾರ್ಷ್ 30 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಆಯೂಷ್ ಬದೋನಿ 11 ಎಸೆತಗಳಲ್ಲಿ 2 ಸಿಕ್ಸರ್ ಸಹಾಯದಿಂದ 20 ರನ್ ಬಾರಿಸಿ ಔಟ್ ಆದರು.

ಪಂತ್ ಅರ್ಧಶತಕ
ಐದನೇ ವಿಕೆಟ್‌ಗೆ ರಿಷಭ್ ಪಂತ್ ಹಾಗೂ ಅಬ್ದುಲ್ ಸಮದ್ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಅರ್ಧಶತಕ ಜೊತೆಯಾಟವನ್ನು ನೀಡಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಬ್ದುಲ್ ಸಮದ್ 20 ರನ್ ಬಾರಿಸಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ಔಟ್ ಆದರು. ನಾಯಕ ರಿಷಭ್ ಪಂತ್ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 63 ರನ್ ಬಾರಿಸಿ ಮತೀಶ್ ಪತಿರಾಣ ಎಸೆತದಲ್ಲಿ ಔಟ್ ಆದರು.
ಚೆನ್ನೈ ತಂಡದ ಪರ ರವೀಂದ್ರ ಜಡೇಜಾ ಹಾಗೂ ಮತೀಶ್ ಪತಿರಾಣ ತಲಾ ಎರಡು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications