ಪ್ರಸಕ್ತ ಐಪಿಎಲ್‌ನಲ್ಲಿ ತನ್ನ ಲಯವನ್ನು ಕಂಡುಕೊಂಡಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ (Prasidh Krishna), ಗುಜರಾತ್ ಟೈಟಾನ್ಸ್ (Gujarat Titans) ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ದಿನ ದಿಂದ ದಿನಕ್ಕೆ ಇವರು ಪಕ್ವ ಆಗುತ್ತಿದ್ದು, ಎದುರಾಳಿ ಬ್ಯಾಟರ್‌ಗಳ ನಿದ್ದೆ ಗೆಡಿಸಿದ್ದಾರೆ. ಈ ಮೂಲಕ ಪ್ರಸಿದ್ಧ ಕೃಷ್ಣ ದಾದಾ ಬೌಲರ್ ರೀತಿ ಮಿಂಚುತ್ತಿದ್ದಾರೆ. ಪ್ರಸಿದ್ಧ ಈ ಐಪಿಎಲ್ ಆರಂಭಿಸಿದಾಗ ಇವರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳು ಇದ್ದವು. ಈ ಎಲ್ಲ ನಿರೀಕ್ಷೆಗಳಿಗೆ ಪೂರಕವಾಗಿ ಬೌಲಿಂಗ್ ನಡೆಸಿದ್ದಾರೆ.
ಪ್ರತಿ ಪಂದ್ಯದಲ್ಲೂ ಕರ್ನಾಟಕದ ಸ್ಟಾರ್ ವೇಗದ ಬೌಲರ್ ತಂಡಕ್ಕೆ ನೆರವಾಗುತ್ತಿದ್ದಾರೆ. ಮಿಡ್ಲ್ ಓವರ್‌ಗಳಲ್ಲಿ ಎದುರಾಳಿ ಬ್ಯಾಟರ್‌ಗಳನ್ನು ಕಾಡುವ ಪ್ರಸಿದ್ಧ ರನ್ ವೇಗಕ್ಕೆ ಕಡಿವಾಣ ಹಾಕಬಲ್ಲ ಬೌಲರ್. 18ನೇ ಆವೃತ್ತಿಯಲ್ಲಿ ಇವರು ನಿಜಕ್ಕೂ ಅಪ್‌ಡೇಟ್ ವರ್ಷನ್‌ನಲ್ಲಿ ಬೌಲಿಂಗ್ ನಡೆಸುತ್ತಿದ್ದಾರೆ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಸದ್ಯ ವಿಕೆಟ್ ಬೇಟೆ ನಡೆಸಿದ್ದಾರೆ. ಪ್ರಸಿದ್ಧ ಈಗ ವಿಕೆಟ್ ಬೇಟೆಯಲ್ಲೂ ಮುಂಚೂಣಿಯಲ್ಲಿದ್ದು ಇವರ ಮುಡಿಗೆ ಪರ್ಪಲ್ ಕ್ಯಾಪ್ ಗರಿ ಸಹ ಸಂದಿದೆ.

ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ತಮ್ಮ ಬಿಗುವಿನ ದಾಳಿಯನ್ನು ಮುಂದುವರೆಸಿದರು. ಇವರಿಗೆ ಆಶಿಶ್ ನೆಹ್ರಾ ಈ ಐಪಿಎಲ್‌ನಲ್ಲಿ ವಿಶೇಷ್ ರೋಲ್ ನೀಡಿದ್ದಾರೆ. ಈ ರೋಲ್‌ನಲ್ಲಿ ಪ್ರಸಿದ್ಧ ಮಿಂಚು ಹರಿಸುತ್ತಿದ್ದಾರೆ. ಪವರ್ ಪ್ಲೇನಲ್ಲಿ ಬಿಗುವಿನ ದಾಳಿ ನಡೆಸಿದ ಪ್ರಸಿದ್ಧ ಬಳಿಕ ಮಿಡ್ಲ್ ಓವರ್‌ನಲ್ಲಿ ಕಮಾಲ್ ಮಾಡಿದ್ದಾರೆ. ತಮ್ಮ ಬೌಲಿಂಗ್‌ನಲ್ಲಿ ಭಿನ್ನತೆ, ಸ್ಲೋ ಬೌನ್ಸರ್ ಹಾಗೂ ವೇಗದಲ್ಲಿ ಮಿಶ್ರಣ ಮಾಡಿ ಕಾಡುವ ಪ್ರಸಿದ್ಧ ಆರ್ಭಟಿಸುತ್ತಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಸಿದ್ಧ ಕೃಷ್ಣಾ, 2 ವಿಕೆಟ್ ಕಬಳಿಸಿದರು. ಇನಿಂಗ್ಸ್‌ನ 17ನೇ ಓವರ್ ಬೌಲ್ ಮಾಡಿದ ಪ್ರಸಿದ್ಧ ಮೊದಲ ಎಸೆತದಲ್ಲಿ ರಮಣ್‌ದೀಪ್ ಸಿಂಗ್ ಅವರಿಗೆ ಖೆಡ್ಡಾ ತೋಡಿದರು. ರಮಣ್‌ದೀಪ್ ಅವರನ್ನು ಪೆವಿಲಿಯನ್‌ಗೆ ಅಟ್ಟಲು ಪ್ರಸಿದ್ಧ ಸ್ಟನಿಂಗ್ ರಿರ್ಟನ್ ಕ್ಯಾಚ್ ಪಡೆದರು. ಇದೇ ಓವರ್ ಮೂರನೇ ಎಸೆತದಲ್ಲಿ ಮೋಯಿನ್ ಅಲಿ ಅವರ ಆಫ್ ಕಟರ್ ಎಸೆದು ವಂಚಿಸಿದರು. ಇದನ್ನು ತಪ್ಪಾಗಿ ಅರ್ಥಹಿಸಿಕೊಂಡ ಮೋಯಿನ್ ಶಾರುಖ್ ಖಾನ್‌ಗೆ ಸಿಂಪಲ್ ಕ್ಯಾಚ್ ನೀಡಿದರು. ಈ ಪಂದ್ಯದಲ್ಲಿ ಕೆಕೆಆರ್ 39 ರನ್‌ಗಳಿಂದ ಸೋಲು ಕಂಡಿತು. ಗುಜರಾತ್ ಟೈಟನ್ಸ್ 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಪ್ರಸಿದ್ಧ ಕೃಷ್ಣ ಈ ಐಪಿಎಲ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ಇವರು ಆಡಿದ 8 ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದು, 7.29ರ ಸರಾಸರಿಯಲ್ಲಿ ರನ್ ನೀಡಿದ್ದಾರೆ. ಪ್ರಸಿದ್ಧ ತಮ್ಮ ಬಿಗುವಿನ ದಾಳಿಯನ್ನು ಹೀಗೆ ಮುಂದುವರೆಸಿ ಗುಜರಾತ್ ಗೆಲುವಿನಲ್ಲಿ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ. ಆಶಿಶ್ ನೆಹ್ರಾ ಅವರ ಗರಡಿಯಲ್ಲಿ ಪ್ರಸಿದ್ಧ ಕೃಷ್ಣ ಉತ್ತಮ ಲಯಕ್ಕೆ ಮರಳಿರುವುದು ಖುಷಿಯ ವಿಚಾರ. ಇವರ ಈ ಪ್ರದರ್ಶನ ಸದ್ಯ ಎದುರಾಳಿ ಬ್ಯಾಟರ್‌ಗಳ ನಿದ್ದೆ ಕದ್ದಿದೆ. ಇವರ ಪ್ರದರ್ಶನ ಹೀಗೆ ಮುಂದುವರೆದರೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ತಂಡದಲ್ಲಿ ಇವರು ಸುಲಭವಾಗಿ ಆಡುವ ತಂಡದಲ್ಲಿ ಸ್ಥಾನ ಪಡೆಯಬಹುದಾಗಿದೆ.