ಐಪಿಎಲ್ 2025 ರ 47ನೇ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹೀನಾಯ ಸೋಲನ್ನು ಅನುಭವಿಸಿತು. ಪಂದ್ಯದ ವೇಳೆ ಗುಜರಾತ್ ಟೈಟಾನ್ಸ್ ತಂಡ ಮತ್ತೊಂದು ದೊಡ್ಡ ಹಿನ್ನಡೆಯನ್ನು ಎದುರಿಸಿತು. ತಂಡದ ನಾಯಕ ಶುಭಮನ್ ಗಿಲ್ ಗಾಯಗೊಂಡಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಮೈದಾನಕ್ಕೆ ಇಳಿಯಲಿಲ್ಲ. ಪಂದ್ಯದ ನಂತರ, ಶುಭಮನ್ ಗಿಲ್ ತಮ್ಮ ಗಾಯದ ಬಗ್ಗೆ ಅಪ್ಡೇಟ್ ನೀಡಿದ್ದು, ಮುಂದಿನ ಪಂದ್ಯದಲ್ಲಿ ಆಡುವ ಕುರಿತು ಕೂಡ ಮೂಹಿತಿ ಹಂಚಿಕೊಂಡಿದ್ದಾರೆ.
ಶುಭಮನ್ ಗಿಲ್ ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮಾತ್ರ ಬ್ಯಾಟಿಂಗ್ ಮಾಡಿದರು. ಈ ವೇಳೆ ಅವರು 50 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 84 ರನ್ ಗಳಿಸುವ ಮೂಲಕ ಅದ್ಭುತ ಇನ್ನಿಂಗ್ಸ್ ಆಡಿದರು. ಇದಾದ ನಂತರ ಅವರು ಫಿಲ್ಡೀಂಗ್ ಮಾಡಲಿಲ್ಲ. ಗಿಲ್ ಅವರ ಅದ್ಭುತ ಇನ್ನಿಂಗ್ಸ್ ನೆರವಿನಿಂದ ಗುಜರಾತ್ ಟೈಟಾನ್ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಇದರ ಹೊರತಾಗಿಯೂ ತಂಡವು ಸೋಲನ್ನು ಎದುರಿಸಬೇಕಾಯಿತು.

ರಾಜಸ್ಥಾನ ರಾಯಲ್ಸ್ ಸೋಲಿನ ಬಳಿಕ ಮಾತನಾಡಿದ ಶುಭಮನ್ ಗಿಲ್ ಅವರಿಗೆ ಗಾಯದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಸ್ವಲ್ಪ ಬೆನ್ನು ನೋವು ಇತ್ತು. ಇದಾದ ನಂತರ ನಾವು ಕೆಲವು ದಿನಗಳ ನಂತರ ಪಂದ್ಯವನ್ನು ಆಡಬೇಕಾಗುತ್ತದೆ. ಈ ಕಾರಣದಿಂದಾಗಿ ಫಿಸಿಯೋ ಯಾವುದೇ ಅವಕಾಶಗಳನ್ನು ತೆಗೆದುಕೊಳ್ಳಲು ಬಯಸಲಿಲ್ಲ. ಹೀಗಾಗಿ ನಾನು ಫಿಲ್ಡೀಂಗ್ ಮಾಡಲಿಲ್ಲ ಎಂದು ಹೇಳಿದ್ದಾರೆ. ಗಿಲ್ ಹೇಳಿರುವುದು ಗಮನಿಸಿದರೆ, ಅವರು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಶುಭಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ತಂಡ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ಗಿಲ್ ಕೂಡ ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಗುಜರಾತ್ ಟೈಟಾನ್ಸ್ ತಂಡ ತಮ್ಮ ನಾಯಕನ ಮೇಲೆ ಹೆಚ್ಚು ಒತ್ತಡ ನೀಡದೆ, ಚೇತರಿಸಿಕೊಳ್ಳಲು ಅವಕಾಶ ನೀಡಿದೆ.
ರಾಜಸ್ಥಾನ ರಾಯಲ್ಸ್ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ರಾಜಸ್ಥಾನ ರಾಯಲ್ಸ್ ತಂಡ 15.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸುವ ಮೂಲಕ 8 ವಿಕೆಟ್‌ಗಳ ಜಯ ಸಾಧಿಸಿತು. ರಾಜಸ್ಥಾನ ರಾಯಲ್ಸ್ ಪರ ವೈಭವ್ ಸೂರ್ಯವಂಶಿ ಅವರ 35 ಎಸೆತಗಳಲ್ಲಿ 7 ಬೌಂಡರಿ ಮತ್ತು 11 ಸಿಕ್ಸರ್‌ಗಳ ನೆರವಿನಿಂದ ಶತಕ ಬಾರಿಸಿದರು. ಈ ಅದ್ಭುತ ಪ್ರದರ್ಶನಕ್ಕಾಗಿ ವೈಭವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಈ ಗೆಲುವಿನೊಂದಿಗೆ ರಾಜಸ್ಥಾನ ಪ್ಲೇಆಫ್ ತಲುಪುವ ಸ್ಪರ್ಧೆಯಲ್ಲಿ ಉಳಿದಿದೆ.