ಕರ್ನಾಟಕ ಹಾಗೂ ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರಿಗೆ ದುರಂತಗಳು ಮತ್ತು ತಂಡದಿಂದ ಹೊರಬೀಳುವುದು ಹೊಸದೇನಲ್ಲ. ಏಕೆಂದರೆ ವೇದಾ ಕಳೆದ ಮೂರು ವರ್ಷಗಳಲ್ಲಿ ಎಲ್ಲವನ್ನೂ ಅನುಭವಿಸಿದ್ದಾರೆ.
ಪರಿಸ್ಥಿತಿಗಳು ಅವರ ಪರವಾಗಿಲ್ಲದ ಕಾರಣ, ಭಾರತ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರು ಹೊಸ ಆರಂಭವನ್ನು ಮಾಡಲು ಹತಾಶರಾಗಿದ್ದಾರೆ. ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್ (WPL) ಮೂಲಕ ಭಾರತ ರಾಷ್ಟ್ರೀಯ ಮಹಿಳಾ ತಂಡದಲ್ಲಿ ತನ್ನ ಸ್ಥಾನವನ್ನು ಮರಳಿ ಪಡೆಯಲು ಭರವಸೆಯನ್ನು ಇಟ್ಟುಕೊಂಡಿದ್ದಾರೆ.

31 ವರ್ಷದ ವೇದಾ ಕೃಷ್ಣಮೂರ್ತಿ ಕಳೆದ ಮೂರು ವರ್ಷಗಳಿಗಿಂತಲೂ ಹೆಚ್ಚು ಕಾಲ ಭಾರತ ತಂಡದ ಯೋಜನೆಯಿಂದ ಹೊರಗುಳಿದಿದ್ದಾರೆ. ಇದಕ್ಕೆ ಅವರ ವೈಯಕ್ತಿಕ ಬದುಕಿನಲ್ಲಿ ನಡೆದ ಒಂದೆರಡು ದುರಂತಗಳು ಅವರ ಆವೇಗಕ್ಕೆ ಅಡ್ಡಲಾಗಿದ್ದವು.
ಇದೇ ವೇಳೆ ಮಹಿಳಾ ಪ್ರೀಮಿಯರ್ ಲೀಗ್ (WPL)ನ ಉದ್ಘಾಟನಾ ಆವೃತ್ತಿಯಲ್ಲಿ ಯಾವುದೇ ಫ್ರಾಂಚೈಸಿಯು ವೇದಾ ಕೃಷ್ಣಮೂರ್ತಿಯನ್ನು ಆಯ್ಕೆ ಮಾಡಲಿಲ್ಲ.

ಈ ಎಲ್ಲಾ ಹಿನ್ನಡೆಗಳಿಂದ ವಿಚಲಿತರಾಗದ ವೇದಾ ಕೃಷ್ಣಮೂರ್ತಿ ತಮ್ಮ ಫಿಟ್‌ನೆಸ್‌ನಲ್ಲಿ ಶ್ರಮಿಸಿದ್ದಾರೆ, ಆಟದಲ್ಲಿ ಬಲವಾದ ಪುನರಾಗಮನವನ್ನು ಮಾಡಲು ನಿರ್ಧರಿಸಿದ್ದಾರೆ.
ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ, ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಕಡೂರು ಮೂಲದ ಆಟಗಾರ್ತಿ ವೇದಾ ಭಾರತ ಮಹಿಳಾ ರಾಷ್ಟ್ರೀಯ ತಂಡಕ್ಕೆ ಮರಳಿ ಒಪ್ಪಂದವನ್ನು ಪಡೆದುಕೊಳ್ಳಲು ಆಶಿಸುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ವೇದಾ ಕೃಷ್ಣಮೂರ್ತಿ, ""ಕ್ರಿಕೆಟ್‌ನ ಚುಟುಕು ಸ್ವರೂಪದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಅಗತ್ಯವಿರುವ ಸಾಮರ್ಥ್ಯ ಮತ್ತು ಅನುಭವವನ್ನು ಹೊಂದಿದ್ದೇನೆ ಮತ್ತು ಯಾವುದೇ ಸ್ವರೂಪದಲ್ಲಿ ಆಡುತ್ತೇನೆ ಮತ್ತು ಅದಕ್ಕೆ ಅನುಗುಣವಾಗಿ ಹೊಂದಿಕೊಳ್ಳುತ್ತೇನೆ,'' ಎಂದು ಹೇಳಿದರು.
"ಪುರುಷರ ಕ್ರಿಕೆಟ್‌ನಲ್ಲಿ ಇದು ಸಂಭವಿಸುವುದನ್ನು ನಾವು ನೋಡಿದ್ದೇವೆ. ಹಾಗಾಗಿ ಅದು ನನ್ನ ಮನಸ್ಸಿನಲ್ಲಿರುತ್ತದೆ," ಎಂದು ವೇದಾ ಕೃಷ್ಣಮೂರ್ತಿ ಹೇಳಿರುವುದನ್ನು ಇಂಡಿಯಾ ಟುಡೇ ಉಲ್ಲೇಖಿಸಿದೆ.
2023ರ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಅನ್‌ಸೋಲ್ಡ್ ಆದ ನಂತರ, ಹೆಚ್ಚು ಫಿಟ್ಟರ್ ಆಗಿರುವ ವೇದಾ ಕೃಷ್ಣಮೂರ್ತಿ ಶನಿವಾರ ನಡೆಯುವ ಮಹಿಳಾ ಪ್ರೀಮಿಯರ್ ಲೀಗ್ ಒಪ್ಪಂದವನ್ನು ಗಳಿಸಲು ಆಶಿಸುತ್ತಿದ್ದಾರೆ. ಇದು ಆಕೆಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆಯುವ ಸಾಧ್ಯತೆಯೂ ಇದೆ.
ಕರ್ನಾಕದ ಬೆಂಗಳೂರು ಮೂಲದ ಫ್ರಾಂಚೈಸಿ ಆರ್‌ಸಿಬಿ ತಂಡವು ಕರ್ನಾಟಕ ಮಹಿಳಾ ತಂಡದ ನಾಯಕಿ ಆಗಿರುವ ವೇದಾ ಕೃಷ್ಣಮೂರ್ತಿ ಅವರನ್ನು ಖರೀದಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
"ಖಂಡಿತವಾಗಿಯೂ, ಡಬ್ಲ್ಯುಪಿಎಲ್ ಮಹಿಳಾ ಕ್ರಿಕೆಟರ್‌ಗಳಿಗೆ ಉತ್ತಮ ವೇದಿಕೆಯಾಗಿದೆ. ವಿಶೇಷವಾಗಿ ನನ್ನಂತೆ ಒಂದೇ ದೋಣಿಯಲ್ಲಿ ಇರುವವರಿಗೆ. ನಾನು ಕಳೆದ ಮೂರು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿಲ್ಲ, ಆದ್ದರಿಂದ ನೀವು ಉತ್ತಮವಾಗಿ ಕಾರ್ಯನಿರ್ವಹಿಸಲು ಬಯಸುವ ವೇದಿಕೆ ಇದಾಗಿದೆ. ನೀವು ಇಂತಹ ವೇದಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾದರೆ ಅದು ಭಾರತ ತಂಡಕ್ಕೂ ಬಾಗಿಲು ತೆರೆಯುತ್ತದೆ," ಎಂದು ವೇದಾ ಕೃಷ್ಣಮೂರ್ತಿ ತಿಳಿಸಿದರು.
ಭಾರತ ಮಹಿಳಾ ತಂಡದ ಪರ 48 ಏಕದಿನ ಪಂದ್ಯಗಳಲ್ಲಿ 71 ರನ್‌ಗಳ ಅತ್ಯುತ್ತಮ ಸ್ಕೋರ್‌ನೊಂದಿಗೆ 829 ರನ್ ಗಳಿಸಿರುವ ವೇದಾ ಕೃಷ್ಣಮೂರ್ತಿ, ಲಾರ್ಡ್ಸ್‌ನಲ್ಲಿ ನಡೆದ 2017ರ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಕೇವಲ 9 ರನ್‌ಗಳಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ ಸೋತು ರನ್ನರ್-ಅಪ್ ಸ್ಥಾನ ಗಳಿಸಿದ ಭಾರತೀಯ ತಂಡದ ಸದಸ್ಯೆಯಾಗಿದ್ದರು.
ಕರ್ನಾಟಕದ ವೇದಾ ಕೃಷ್ಣಮೂರ್ತಿ ಅವರು ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾದಲ್ಲಿ ಕ್ರಮವಾಗಿ 2018 ಮತ್ತು 2020ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಮಹಿಳಾ ತಂಡದ ಭಾಗವಾಗಿದ್ದರು.
ಆದರೆ, ವೇದಾ ಕೃಷ್ಣಮೂರ್ತಿ ವೈಯಕ್ತಿಕ ಬದುಕಿನಲ್ಲಿ ಅವಳಿ ದುರಂತಗಳು ನಡೆದವು. 2021ರಲ್ಲಿ ತನ್ನ ತಾಯಿ ಮತ್ತು ಅಕ್ಕನನ್ನು ಎರಡು ವಾರಗಳ ಅಂತರದಲ್ಲಿ ಕೋವಿಡ್‌ಗೆ ಕಳೆದುಕೊಂಡ ನಂತರ, ವೇದಾ ಕ್ರಿಕೆಟ್ ವೃತ್ತಿಜೀವನವನ್ನು ಸ್ಥಗಿತಗೊಳಿಸಿದರು ಮತ್ತು ಅದರಿಂದ ಹೊರಬರಲು ಆಕೆ ಬಹಳ ಸಮಯ ತೆಗೆದುಕೊಂಡಳು.