
ಭಾರತ ದಕ್ಷಿಣ ಆಫ್ರಿಕಾ ಸರಣಿ ಮುಗಿಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಸರಣಿಗೆ ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ತಮಡದ ಹಿರಿಯ ಆಟಗಾರನೋರ್ವ ಮತ್ತೆ ಭಾರತ ತಂಡದಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ತಾನು ನಿವೃತ್ತಿಯ ಬಗ್ಗೆ ಇನ್ನೂ ಯೋಚನೆ ಮಾಡುತ್ತಿಲ್ಲ. ನನ್ನಲ್ಲಿ ಇನ್ನೂ ಕ್ರಿಕೆಟ್ ಉಳಿದಿದ್ದು ಟಿ20 ಮಾದರಿಯಲ್ಲಿ ಭಾರತವನ್ನು ಮತ್ತೆ ಪ್ರತಿನಿಧಿಸುವ ವಿಶ್ವಾಸವಿದೆ ಎಂದಿದ್ದಾರೆ.
ಹೀಗೆ ಭಾರತ ತಂಡದಲ್ಲಿ ಮತ್ತೆ ಆಡುವ ವಿಶ್ವಾಸವನ್ನು ವ್ಯಕ್ತಪಡಿಸಿದ ಆಟಗಾರ ಬೇರೆ ಯಾರೂ ಅಲ್ಲ. ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್. ಟೀಮ್ ಇಂಡಿಯಾ ಟಿ20 ತಂಡದಲ್ಲಿ ಫಿನಿಷರ್ ಆಗಿ ಮತ್ತೆ ಕಣಕ್ಕಿಳಿಯುವ ವಿಶ್ವಾಸವನ್ನು ದಿನೇಶ್ ಕಾರ್ತಿಕ್ ವ್ಯಕ್ತಪಡಿಸಿದ್ದಾರೆ. ದಿನೇಶ್ ಕಾರ್ತಿಕ್ 2019ರ ಏಕದಿನ ವಿಶ್ವಕಪ್‌ನ ಬಳಿಕ ತಂಡದಿಂದ ಹೊರಗುಳಿದಿದ್ದಾರೆ. ಸದ್ಯ ಐಪಿಎಲ್‌ನಲ್ಲಿ ಸಕ್ರಿಯವಾಗಿರುವ ದಿನೇಶ್ ಕಾರ್ತಿಕ್ ಕಾಮೆಂಟೇಟರ್ ಆಗಿಯೂ ಇತ್ತೀಚೆಗೆ ಖ್ಯಾತರಾಗಿದ್ದಾರೆ.
ದಿನೇಶ್ ಕಾರ್ತಿಕ್ ಭಾರತ ತಂಡದ ಪರವಾಗಿ 26 ಟೆಸ್ಟ್, 94 ಏಕದಿನ ಮತ್ತು 32 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ದೇಶೀಯ ಕ್ರಿಕೆಟ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ದಿನೇಶ್ ಕಾರ್ತಿಕ್ ಸಕ್ರಿಯವಾಗಿದ್ದು ಆಡುತ್ತಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ತಮಿಳುನಾಡು ಪರ ಆಡುವ ದಿನೇಶ್ ಕಾರ್ತಿಕ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ವಿಜೇತ ತಂಡ ಮತ್ತು ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಫೈನಲ್ ತಲುಪಿದ ತಂಡದ ಭಾಗವಾಗಿದ್ದರು.
ಭಾರತ ತಂಡದ ಪರವಾಗಿ ಮತ್ತೊಮ್ಮ ಆಡುವ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್ ಮತ್ತೊಮ್ಮೆ ಆಡುವ ಕನಸು ನನಸಾಗುವ ವಿಶ್ವಾಸವನ್ನೂ ಹೊಂದಿದ್ದಾರೆ. "ದೇಶಕ್ಕಾಗಿ ಮತ್ತೊಮ್ಮೆ ಆಡುವ ಮಹತ್ವಾಕಾಂಕ್ಷೆಯನ್ನು ನಾನು ಪ್ರಾಮಾಣಿಕವಾಗಿ ಹೊಂದಿದ್ದೇನೆ ಮತ್ತು ಅದನ್ನು ಪೂರೈಸಲು ನಾನು ಸಾಧ್ಯವಿರುವ ಎಲ್ಲವನ್ನೂ ಮಾಡಲು ಬಯಸುತ್ತೇನೆ. ಭಾರತ ತಂಡವನ್ನು ಮತ್ತೆ ಪ್ರತಿನಿಧಿಸುವುದು ನನ್ನ ಅಂತಿಮ ಗುರಿಯಾಗಿದೆ. ಅದಕ್ಕಾಗು ಕಠಿಣ ತರಬೇತಿಯನ್ನು ಪಡೆಯುತ್ತಿದ್ದು ಸತತ ಪ್ರಯತ್ನ ನಡೆಸುತ್ತಿದ್ದೇನೆ. ನನಗೆ ಮುಂದಿನ ಮೂರು ವರ್ಷಗಳ ಕಾಲ ಆಡುವುದು ಹಾಗೂ ಅದಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ನಡೆಸುವತ್ತ ಚಿತ್ತ ಹರಿಸುತ್ತೇನೆ. ಈ ಆಟವನ್ನು ನಾನು ಬಹಳ ಇಷ್ಟಪಡುತ್ತೇನೆ" ಎಂದಿದ್ದಾರೆ ದಿನೇಶ್ ಕಾರ್ತಿಕ್.
ಇನ್ನು ಇದೇ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ತಾನು ಭಾರತ ತಂಡದ ಪರವಾಗಿ ಆಡುವ ದೃಷ್ಟಿಯಿಂದಲೇ ದೇಶೀಯ ಕ್ರಿಕೆಟ್‌ನಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿರುವುದಾಗಿ ದಿನೇಶ್ ಕಾರ್ತಿಕ್ ಹೇಳಿದ್ದಾರೆ. "ಭಾರತದ ಪರವಾಗಿ ಆಡುವ ದೃಷ್ಟಿಯಿಂದಲೇ ನಾನು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟೂರ್ನಿಯಲ್ಲಿ ತಮಿಳುನಾಡು ತಂಡದ ಪರವಾಗಿ ಆಡಿದ್ದೇನೆ. ದೇಶಿಯ ಕ್ರಿಕೆಟ್‌ನಲ್ಲಿ ನಾವು ಪಡೆದ ಯಶಸ್ಸು ಅದ್ಭುತವಾದದ್ದು. ಈ ಸಂದರ್ಭದಲ್ಲಿ ನಾನು ತಂಡದ ಭಾಗವಾಗಿದ್ದ ಕಾರಣ ನಾನು ಸಾಕಷ್ಟು ಆನಂದಿಸಿದ್ದೇನೆ" ಎಂದು ದಿನೇಶ್ ಕಾರ್ತಿಕ್ ಹೇಳಿಕೆ ನೀಡಿದ್ದಾರೆ.
"ನನ್ನ ಈಗಿನ ಗುರಿ ಮತ್ತೊಮ್ಮೆ ಭಾರತ ತಂಡದ ಪರವಾಗಿ ಆಡುವುದಾಗಿದೆ. ವಿಶೇಷವಾಗಿ ಟಿ20 ಮಾದರಿ ನನ್ನ ಪ್ರಮುಖ ಆದ್ಯತೆಯಾಗಿದೆ. ಟಿ20 ನನಗೆ ವಿಶೇಷವಾಗಿದ್ದು ಅದರಲ್ಲಿ ಕಣಕ್ಕಿಳಿಯಲು ನನ್ನ ಹೊಟ್ಟೆಯಲ್ಲಿ ಬೆಂಕಿಯಿನ್ನೂ ಉರಿಯುತ್ತಿದೆ" ಎಂದು ಹೇಳಿದ್ದಾರೆ. ದಿನೇಶ್ ಜಾರ್ತಿಕ್ ಭಾರತದ ಪರವಾಗಿ 32 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ.