
2022ರ ವಿಜಯ್ ಹಜಾರೆ ಟ್ರೋಫಿಯ ನಾಕೌಟ್ ರೇಸ್‌ನಿಂದ ದೆಹಲಿ ತಂಡ ಅಧಿಕೃತವಾಗಿ ಹೊರಬಿದ್ದಿದೆ. ಸೋಮವಾರ ಜಾರ್ಖಂಡ್ ವಿರುದ್ಧ ಐದು ವಿಕೆಟ್‌ಗಳ ಸೋಲು ಅನುಭವಿಸಿದ ನಂತರ ಪಂದ್ಯಾವಳಿಯಲ್ಲಿ ಮೂರನೇ ಸೋಲು ಕಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ತಂಡ, ಆಯುಷ್ ಬದೋನಿ ಅವರ 69 ಎಸೆತಗಳಲ್ಲಿ ಅಜೇಯ 91 ರನ್ ಬಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳು ಒಳಗೊಂಡಿದ್ದವು. ಇನ್ನು ನಾಯಕ ನಿತೀಶ್ ರಾಣಾ 52 ಎಸೆತಗಳಲ್ಲಿ 51 ರನ್ ಮತ್ತು ಯಶ್ ಧುಲ್ 78 ಎಸೆತಗಳಲ್ಲಿ 49 ರನ್ ಗಳಿಸಿದರ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ ಐದು ವಿಕೆಟ್‌ಗೆ 259 ರನ್ ಗಳಿಸಿತು.
ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್ ಜಾರ್ಖಂಡ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ತಮ್ಮ ಕೋಟಾದ 10 ಓವರ್‌ಗಳಲ್ಲಿ ಕೇವಲ 34 ರನ್‌ಗಳನ್ನು ಬಿಟ್ಟುಕೊಟ್ಟರು.
260 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ ಜಾರ್ಖಂಡ್ ತಂಡ ವಿರಾಟ್ ಸಿಂಗ್ ಅವರ 128 ಎಸೆತಗಳಲ್ಲಿ ಅಜೇಯ 116 ರನ್ ಸಹಾಯದಿಂದ 48.5 ಓವರ್‌ಗಳಲ್ಲಿ ನಿಗದಿತ ಗುರಿ ತಲುಪಿತು. ಇನ್ನು ಕುಮಾರ್ ಕುಶಾಗ್ರಾ 40 ಎಸೆತಗಳಲ್ಲಿ 49 ರನ್ ಬಾರಿಸಿ ತಮ್ಮ ತಂಡದ ಗೆಲುವಿಗೆ ನೆರವಾದರು.
2022ರ ವಿಜಯ್ ಹಜಾರೆ ಟ್ರೋಫಿ ಟಿ20 ಪಂದ್ಯಾವಳಿಯಲ್ಲಿ ನಾಕೌಟ್ ತಲುಪಲು ಹೋರಾಡಿದ ದೆಹಲಿ ತಂಡ, ಈ ಹಿಂದೆ ರಾಜಸ್ಥಾನ ಮತ್ತು ಕರ್ನಾಟಕ ವಿರುದ್ಧ ಸೋಲಿನ ನಂತರ ಸೋಮವಾರ ತಮ್ಮ ಮೂರನೇ ಸೋಲು ಅನುಭವಿಸಿತು.
ಅನುಭವಿ ವೇಗಿ ಇಶಾಂತ್ ಶರ್ಮಾ ಎಂಟು ಓವರ್‌ಗಳನ್ನು ಬೌಲ್ ಮಾಡಿ 40 ರನ್ ಬಿಟ್ಟುಕೊಟ್ಟರೆ, ಲಲಿತ್ ಯಾದವ್ ಮತ್ತು ಶಿವಾಂಕ್ ವಶಿಷ್ಟ್ ತಲಾ ಎರಡು ವಿಕೆಟ್ ಪಡೆದರು.
ದೆಹಲಿ ವಿರುದ್ಧದ ಗೆಲುವಿನೊಂದಿಗೆ ಜಾರ್ಖಂಡ್ ತಂಡ ಈಗ ಆರು ಪಂದ್ಯಗಳಿಂದ ಐದು ಗೆಲುವುಗಳನ್ನು ಹೊಂದಿದ್ದು, ಬಿ ಗುಂಪಿನಲ್ಲಿ 20 ಅಂಕಗಳನ್ನು ಗಳಿಸಿದೆ. ಕರ್ನಾಟಕ ಮತ್ತು ಅಸ್ಸಾಂ ತಂಡಗಳು ಕೂಡ 20 ಅಂಕಗಳೊಂದಿಗೆ ಇವೆ. ದೆಹಲಿ ತನ್ನ ಅಂತಿಮ ಲೀಗ್ ಪಂದ್ಯವನ್ನು ಬುಧವಾರ ಅಸ್ಸಾಂ ವಿರುದ್ಧ ಆಡಲಿದೆ.
ಬಿ ಗುಂಪಿನ ಇತರ ಪಂದ್ಯಗಳಲ್ಲಿ ಅಸ್ಸಾಂ ತಂಡ ಏಳು ವಿಕೆಟ್‌ಗಳಿಂದ ವಿದರ್ಭವನ್ನು ಸೋಲಿಸಿದರೆ, ಕರ್ನಾಟಕ ತಂಡವು ಸಿಕ್ಕಿಂ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಇನ್ನು ರಾಜಸ್ಥಾನ ಮೇಘಾಲಯ ವಿರುದ್ಧ 296 ರನ್‌ಗಳ ಬೃಹತ್ ಅಂತರದ ಜಯ ಗಳಿಸಿತು.