ಬೆಂಗಳೂರು, ಡಿ. 14: ವಿಜಯ್ ಹಜಾರೆ ಟ್ರೋಫಿಯಲ್ಲಿ ರೈಲ್ವೇಸ್ ವಿರುದ್ಧದ ಸೋಲಿನ ನಂತರ ಹರ್ಯಾಣ ತಂಡದ ವಿರುದ್ಧ 38 ರನ್ ಗಳ ವಿನಯ್ ಕುಮಾರ್ ಪಡೆ ಜಯ ದಾಖಲಿಸಿತ್ತು. ಸೋಮವಾರದಂದು ಗುಜರಾತ್ ತಂಡವನ್ನು 15ರನ್ ಗಳಿಂದ ಸೋಲಿಸಿ ಸತತ ಎರಡನೇ ಜಯ ಗಳಿಸಿದೆ.
ಮಳೆ, ಮಂಜು ಮುಸುಕಿದ ವಾತಾವರಣ ಕಾರಣ ಪಂದ್ಯವನ್ನು 44 ಓವರ್ ಗಳಿಗೆ ಸೀಮಿತಗೊಳಿಸಲಾಗಿಸಲಾಗಿತ್ತು. ಕರ್ನಾಟಕ ನೀಡಿದ್ದ 234ರನ್ ಮೊತ್ತಕ್ಕೆ ಪ್ರತಿಯಾಗಿ ಗುಜರಾತ್ ತಂಡ 189/8 ಸ್ಕೋರ್ ಮಾಡಿತು. ವಿ ಜಯದೇವನ್ (ಡಕ್ ವರ್ತ್ ಲೂಯಿಸ್ ನಿಯಮದಂತೆ ವಿಜೆಡಿ ನಿಯಮ) ನಿಯಮದಂತೆ ಕರ್ನಾಟಕವನ್ನು ವಿಜಯಿ ಎಂದು ಘೋಷಿಸಲಾಯಿತು. ಈ ಮೂಲಕ ಕರ್ನಾಟಕ ಮತ್ತೊಮ್ಮೆ 4 ಅಂಕ ಗಳಿಸಿದೆ. [ಕರ್ನಾಟಕ ವಿರುದ್ಧ ರೈಲ್ವೆಸ್ ಗೆ ರೋಚಕ ಜಯ]

ಮೊದಲು ಬ್ಯಾಟ್ ಮಾಡಿದ ಕರ್ನಾಟಕದ ಪರ ಆರಂಭಿಕ ಆಟಗಾರ ಮಾಯಂಕ್ ಅಗರವಾಲ್ 58ರನ್, ಮನೀಶ್ ಪಾಂಡೆ ಅಜೇಯ 94ರನ್ (123ಎಸೆತ, 6x4,1x6) ಗಳಿಸಿದ್ದು ಬಿಟ್ಟರೆ ಮಿಕ್ಕವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಸ್ಟುವರ್ಟ್ ಬಿನ್ನಿ 24ರನ್ ಗಳಿಸಿ ತಂಡದ ಮೊತ್ತಕ್ಕೆ ತಮ್ಮ ಕೊಡುಗೆ ನೀಡಿದರು. ನಿಗದಿತ 50 ಓವರ್ ಗಳಲ್ಲಿ ಕರ್ನಾಟಕ 8 ವಿಕೆಟ್ ನಷ್ಟಕ್ಕೆ 233ರನ್ ಸ್ಕೋರ್ ಮಾಡಿತು.
ಇದನ್ನು ಚೇಸ್ ಮಾಡಿದ ಗುಜರಾತ್ ಗೆ ಎಸ್ಕೆ ಪಟೇಲ್ ಹಾಗೂ ಪಾಂಚಲ್ ಉತ್ತಮ ಆರಂಭ ನೀಡಿದರು. ಪಾಂಚಲ್ 52 ಹಾಗೂ ಪಟೇಲ್ 25ರನ್ ಗಳಿಸಿ ಔಟಾದರು. ಚಿರಾಗ್ ಗಾಂಧಿ 43 ಹಾಗೂ ಅಕ್ಷರ್ ಪಟೇಲ್ 27 ರನ್ ಗಳಿಸಿ ಪ್ರತಿರೋಧ ತೋರಿದರು. [2014: ಕರ್ನಾಟಕದ ಮಡಿಲಿಗೆ ವಿಜಯ್ ಹಜಾರೆ ಟ್ರೋಫಿ]
ಕೊನೆಗೆ ಓವರ್ ಗಳು ಕಡಿತಗೊಂಡು 44 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 188ರನ್ ಅಷ್ಟೇ ಗಳಿಸಲು ಸಾಧ್ಯವಾಯಿತು. ಕರ್ನಾಟಕ ಪರ ವಿನಯ್ ಕುಮಾರ್, ಸುಚಿತ್, ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್, ಮಿಥುನ್ ಹಾಗೂ ಪ್ರವೀಣ್ ದುಬೆ ತಲಾ 1 ವಿಕೆಟ್ ಪಡೆದರು. ಕರ್ನಾಟಕ ತನ್ನ ಮುಂದಿನ ಪಂದ್ಯದಲ್ಲಿ ಜಾರ್ಖಂಡ್ ತಂಡವನ್ನು ಎದುರಿಸಲಿದೆ. [ಬೆಂಗಳೂರಲ್ಲಿ ಧೋನಿ ಬ್ಯಾಟಿಂಗ್ ತಪ್ಪದೇ ನೋಡಿ]
ಬಿಸಿಸಿಐ 50 ಓವರ್‌ಗಳ ಟೂರ್ನಿ ವಿಜಯ್ ಹಜಾರೆ ಟ್ರೋಫಿಯನ್ನು ಕಳೆದ ಎರಡು ವರ್ಷಗಳಿಂದ ವರ್ಷದ ಕೊನೆಯಲ್ಲಿ ನಡೆಸುತ್ತಿದೆ. ಈ ವರ್ಷ 27 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಭಜಿಸಲಾಗಿದ್ದು, ಪ್ರತಿ ಗುಂಪಿನಲ್ಲಿ 7 ತಂಡಗಳಿವೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ನಾಕೌಟ್‌ಗೆ ಅರ್ಹತೆ ಪಡೆಯುತ್ತವೆ. ಬೆಂಗಳೂರು, ರಾಜ್‌ಕೋಟ್, ಹೈದರಾಬಾದ್ ಹಾಗೂ ದೆಹಲಿಯಲ್ಲಿ ಟೂರ್ನಿ ನಡೆಯಲಿದೆ.(ಒನ್ ಇಂಡಿಯಾ ಸುದ್ದಿ)