6 ಸಿಕ್ಸರ್ ಸಿಡಿಸಿದ ಶಾರುಖ್ ಖಾನ್; ಈ ವರ್ಷ ಎರಡನೇ ಬಾರಿ ಕರ್ನಾಟಕಕ್ಕೆ ಟ್ರೋಫಿ ತಪ್ಪಿಸಿದ ತ.ನಾಡು!

2021-22ನೇ ಸಾಲಿನ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ 2 ಪಂದ್ಯದಲ್ಲಿ ಇಂದು ಬದ್ಧ ವೈರಿಗಳಾದ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಸೆಣಸಾಟ ನಡೆಸಿದವು. ಈ ಮಹತ್ವದ ಪಂದ್ಯದಲ್ಲಿ ಜಯ ಸಾಧಿಸಿರುವ ತಮಿಳುನಾಡು ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದ್ದು, ಹೀನಾಯವಾಗಿ ಸೋತಿರುವ ಕರ್ನಾಟಕ ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ಈ ವರ್ಷ ಎರಡನೇ ಬಾರಿಗೆ ತಮಿಳುನಾಡಿನ ವಿರುದ್ಧ ಸೋಲುವುದರ ಮೂಲಕ ಕರ್ನಾಟಕ ಟ್ರೋಫಿ ಎತ್ತಿಹಿಡಿಯುವ ತನ್ನ ಕನಸನ್ನು ಭಗ್ನ ಮಾಡಿಕೊಂಡಿದೆ.
ಜೈಪುರದ ಕೆ ಎಲ್ ಸೈನಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದರ ಮೂಲಕ ತಮಿಳುನಾಡು ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಆಹ್ವಾನವನ್ನು ನೀಡಿತು. ಹೀಗೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ತಮಿಳುನಾಡು ಪರ ಆರಂಭಿಕ ಆಟಗಾರನಾದ ಎನ್ ಜಗದೀಶನ್ ಅತ್ಯುತ್ತಮ ಆರಂಭವನ್ನು ಕಟ್ಟಿಕೊಡುವುದರ ಮೂಲಕ 102 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಇನ್ನುಳಿದಂತೆ ಸಾಯಿ ಕಿಶೋರ್ 61, ಇಂದ್ರಜಿತ್ 31 ಮತ್ತು ದಿನೇಶ್ ಕಾರ್ತಿಕ್ 44 ರನ್ ಗಳಿಸಿದರೆ, ಅಂತಿಮ ಹಂತದಲ್ಲಿ ಅಬ್ಬರಿಸಿದ ಶಾರುಖ್ ಖಾನ್ 39 ಎಸೆತಗಳಲ್ಲಿ 79 ರನ್ ಬಾರಿಸಿದರು. 45 ಓವರ್ ಆಗಿದ್ದಾಗ 290 ರನ್ ಗಳಿಸಿದ್ದ ತಮಿಳುನಾಡು 6 ಸಿಕ್ಸರ್ 7 ಬೌಂಡರಿ ಚಚ್ಚಿ ಶಾರುಖ್ ಖಾನ್ ನಡೆಸಿದ ಅಬ್ಬರದ ಬ್ಯಾಟಿಂಗ್ ನೆರವಿನಿಂದ 50 ಓವರ್ ಆಗುವಷ್ಟರಲ್ಲಿ 350ರ ಗಡಿಯನ್ನು ದಾಟಿತು.
ಈ ಮೂಲಕ ತಮಿಳುನಾಡು ಅಂತಿಮವಾಗಿ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 354 ರನ್ ಗಳಿಸಿ ಎದುರಾಳಿ ಕರ್ನಾಟಕ ತಂಡಕ್ಕೆ ಗೆಲ್ಲಲು 355 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಕರ್ನಾಟಕದ ಬೌಲರ್‌ಗಳು ತಮಿಳುನಾಡು ತಂಡದ 8 ವಿಕೆಟ್ ಪಡೆದರೂ ಸಹ ದೊಡ್ಡ ರನ್ ನೀಡಿ ದುಬಾರಿಯಾದರು. ಪ್ರಸಿದ್ಧ್ ಕೃಷ್ಣ 10 ಓವರ್ ಮಾಡಿ 57 ರನ್ ನೀಡಿ 2 ವಿಕೆಟ್ ಪಡೆದರೆ, ವಿಜಯ್ ಕುಮಾರ್ ವೈಶಾಖ್ 10 ಓವರ್ ಮಾಡಿ ಬರೋಬ್ಬರಿ 79 ರನ್ ನೀಡಿ 1 ವಿಕೆಟ್ ಪಡೆದರು, ಪ್ರತೀಕ್ ಜೈನ್ 9 ಓವರ್ ಮಾಡಿ 79 ರನ್ ನೀಡಿ ಯಾವುದೇ ವಿಕೆಟ್ ಪಡೆಯದೇ ದುಬಾರಿಯಾದರು, ಕಾರಿಯಪ್ಪ 10 ಓವರ್ ಮಾಡಿ 46 ರನ್ ನೀಡಿ 1 ವಿಕೆಟ್ ಪಡೆದರು, ಪ್ರವೀಣ್ ದುಬೆ 10 ಓವರ್ ಮಾಡಿ 67 ರನ್ ನೀಡಿ 3 ವಿಕೆಟ್ ಪಡೆದರು ಹಾಗೂ ಅಭಿನವ್ ಮನೋಹರ್ 1 ಓವರ್ ಮಾಡಿ 14 ರನ್ ನೀಡಿ ಯಾವುದೇ ವಿಕೆಟ್ ಪಡೆಯಲಿಲ್ಲ. ಹೀಗೆ ಕರ್ನಾಟಕದ ಬೌಲಿಂಗ್ ವಿಭಾಗ ಕಳಪೆ ಪ್ರದರ್ಶನ ನೀಡುವುದರ ಮೂಲಕ ತಮಿಳುನಾಡು ತಂಡಕ್ಕೆ ಹೆಚ್ಚಿನ ರನ್ ನೀಡಿ ತಂಡದ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿಕೊಂಡಿತು.

ಕರ್ನಾಟಕ 203ಕ್ಕೆ ಆಲ್ಔಟ್
ಇನ್ನು ತಮಿಳುನಾಡು ತಂಡ ನೀಡಿದ ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಕರ್ನಾಟಕ 39 ಓವರ್‌ಗಳಲ್ಲಿ 203 ರನ್‌ಗಳಿಗೆ ಆಲ್ ಔಟ್ ಆಯಿತು. ಕರ್ನಾಟಕ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ರೋಹನ್ ಕದಂ 24 ರನ್ ಗಳಿಸಿದರೆ, ದೇವದತ್ ಪಡಿಕ್ಕಲ್ ಶೂನ್ಯಕ್ಕೆ ಔಟ್ ಆಗುವ ಮೂಲಕ ಮುಗ್ಗರಿಸಿದರು. ಇನ್ನುಳಿದಂತೆ ಕೃಷ್ಣಮೂರ್ತಿ ಸಿದ್ಧಾರ್ಥ್ 29, ನಾಯಕ ಮನೀಷ್ ಪಾಂಡೆ 9, ಅಭಿನವ್ ಮನೋಹರ್ 34, ಶ್ರೀನಿವಾಸ್ ಶರತ್ 43, ಪ್ರವೀಣ್ ದುಬೆ 26, ವಿಜಯ್ ಕುಮಾರ್ ವೈಶಾಖ್ 5, ಕಾರಿಯಪ್ಪ 10, ಪ್ರಸಿದ್ಧ್ ಕೃಷ್ಣ 8 ಮತ್ತು ಪ್ರತೀಕ್ ಜೈನ್ ಅಜೇಯ 2 ರನ್ ಕಲೆ ಹಾಕಿದರು. ಈ ಮೂಲಕ ತಮಿಳುನಾಡು ಬೌಲಿಂಗ್ ದಾಳಿಗೆ ತತ್ತರಿಸಿದ ಕರ್ನಾಟಕ 203 ರನ್‌ಗಳಿಗೆ ಆಲ್ ಔಟ್ ಆಗಿ 151 ರನ್‌ಗಳ ಹೀನಾಯ ಸೋಲನ್ನು ಕಂಡಿತು.

ತ. ನಾಡು ಉತ್ತಮ ಬೌಲಿಂಗ್
ತಮಿಳುನಾಡು ತಂಡದ ಪರ ವಾಷಿಂಗ್ಟನ್ ಸುಂದರ್ 9 ಓವರ್ ಮಾಡಿ 43 ರನ್ ನೀಡಿ 3 ವಿಕೆಟ್ ಪಡೆದರೆ, ಆರ್ ಸಿಲಂಬರಸನ್ 8 ಓವರ್ ಮಾಡಿ 36 ರನ್ ನೀಡಿ 4 ವಿಕೆಟ್ ಪಡೆದರು. ಹೀಗೆ ಈ ಇಬ್ಬರೂ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಕರ್ನಾಟಕದ ಆಟಗಾರರನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ಸಂದೀಪ್ ವಾರಿಯರ್, ರವಿಶ್ರೀನಿವಾಸನ್ ಸಾಯಿ ಕಿಶೋರ್ ಮತ್ತು ಮಣಿಮಾರನ್ ಸಿದ್ಧಾರ್ಥ್ ತಲಾ ಒಂದೊಂದು ವಿಕೆಟ್ ಪಡೆದರು.

ವರ್ಷದಲ್ಲಿ ಕರ್ನಾಟಕಕ್ಕೆ ಎರಡನೇ ಸೋಲುಣಿಸಿದ ತ. ನಾಡು
ಈ ಮೂಲಕ ಕ್ವಾರ್ಟರ್ ಫೈನಲ್ ಸುತ್ತಿನ ಈ ಪಂದ್ಯದಲ್ಲಿ ಕರ್ನಾಟಕಕ್ಕೆ ಸೋಲುಣಿಸಿದ ತಮಿಳುನಾಡು ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯನ್ನು ಎತ್ತಿಹಿಡಿಯಬೇಕೆಂಬ ಕರ್ನಾಟಕದ ಕನಸಿಗೆ ತಣ್ಣೀರು ಎರಚಿ ತಾನು ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದೆ. ಹಾಗೂ ಇತ್ತೀಚೆಗಷ್ಟೇ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿಯೂ ಕೂಡ ಕರ್ನಾಟಕಕ್ಕೆ ಸೋಲನ್ನುಣಿಸಿ ಟ್ರೋಫಿ ಎತ್ತಿ ಹಿಡಿಯುವ ಕನಸನ್ನು ಅಂತಿಮ ಹಂತದಲ್ಲಿ ಭಗ್ನಗೊಳಿಸಿದ ತಮಿಳುನಾಡು ಚಾಂಪಿಯನ್ಸ್ ಆಗಿ ಹೊರ ಹೊಮ್ಮಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications