
ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಅಜೇಯ ದ್ವಿಶತಕ ದಾಖಲಿಸಿದ್ದಲ್ಲದೆ ಓವರ್‌ನಲ್ಲಿ ಏಳು ಸಿಕ್ಸರ್ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ
49ನೇ ಓವರ್‌ನಲ್ಲಿ ಅಬ್ಬರಿಸಿದ ರುತುರಾಜ್ ಗಾಯಕ್ವಾಡ್ ಬರೋಬ್ಬರಿ 7 ಸಿಕ್ಸರ್ ಸಿಡಿಸುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ. ಎಡಗೈ ಸ್ಪಿನ್ನರ್ ಶಿವ ಸಿಂಗ್ ಬೌಲಿಂಗ್‌ನಲ್ಲಿ ಒಂದರ ಹಿಂದೆ ಮತ್ತೊಂದರಂತೆ ಸಿಕ್ಸರ್ ಸಿಡಿಸಿದ ಗಾಯಕ್ವಾಡ್, ನೋ ಬಾಲ್ ಎಸೆತದಲ್ಲೂ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ಓವರ್‌ನಲ್ಲಿ ಏಳು ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎಂಬ ಸಾಧನೆ ಮಾಡಿದರು.
159 ಎಸೆತಗಳಲ್ಲಿ ಅಜೇಯ 220 ರನ್ ಕಲೆಹಾಕುವ ಮೂಲಕ ಮಿಂಚಿದರು. 138.36 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ರುತುರಾಜ್ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 16 ಬೊಂಬಾಟ್ ಸಿಕ್ಸರ್‌ಗಳಿದ್ದವು.
49ನೇ ಓವರ್‌ನಲ್ಲಿ 43 ರನ್ ಸಿಡಿಸಿದ ರುತುರಾತ್ ಗಾಯಕ್ವಾಡ್ ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಸಾಧನೆ ಮಾಡಿದ್ರೆ, ಉತ್ತರ ಪ್ರದೇಶ ಸ್ಪಿನ್ನರ್ ಶಿವ ಸಿಂಗ್ ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ. ಈ ಮೂಲಕ 2007ರ ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಕೈನಲ್ಲಿ 36ರನ್ ಚಚ್ಚಿಸಿಕೊಂಡಿದ್ದ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಸ್ವಲ್ಪ ನೆಮ್ಮದಿಯಾಗಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಓವರ್‌ವೊಂದರಲ್ಲಿ ಅತಿ ಹೆಚ್ಚು ರನ್(36) ಬಿಟ್ಟು ಕೊಟ್ಟ ಬೌಲರ್ ಎಂಬ ಪಟ್ಟಿಯಲ್ಲಿ ಸ್ಟುವರ್ಟ್ ಬ್ರಾಡ್ ಅಗ್ರಸ್ಥಾನದಲ್ಲಿದ್ದರು. ಆದ್ರೆ ಶಿವ ಸಿಂಗ್ 43ರನ್ ನೀಡುವ ಮೂಲಕ ಒಟ್ಟಾರೆ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಕೊಟ್ಟ ಬೌಲರ್ ಎಂಬ ಕೆಟ್ಟ ದಾಖಲೆಗೆ ತನ್ನ ಹೆಸರು ದಾಖಲಿಸಿದ್ದಾರೆ. ಈ ಕುರಿತಾಗಿ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ಮೀಮ್ಸ್ ಹಾಗೂ ಟ್ರೋಲ್ ಮಾಡಿದ್ದಾರೆ.