Vijay Hazare Trophy: ಯುಪಿ ವಿರುದ್ಧ ದ್ವಿಶತಕ ಬಾರಿಸಿ ರುತುರಾಜ್ ಗಾಯಕ್ವಾಡ್ ಮುರಿದ 5 ದಾಖಲೆಗಳ ಪಟ್ಟಿ

ಸೋಮವಾರ, ನವೆಂಬರ್ 28ರಂದು ನಡೆದ ವಿಜಯ್ ಹಜಾರೆ ಟ್ರೋಫಿ 2022ರ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಉತ್ತರಪ್ರದೇಶ ತಂಡದ ವಿರುದ್ಧ ಮಹಾರಾಷ್ಟ್ರದ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಜೀವಮಾನದ ಇನ್ನಿಂಗ್ಸ್ ಆಡಿದರು.
ಮಹಾರಾಷ್ಟ್ರ ಪರ ಇನ್ನಿಂಗ್ಸ್ ಆರಂಭಿಸಿದ ರುತುರಾಜ್ ಗಾಯಕ್ವಾಡ್ 159 ಎಸೆತಗಳಲ್ಲಿ ಅಜೇಯ 220 ರನ್ ಗಳಿಸಿದರು. ಹೀಗಾಗಿ ಮಹಾರಾಷ್ಟ್ರ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 330 ರನ್ ಗಳಿಸಲು ನೆರವಾದರು.
ರುತುರಾಜ್ ಗಾಯಕ್ವಾಡ್ ಅವರ ದ್ವಿಶತಕ ಇನ್ನಿಂಗ್ಸ್ 10 ಬೌಂಡರಿ ಮತ್ತು 16 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ರುತುರಾಜ್ ಗಾಯಕ್ವಾಡ್ ಸಿಡಿಸಿದ 16 ಸಿಕ್ಸರ್‌ಗಳಲ್ಲಿ 9 ಸಿಕ್ಸರ್‌ಗಳು ಇನ್ನಿಂಗ್ಸ್‌ನ ಕೊನೆಯ ಎರಡು ಓವರ್‌ಗಳಲ್ಲಿ ಬಂದವು ಎಂಬುದು ಗಮನಾರ್ಹ.
ಶಿವ ಸಿಂಗ್ ಎಸೆದ 49ನೇ ಓವರ್‌ನಲ್ಲಿ ರುತುರಾಜ್ ಗಾಯಕ್ವಾಡ್ ಏಳು ಸಿಕ್ಸರ್‌ಗಳನ್ನು ಬಾರಿಸಿದರೆ, ಕಾರ್ತಿಕ್ ತ್ಯಾಗಿ ಎಸೆದ ಅಂತಿಮ ಓವರ್‌ನಲ್ಲಿ ಎರಡು ಸಿಕ್ಸರ್ ಗಳಿಸಿದರು.
ರುತುರಾಜ್ ಗಾಯಕ್ವಾಡ್ ಅವರ ಇನ್ನಿಂಗ್ಸ್ ಲಿಸ್ಟ್-ಎ ಕ್ರಿಕೆಟ್ ಮತ್ತು ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬ್ರೇಕ್ ಮಾಡಿದೆ. ಮಹಾರಾಷ್ಟ್ರದ ಓಪನರ್ ರುತುರಾಜ್ ಗಾಯಕ್ವಾಡ್ ಅಳಿಸಿ ಹಾಕಿದ ಅಗ್ರ ಐದು ದಾಖಲೆಗಳ ಪಟ್ಟಿ ಈ ಕೆಳಗಿದೆ.

1 ಓವರ್‌ನಲ್ಲಿ 7 ಸಿಕ್ಸರ್ ಬಾರಿಸಿದ ಮೊದಲ ಆಟಗಾರ
ಭಾರತದ ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್‌ನ ಕೀರನ್ ಪೊಲಾರ್ಡ್ ಮತ್ತು ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಅವರು ಒಂದು ಓವರ್‌ನಲ್ಲಿ ಆರು ಸಿಕ್ಸರ್ ಹೊಡೆದಿದ್ದರು. ಆದರೆ ಯಾವುದೇ ಸ್ವರೂಪದಲ್ಲಿ ಯಾರೊಬ್ಬರೂ ಒಂದೇ ಓವರ್‌ನಲ್ಲಿ ಏಳು ಗರಿಷ್ಠ ಸಿಕ್ಸರ್‌ಗಳನ್ನು ಹೊಡೆದಿರಲಿಲ್ಲ. ರುತುರಾಜ್ ಗಾಯಕ್ವಾಡ್ ಈಗ ಒಂದೇ ಓವರ್‌ನಲ್ಲಿ ಏಳು ಸಿಕ್ಸರ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿದರು.
ಲಿಸ್ಟ್-ಎ ಕ್ರಿಕೆಟ್‌ನ ಒಂದು ಓವರ್‌ನಲ್ಲಿ ಒಂದೇ ಬ್ಯಾಟ್ಸ್‌ಮನ್‌ಗೆ ಏಳು ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟ ಮೊದಲ ಬೌಲರ್ ಎಂಬ ಕುಖ್ಯಾತಿಗೆ ಶಿವ ಸಿಂಗ್ ಒಳಗಾದರು.

ಮಹಾರಾಷ್ಟ್ರ ಪರ ಅತ್ಯಧಿಕ ಲಿಸ್ಟ್-ಎ ವೈಯಕ್ತಿಕ ಸ್ಕೋರ್
ರುತುರಾಜ್ ಗಾಯಕ್ವಾಡ್ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ದ್ವಿಶತಕ ದಾಖಲಿಸಿದ 11ನೇ ಭಾರತೀಯ ಬ್ಯಾಟರ್ ಆಗಿದ್ದಾರೆ. ಮಹಾರಾಷ್ಟ್ರ ಪರ ಆಡುವಾಗ ಈ ಸಾಧನೆ ಮಾಡಿದ ಮೊದಲಿಗ ಬ್ಯಾಟರ್ ಆದರು.
ಈ ಹಿಂದೆ ಅಂಕಿತ್ ಬಾವ್ನೆ ಲಿಸ್ಟ್-ಎ ಪಂದ್ಯಗಳಲ್ಲಿ ಮಹಾರಾಷ್ಟ್ರದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆಯನ್ನು ರುತುರಾಜ್ ಗಾಯಕ್ವಾಡ್ ಮುರಿದರು. ಕಳೆದ ವಾರ ರಾಂಚಿಯಲ್ಲಿ ಪುದುಚೇರಿ ವಿರುದ್ಧ 143 ಎಸೆತಗಳಲ್ಲಿ 184 ರನ್ ಗಳಿಸಿದ್ದರು. ರುತುರಾಜ್ 220 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ಅವರ ದಾಖಲೆಯನ್ನು ಅಳಿಸಿ ಹಾಕಿದರು.

1 ಓವರ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್‌ಮನ್
ಮಹಾರಾಷ್ಟ್ರ ಆರಂಭಿಕ ಬಲಗೈ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಒಂದು ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಎಲ್ಟನ್ ಚಿಗುಂಬುರಾ, ಜೆಪಿ ಡುಮಿನಿ, ಹರ್ಷಲ್ ಗಿಬ್ಸ್, ತಿಸಾರ ಪೆರೆರಾ ಮತ್ತು ಜಸ್ಕರನ್ ಮಲ್ಹೋತ್ರಾ ಅವರ ಲಿಸ್ಟ್-ಎ ಕ್ರಿಕೆಟ್‌ನ ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ರುತುರಾಜ್ ಗಾಯಕ್ವಾಡ್ ಮುರಿದರು.
ಉಳಿದ ಬ್ಯಾಟ್ಸ್‌ಮನ್‌ಗಳು ಒಂದೇ ಓವರ್‌ನಲ್ಲಿ 36 ರನ್ ಗಳಿಸಿದರೆ, ಶಿವ ಸಿಂಗ್ ಎಸೆದ 49ನೇ ಓವರ್‌ನಲ್ಲಿ ರುತುರಾಜ್ ಗಾಯಕ್ವಾಡ್ 42 ರನ್ ಬಾರಿಸಿದರು.

ವಿಜಯ್ ಹಜಾರೆ ಟ್ರೋಫಿಯ 1 ಓವರ್‌ನಲ್ಲಿ ತಂಡದಿಂದ ಅತಿ ಹೆಚ್ಚು ರನ್
ಚೆನ್ನೈನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ 2009/10ರಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್‌ನ ಡಿ ರವಿತೇಜ ಬೌಲಿಂಗ್‌ನಲ್ಲಿ ಕೇರಳ 35 ರನ್ ಗಳಿಸಿತ್ತು. ಸುಮಾರು 12 ವರ್ಷಗಳ ಕಾಲ ಈ ದಾಖಲೆ ಕೇರಳದ ಹೆಸರಲ್ಲಿತ್ತು. ಆದರೆ ಇದೀಗ ಈ ದಾಖಲೆ ಮಹಾರಾಷ್ಟ್ರದ ಪಾಲಾಗಿದೆ.
ನೋಬಾಲ್ ರೂಪದಲ್ಲಿ ಬಿಟ್ಟುಕೊಟ್ಟ ಒಂದು ಹೆಚ್ಚುವರಿ ರನ್ ಸೇರಿಸಿ, ಮಹಾರಾಷ್ಟ್ರ ತಂಡ ಶಿವ ಸಿಂಗ್ ಬೌಲ್ ಮಾಡಿದ ಆರು ಎಸೆತಗಳಲ್ಲಿ 43 ರನ್ ಗಳಿಸಿತು.

ವಿಜಯ್ ಹಜಾರೆ ಟ್ರೋಫಿಯ ಪಂದ್ಯದಲ್ಲಿ ಬ್ಯಾಟರ್‌ನಿಂದ ಅತಿ ಹೆಚ್ಚು ಸಿಕ್ಸರ್
ರುತುರಾಜ್ ಗಾಯಕ್ವಾಡ್ ಅವರು ಸಿಡಿಸಿದ 16 ಸಿಕ್ಸರ್‌ಗಳು ಈಗ ವಿಜಯ್ ಹಜಾರೆ ಟ್ರೋಫಿಯ ಒಂದು ಪಂದ್ಯದಲ್ಲಿ ಆಟಗಾರನ ಗರಿಷ್ಠ ಸಿಕ್ಸರ್ ಆಗಿವೆ. ಈ ಮೂಲಕ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರಸ್ತುತ ಭಾರತದ ನಾಯಕ ರೋಹಿತ್ ಶರ್ಮಾ ಅವರು 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್ ಗಳಿಸಿದ ಪಂದ್ಯದಲ್ಲಿ 16 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ರೋಹಿತ್ ಶರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ಜಂಟಿಯಾಗಿ ಲಿಸ್ಟ್-ಎ ಪಂದ್ಯದಲ್ಲಿ ಭಾರತದ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications