ತೆರೆಯ ಮೇಲೆ ಸ್ಪಿನ್ ಎಸೆಯಲಿದ್ದಾರೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್!

ಬೆಂಗಳೂರು, ಜುಲೈ 26: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಈಗ 1983 ವಿಶ್ವಕಪ್ ಹೀರೋ ಕಪಿಲ್ ದೇವ್ ಅವರ ಕುರಿತು ಸಿನಿಮಾಗಳು ಆಗಿದ್ದು, ಆಗುತ್ತಿದೆ. ಈ ಮಧ್ಯೆ ವಿಶ್ವ ಕ್ರಿಕೆಟ್ ಕಂಡ ಮತ್ತೊಬ್ಬ ದಿಗ್ಗಜ ಕ್ರಿಕೆಟ್ ಆಟಗಾರನ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ ಸಿನಿಮಾ ಮಂದಿ.
ಹೌದು, ಶ್ರೀಲಂಕಾ ತಂಡದ ಸ್ಪಿನ್ ಲೆಜೆಂಡ್ ಮುತ್ತಯ್ಯ ಮುರಳೀಧರನ್ ಅವರ ಕುರಿತು ಸಿನಿಮಾ ಮಾಡಲು ಸೌತ್ ಇಂಡಸ್ಟ್ರಿ ಸಜ್ಜಾಗಿದ್ದು, ಅದಕ್ಕಾಗಿ ಸೂಪರ್ ಸ್ಟಾರ್ ನಟರೊಬ್ಬರನ್ನ ಅಪ್ರೋಚ್ ಮಾಡಲಾಗಿದೆಯಂತೆ.
ಟೆಸ್ಟ್ ಕ್ರಿಕೆಟ್ ನಲ್ಲಿ 800 ವಿಕೆಟ್ ಗಳಿಸಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಮುರಳೀಧರನ್ ಮೊದಲ ಸ್ಥಾನದಲ್ಲಿದ್ದಾರೆ. ಸುಮಾರು 18ವರ್ಷಕ್ಕೂ ಅಧಿಕ ಸಮಯ ಕ್ರಿಕೆಟ್ ಲೋಕವನ್ನ ಆಳಿರುವ ಅಗ್ರಗಣ್ಯ ಸ್ಪಿನ್ನರ್ ಕಥೆ ಈಗ ತೆರೆಮೇಲೆ ನೋಡುವ ಅವಕಾಶ ಸಿಗುತ್ತಿದೆ.

ಮುರಳೀಧರನ್ ಪಾತ್ರದಲ್ಲಿ ಸೇತುಪತಿ
ತಮಿಳಿನ ಕೆಲವು ವೆಬ್ ಸೈಟ್ ಗಳಲ್ಲಿ ವರದಿಯಾಗಿರುವಂತೆ ಶ್ರೀಲಂಕಾ ಲೆಜೆಂಡ್ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್ ಅವರ ಬಯೋಗ್ರಫಿ ಆಗುತ್ತಿದ್ದು, ಮುರಳೀಧರನ್ ಪಾತ್ರದಲ್ಲಿ ತಮಿಳು ಸ್ಟಾರ್ ನಟ ವಿಜಯ್ ಸೇತುಪತಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಬಾಲಿವುಡ್ ಬರುತ್ತಿರುವ '1983' ಚಿತ್ರದಂತೆ ಸೌತ್ ನಲ್ಲಿ ಮುರಳೀಧರನ್ ಸಿನಿಮಾ ಬರುತ್ತೆ ಎನ್ನಲಾಗಿದೆ.

ಪ್ರಿ-ಪ್ರೊಡಕ್ಷನ್ ಕೆಲಸ ಆಗಿದೆ
ಕಳೆದ ಡಿಸೆಂಬರ್ ತಿಂಗಳಿನಿಂದ ಮುತ್ತಯ್ಯ ಮುರಳೀಧರನ್ ಅವರ ಕುರಿತು ಬಯೋಪಿಕ್ ಮಾಡಲು ತಯಾರಿ ನಡೆಸಿದ್ದು, ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆಯಂತೆ. ಬಿಗ್ ಬಜೆಟ್ ನಲ್ಲಿ ತಯಾರಾಗಲಿರುವ ಈ ಚಿತ್ರ ಭಾರತ, ಶ್ರೀಲಂಕಾ ಮತ್ತು ಇಂಗ್ಲೆಂಡ್ ನಲ್ಲಿ ಚಿತ್ರೀಕರಣ ಮಾಡಲು ಯೋಜನೆ ಹಾಕಿದ್ದಾರೆ ಎಂದು ಸುದ್ದಿ ಹೊರಬಿದ್ದಿದೆ.

'800' ಶೀರ್ಷಿಕೆ.!
133 ಟೆಸ್ಟ್ ಪಂದ್ಯಗಳನ್ನ ಆಡಿರುವ ಮುರಳೀಧರನ್ 800 ವಿಕೆಟ್ ಪಡೆದಿದ್ದಾರೆ. ಈ ಸಾಧನೆ ಮಾಡಿರುವ ವಿಶ್ವದ ಪ್ರಥಮ ಬೌಲರ್. ಹಾಗಾಗಿ, ಈ ಚಿತ್ರಕ್ಕೆ '800' ಎಂದು ಹೆಸರಿಡಲಾಗಿದೆಯಂತೆ. ವಿಶ್ವಕ್ರಿಕೆಟ್ ನಲ್ಲಿ ಮುತ್ತಯ್ಯ ಮುರಳೀಧರನ್ ಹೆಸರು ಬಹಳ ದೊಡ್ಡದು. ತನ್ನ ವಿಭಿನ್ನ ಬೌಲಿಂಗ್ ಶೈಲಿಯ ಮೂಲಕ ಬ್ಯಾಟ್ಸಮನ್ ಗಳನ್ನ ಕಾಡಿರುವ ಬೌಲರ್. ಶ್ರೀಲಂಕಾ ಪರ ಟೆಸ್ಟ್, ಏಕದಿನ ಹಾಗೂ ಟಿ-ಟ್ವೆಂಟಿ ಆಡಿರುವ ಮುರಳೀಧರನ್ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೊದಲನೇ ಆಟಗಾರ.

ಮುರಳೀಧರನ್ ದಾಖಲೆಗಳು
133 ಟೆಸ್ಟ್ ಪಂದ್ಯಗಳನ್ನ ಆಡಿರುವ ಮುರಳೀಧರನ್ 800 ವಿಕೆಟ್ ಪಡೆದಿದ್ದಾರೆ. ಈ ಸಾಧನೆ ಮಾಡಿರುವ ವಿಶ್ವದ ಪ್ರಥಮ ಬೌಲರ್. 350 ಏಕದಿನ ಪಂದ್ಯದಲ್ಲಿ 534 ವಿಕೆಟ್ ಪಡೆದುಕೊಂಡಿದ್ದಾರೆ. 12 ಟಿ-ಟ್ವೆಂಟಿ ಪಂದ್ಯದಲ್ಲಿ 13 ವಿಕೆಟ್ ಪಡೆಯುವ ಮೂಲಕ ಒಟ್ಟು 1,247 ಅಂತಾರಾಷ್ಟ್ರಿಯ ವಿಕೆಟ್ ಪಡೆಯುವ ಮೂಲಕ ಹಲವು ದಾಖಲೆಗಳನ್ನ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.

ಸೈರಾ ಸಿನಿಮಾದಲ್ಲಿ ಸೇತುಪತಿ
ಸದ್ಯ ತಮಿಳು ಇಂಡಸ್ಟ್ರಿಯಲ್ಲಿ ಬಹುಬೇಡಿಕೆ ಹೊಂದಿರುವ ವಿಜಯ್ ಸೇತುಪತಿ ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ವರ್ಷದಲ್ಲಿ ವಿಕ್ರಂವೇದ ಮತ್ತು 96 ಅಂತಹ ಸೂಪರ್ ಹಿಟ್ ಸಿನಿಮಾ ಮಾಡಿ ನ್ಯಾಷನಲ್ ಸ್ಟಾರ್ ಆಗಿದ್ದರು. ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ ಸೈರಾ ಸಿನಿಮಾದಲ್ಲಿ ಸೇತುಪತಿ ನಟಿಸಿದ್ದು, ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ಮುತ್ತಯ್ಯ ಮುರಳೀಧರನ್ ಅವರ ಬಯೋಗ್ರಫಿ ಆರಂಭವಾಗುತ್ತೆ ಎನ್ನಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications