ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬ್ಯಾಟರ್ ವಿರಾಟ್ ಕೊಹ್ಲಿ ಅವರು 2022ರಲ್ಲಿ ಹೆಚ್ಚು ಆದಾಯ ಗಳಿಸಿದ ವಿಶ್ವದ ಶ್ರೀಮಂತ ಕ್ರಿಕೆಟಿಗ ಮತ್ತು ಏಷ್ಯಾದ ಎರಡನೇ ಶ್ರೀಮಂತ ಕ್ರೀಡಾಪಟು ಎಂದು ಸ್ಪೋರ್ಟಿಕೊ ವರದಿ ಮಾಡಿದೆ.
ವರದಿಯ ಪ್ರಕಾರ, ವಿರಾಟ್ ಕೊಹ್ಲಿ 2022ರಲ್ಲಿ 277 ಕೋಟಿ ರೂಪಾಯಿ ಗಳಿಸುವ ಒಟ್ಟಾರೆ ಮೂಲಕ 61ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಬಿಡುಗಡೆಗೊಂಡ ಟಾಪ್ 100ರ ಪಟ್ಟಿಯಲ್ಲಿ ಬೇರೆ ಯಾವುದೇ ಕ್ರಿಕೆಟರ್ ಇರಲಿಲ್ಲ.

ಟೆನಿಸ್ ತಾರೆ ಮತ್ತು ಮಾಜಿ ಯುಎಸ್ ಓಪನ್ ಚಾಂಪಿಯನ್ ನವೋಮಿ ಒಸಾಕಾ ಅವರು ಕ್ರೀಡೆಯಿಂದ ಹೆಚ್ಚು ಆದಾಯ ಗಳಿಸಿದ ಏಷ್ಯಾದ ಕ್ರೀಡಾಳು ಆಗಿದ್ದಾರೆ. ಜಪಾನ್‌ನ ಟೆನಿಸ್ ತಾರೆ ಸುಮಾರು 434 ಕೋಟಿ ರೂ. ಆದಾಯ ಗಳಿಸಿದ್ದಾರೆ.
ಮತ್ತೊಂದು ವರದಿಯ ಪ್ರಕಾರ, ವಿರಾಟ್ ಕೊಹ್ಲಿ ನಿವ್ವಳ ಮೌಲ್ಯ 1,040 ಕೋಟಿ ರೂಪಾಯಿಗೆ ಏರಿದೆ. ಇತ್ತೀಚಿಗೆ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 29ನೇ ಟೆಸ್ಟ್ ಶತಕವನ್ನು ಗಳಿಸಿದರು.
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯಿಂದ ವರ್ಷಕ್ಕೆ ಸುಮಾರು 15 ಕೋಟಿ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಇನ್ನು ಕೊಹ್ಲಿ ಅವರು ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಪ್ರತಿ ಏಕದಿನಕ್ಕೆ 6 ಲಕ್ಷ ಮತ್ತು ಟಿ20 ಪಂದ್ಯಕ್ಕೆ 3 ಲಕ್ಷ ರೂಪಾಯಿ ಪಡೆಯುತ್ತಾರೆ.
ಇನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯೊಂದಿಗೆ ವಿರಾಟ್ ಕೊಹ್ಲಿ ಎ+ ಒಪ್ಪಂದವನ್ನು ಹೊಂದಿದ್ದು, ಅದು ಅವರಿಗೆ ವರ್ಷಕ್ಕೆ 7 ಕೋಟಿ ರೂಪಾಯಿಗಳನ್ನು ನೀಡುತ್ತದೆ.
ಆದರೂ, ವಿರಾಟ್ ಕೊಹ್ಲಿ ವಿಶ್ವದ ಶ್ರೀಮಂತ ಕ್ರಿಕೆಟಿಗನಲ್ಲ. ಆ ಹೆಗ್ಗಳಿಕೆ ಬರೋಡಾದ ಪ್ರಥಮ ದರ್ಜೆ ಕ್ರಿಕೆಟಿಗನಿಗೆ ಸಲ್ಲುತ್ತದೆ. ಬರೋಡಾದ ಮಾಜಿ ಕ್ರಿಕೆಟಿಗ ಸಮರ್ಜಿತ್ ಸಿಂಗ್ ರಂಜಿತ್ ಸಿಂಗ್ ಗಾಯಕ್ವಾಡ್ ಅವರು 20,000 ಕೋಟಿ ರೂ. ನಿವ್ವಳ ಮೌಲ್ಯ ಹೊಂದಿದ್ದಾರೆ.
ಬರೋಡಾದ ರಾಜಮನೆತನದ ರಂಜಿತ್‌ಸಿಂಗ್ ಪ್ರತಾಪ್‌ಸಿಂಹ ಗಾಯಕ್ವಾಡ್ ಮತ್ತು ಶುಭಾಂಗಿನಿ ರಾಜೇ ಅವರ ಏಕೈಕ ಪುತ್ರ ಸಮರ್ಜಿತ್ ಸಿಂಗ್. ಇವರು 1987-88 ಮತ್ತು 1988-89 ಋತುವಿನ ನಡುವೆ ಬರೋಡಾ ಪರ ಆರು ಪ್ರಥಮ ದರ್ಜೆಯಲ್ಲಿ ಆಡಿದ್ದರು.
ಸಮರ್ಜಿತ್ ಸಿಂಗ್ ತಮ್ಮ ನಿವೃತ್ತಿಯ ನಂತರ ಕ್ರಿಕೆಟ್ ಆಡಳಿತಗಾರರಾದರು ಮತ್ತು ಬರೋಡಾ ಕ್ರಿಕೆಟ್ ಅಸೋಸಿಯೇಷನ್ (ಬಿಸಿಎ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರು 2013ರಲ್ಲಿ 3 ಬಿಲಿಯನ್ ಪೌಂಡ್‌ಗಳಿಗಿಂತ ಹೆಚ್ಚು ಮೌಲ್ಯದ 23 ವರ್ಷಗಳ ಪಿತ್ರಾರ್ಜಿತ ಆಸ್ತಿ ವಿವಾದ ಇತ್ಯರ್ಥಪಡಿಸಿದಾಗ ಸುಮಾರು 20,000 ಕೋಟಿ ರೂಪಾಯಿಗಳನ್ನು ಪಡೆದು ಸಮರ್ಜಿತ್‌ಸಿಂಗ್ ಗಾಯಕ್ವಾಡ್ ರಾತ್ರೋರಾತ್ರಿ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾದರು.
ಬರೋಡಾದ ಮಹಾರಾಜರು ಹಿಂದೊಮ್ಮೆ ಭಾರತದ ಅತ್ಯಂತ ಶಕ್ತಿಶಾಲಿ ರಾಜಪ್ರಭುತ್ವ ರಾಜ್ಯಗಳ ಆಡಳಿತಗಾರರಾಗಿದ್ದರು. ಅವರ ಸ್ವಂತ ಸೈನ್ಯ ಮತ್ತು ನೌಕಾಪಡೆಯನ್ನು ಅವರ ಲಕ್ಷ್ಮಿ ವಿಲಾಸ್ ಅರಮನೆಯಿಂದ ನಿಯಂತ್ರಿಸುತ್ತಿದ್ದರು. ಇದು ಬಕಿಂಗ್‌ಹ್ಯಾಮ್ ಅರಮನೆಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ. 600 ಎಕರೆಗಳಲ್ಲಿ ತನ್ನದೇ ಆದ ಗಾಲ್ಫ್ ಕೋರ್ಸ್ ಹೊಂದಿದೆ ಎಂದು ಹೇಳಲಾಗುತ್ತದೆ.

ಮಾಜಿ ರಣಜಿ ಕ್ರಿಕೆಟಿಗ ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರ ಒಟ್ಟು ಆಸ್ತಿ ಮೌಲ್ಯವು ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿ ಅವರ ನಿವ್ವಳ ಮೌಲ್ಯಕ್ಕಿಂತ ಹೆಚ್ಚಿನದ್ದಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಸಚಿನ್ ತೆಂಡೂಲ್ಕರ್ 1,300 ಕೋಟಿ ರೂ.ಗಳ ನಿವ್ವಳ ಮೌಲ್ಯದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಎಕನಾಮಿಕ್ ಟೈಮ್ಸ್ ಪತ್ರಿಕೆಯ ಪ್ರಕಾರ, ಸಚಿನ್ ತೆಂಡೂಲ್ಕರ್ ಅವರು ವ್ಯಾಪಾರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಮತ್ತು ಅವರ ಹೂಡಿಕೆಗಳೊಂದಿಗೆ 2022ರಲ್ಲಿ ಸುಮಾರು 50 ಕೋಟಿ ರೂಪಾಯಿ ಗಳಿಸಿದ್ದಾರೆ.
ವರದಿಯ ಪ್ರಕಾರ, ಭಾರತದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರ ನಿವ್ವಳ ಮೌಲ್ಯ ಸುಮಾರು 1,050 ಕೋಟಿ ರೂ. ಇದೆ. ಎಂಎಸ್ ಧೋನಿ ಇತ್ತೀಚೆಗೆ ತಮ್ಮ ಕಂಪನಿಯಾದ 'ಧೋನಿ ಎಂಟರ್‌ಟೈನ್‌ಮೆಂಟ್' ಬ್ಯಾನರ್ ಅಡಿಯಲ್ಲಿ ಹೊಸ ತಮಿಳು ಚಲನಚಿತ್ರ ನಿರ್ಮಿಸುತ್ತಿದ್ದಾರೆ. ಕಳೆದ ವರ್ಷ ಜಾರ್ಖಂಡ್ ರಾಜ್ಯದಿಂದ ಎಂಎಸ್ ಧೋನಿ ಅತಿ ಹೆಚ್ಚು ಮುಂಗಡ ತೆರಿಗೆ ಪಾವತಿಸಿದ ವ್ಯಕ್ತಿಯಾಗಿದ್ದಾರೆ.