ವಿರಾಟ್ ಕೊಹ್ಲಿ ಕಿರೀಟಕ್ಕೆ ಮತ್ತೊಂದು ಗರಿ: ಐಸಿಸಿಯಿಂದ ಸಿಕ್ತು ಮತ್ತೊಂದು ಪ್ರಶಸ್ತಿ

ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಕ್ಟೋಬರ್ 2022 ರ ಐಸಿಸಿ ಆಟಗಾರನ ತಿಂಗಳ ಪ್ರಶಸ್ತಿ ವಿಜೇತರ ಹೆಸರನ್ನು ಪ್ರಕಟಿಸಿದೆ. ಸದ್ಯ ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅವರ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.
ಮಹಿಳಾ ಏಷ್ಯಾಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಪಾಕಿಸ್ತಾನದ ಅನುಭವಿ ಆಲ್‌ರೌಂಡರ್ ನಿದಾ ದಾರ್ ಈ ಬಾರಿ ಐಸಿಸಿ ಮಹಿಳಾ ತಿಂಗಳ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ.
ಮಾಧ್ಯಮ ಪ್ರತಿನಿಧಿಗಳು, ಐಸಿಸಿ ಹಾಲ್ ಆಫ್ ಫೇಮರ್ಸ್, ಮಾಜಿ ಅಂತರಾಷ್ಟ್ರೀಯ ಆಟಗಾರರು ಮತ್ತು icc-cricket.com ನಲ್ಲಿ ನೋಂದಾಯಿಸಲಾದ ಅಭಿಮಾನಿಗಳು ನಡೆಸಿದ ಜಾಗತಿಕ ಮತದಾನದಲ್ಲಿ ವಿರಾಟ್ ಕೊಹ್ಲಿ ಮತ್ತು ನಿದಾ ದಾರ್ ಇಬ್ಬರೂ ವಿಜೇತರಾಗಿ ಆಯ್ಕೆಯಾದರು.
ಅಕ್ಟೋಬರ್ ತಿಂಗಳಲ್ಲಿ 205 ರನ್ ಗಳಿಸುವ ಮೂಲಕ ಅತ್ಯುತ್ತಮ ಆಟವಾಡಿದ್ದ ವಿರಾಟ್ ಕೊಹ್ಲಿ ಸಹಜವಾಗಿಯೇ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಾಕಿಸ್ತಾನದ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಅವರು ನೀಡಿದ ಅದ್ಭುತ ಪ್ರದರ್ಶನ ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿತ್ತು. ಬಹುತೇಕ ಸೋಲುವ ಪಂದ್ಯವನ್ನು ಅವರು ಅದ್ಭುತ ಬ್ಯಾಟಿಂಗ್ ಮೂಲಕ ಗೆಲ್ಲಿಸಿದ್ದರು.

ಮಾದಲ ಬಾರಿಗೆ ನಾಮ ನಿರ್ದೇಶನಗೊಂಡಿದ್ದ ಕೊಹ್ಲಿ
ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಐಸಿಸಿ ತಿಂಗಳ ಆಟಗಾರ ಸ್ಫರ್ಧೆಗೆ ನಾಮನಿರ್ದೇಶನಗೊಂಡಿದ್ದರು. ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್, ಜಿಂಬಾಬ್ವೆಯ ಆಲ್‌ರೌಂಡರ್ ಸಿಕಂದರ್ ರಾಜಾ ಇಬ್ಬರೂ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಐಸಿಸಿ ಆಟಗಾರ ಸ್ಪರ್ಧೆಗೆ ನಾಮನಿರ್ದೇಶನಗೊಂಡಿದ್ದರು.
ಮೂವರಲ್ಲಿ ವಿರಾಟ್ ಕೊಹ್ಲಿ ಈಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕೊಹ್ಲಿ ಸಾಧನೆಗೆ ಅಭಿಮಾನಿಗಳು, ಕ್ರಿಕೆಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.
T20 World Cup 2022 : ಸೆಮಿಫೈನಲ್ ಪಂದ್ಯಗಳ ದಿನಾಂಕ, ಸಮಯ, ಸ್ಥಳ, ಲೈವ್ ಸ್ಟ್ರೀಮಿಂಗ್; ವಿವರ ಇಲ್ಲಿದೆ

ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಕೊಹ್ಲಿ
ತಮ್ಮ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಕೊಹ್ಲಿ, "ಅಕ್ಟೋಬರ್ ತಿಂಗಳ ಐಸಿಸಿ ಪುರುಷರ ತಿಂಗಳ ಆಟಗಾರನಾಗಿ ಆಯ್ಕೆಯಾಗಿರುವುದು ನನಗೆ ದೊಡ್ಡ ಗೌರವವಾಗಿದೆ. ಪ್ರಪಂಚದಾದ್ಯಂತದ ಅಭಿಮಾನಿಗಳು ಮತ್ತು ಪ್ಯಾನೆಲ್‌ನ ಬೆಂಬಲದ ಮೂಲಕ ಆಯ್ಕೆಯಾಗಿರುವುದು ನನಗೆ ಈ ಪುರಸ್ಕಾರವನ್ನು ಇನ್ನಷ್ಟು ವಿಶೇಷವಾಗಿಸುತ್ತದೆ." ಎಂದು ಹೇಳಿದ್ದಾರೆ.
"ಉತ್ತಮ ಆಟವಾಡುವ ಮೂಲಕ ನಾಮನಿರ್ದೇಶನಗೊಂಡಿದ್ದ ಇತರ ಆಟಗಾರರಿಗೆ ನಾನು ಗೌರವ ಸಲ್ಲಿಸಲು ಬಯಸುತ್ತೇನೆ ಮತ್ತು ನನ್ನ ಆಟವನ್ನು ಮುಂದುವರೆಸಲು ನಾನು ಬಯಸುತ್ತೇನೆ" ಎಂದು ಅವರು ಹೇಳಿದ್ದಾರೆ.

ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡೇರೆನ್ ಗಂಗಾ
ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟರ್ ಮತ್ತು ಐಸಿಸಿ ವೋಟಿಂಗ್ ಪ್ಯಾನೆಲ್‌ನ ಸದಸ್ಯ ಡೇರೆನ್ ಗಂಗಾ, "ಕೊಹ್ಲಿ ಸರ್ವೋತ್ಕೃಷ್ಟ ಬ್ಯಾಟರ್. ತಮ್ಮ ಕಳಪೆ ಫಾರ್ಮ್‌ನಿಂದ ಹೊರಬರುಲು ಅವರು ಅಪಾರ ಶ್ರಮಿಸಿದರು. ಅಕ್ಟೋಬರ್‌ನಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 49 ರನ್ ಗಳಿಸಿದರು ಮತ್ತು ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಎರಡು ಅರ್ಧ ಶತಕಗಳನ್ನು ಗಳಿಸಿದರು" ಎಂದು ಹೇಳಿದರು.
"ಪಾಕಿಸ್ತಾನದ ವಿರುದ್ಧದ ಆ ಭವ್ಯವಾದ ಆಟ ಸಾರ್ವಕಾಲಿಕ ಅತ್ಯುತ್ತಮ ಟಿ20 ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ. ನಾನು ಆ ಪಂದ್ಯವನ್ನು ಎಂಸಿಜಿಯಲ್ಲಿ ಲೈವ್ ಆಗಿ ವೀಕ್ಷಿಸಿದೆ. ಅಂತಹ ಶೈಲಿಯಲ್ಲಿ ಆಡುವುದನ್ನು ನೋಡಿ ಆನಂದಿಸಿದೆ" ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ನಿದಾ ದಾರ್ ಆಯ್ಕೆ
ಬಾಂಗ್ಲಾದೇಶದಲ್ಲಿ ನಡೆದ ಮಹಿಳಾ ಏಷ್ಯಾ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಿದಾ ದಾರ್, ಅಕ್ಟೋಬರ್‌ನ ಐಸಿಸಿ ಮಹಿಳಾ ತಿಂಗಳ ಆಟಗಾರ್ತಿ ಪ್ರಶಸ್ತಿಯನ್ನು ಪಡೆದರು. ಅಕ್ಟೋಬರ್ ತಿಂಗಳಲ್ಲಿ 72.50 ಸರಾಸರಿಯಲ್ಲಿ 145 ಮೌಲ್ಯಯುತ ರನ್ ಗಳಿಸಿ ಎಂಟು ಪ್ರಮುಖ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು.
ಪಾಕಿಸ್ತಾನ ಭಾರತದ ವಿರುದ್ಧ ಜಯ ಗಳಿಸುವಲ್ಲಿ ನಿದಾದರ್ ಮಹತ್ವದ ಪಾತ್ರ ವಹಿಸಿದ್ದರು. ಅಜೇಯ 56 ರನ್ ಗಳಿಸಿದ್ದಲ್ಲದೆ, ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರಾಡ್ರಿಗಸ್ ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನದ ಗೆಲುವಿಗೆ ಕಾರಣವಾಗಿದ್ದರು. ನಿದಾ ದಾರ್ ಉತ್ತಮ ಆಟದ ಹೊರತಾಗಿಯೂ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸೋಲುವ ಮೂಲಕ ಏಷ್ಯಾಕಪ್‌ನಿಂದ ಹೊರಬಿದ್ದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications