ಸೋಮವಾರ, ಸೆಪ್ಟೆಂಬರ್ 11ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿ ಸೂಪರ್ 4 ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಭರ್ಜರಿ ಶತಕದ ಸಹಾಯದಿಂದ ನಿಗದಿತ 50 ಓವರ್‌ಗಳಲ್ಲಿ 2 ವಿಕೆಟ್‌ಗೆ 356 ರನ್‌ಗಳನ್ನು ಕಲೆಹಾಕಿತು. ಪಾಕಿಸ್ತಾನ ತಂಡಕ್ಕೆ 357 ರನ್‌ಗಳ ಗುರಿ ನೀಡಿದೆ.
ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಜೋಡಿ ಮೂರನೇ ವಿಕೆಟ್‌ಗೆ 194 ಎಸೆತಗಳಲ್ಲಿ ದಾಖಲೆಯ ಬರೋಬ್ಬರಿ 233 ರನ್‌ಗಳ ಜೊತೆಯಾಟ ನಿರ್ಮಿಸಿದರು.

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 47ನೇ ಶತಕ ಬಾರಿಸಿದರು ಮತ್ತು ಇದೇ ವೇಳೆ 13000 ರನ್‌ಗಳ ಮೈಲುಗಲ್ಲು ತಲುಪಿದರು. ಇನ್ನು ಕೆಎಲ್ ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 6ನೇ ಶತಕ ಬಾರಿಸಿ ಅದ್ಭುತವಾಗಿ ಪುನರಾಗಮನ ಮಾಡಿದರು.
ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ವಿರಾಟ್ ಕೊಹ್ಲಿ ಅವರು ಕೇವಲ 267 ಏಕದಿನ ಇನ್ನಿಂಗ್ಸ್‌ಗಳಲ್ಲಿ 13,000 ರನ್‌ಗಳ ಹೆಗ್ಗುರುತನ್ನು ತಲುಪಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ವಿರಾಟ್ ಕೊಹ್ಲಿ 94 ಎಸೆತಗಳನ್ನು ಎದುರಿಸಿ 9 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ ಅಜೇಯ 122 ರನ್ ಬಾರಿಸಿದರೆ, ಕನ್ನಡಿಗ ಕೆಎಲ್ ರಾಹುಲ್ 106 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಮೇತ ಔಟಾಗದೇ 111 ರನ್ ಸಿಡಿಸಿದರು.

ಗಮನಾರ್ಹವಾಗಿ, ಭಾರತದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಏಕದಿನ ಸ್ವರೂಪದಲ್ಲಿ 8000, 9000, 10000, 11000 ಮತ್ತು 12000 ರನ್ ಗಳಿಸಿದ ವೇಗದ ಆಟಗಾರ ಕೂಡ ವಿರಾಟ್ ಕೊಹ್ಲಿ ಆಗಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ವೇಗದ 13,000 ರನ್‌ಗಳ ವಿಶ್ವದಾಖಲೆಯು ಈ ಹಿಂದೆ ಭಾರತದ ಲೆಜೆಂಡ್ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಸಚಿನ್ 321 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಯನ್ನು ಮಾಡಿದ್ದರು. ಇದೀಗ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ಅದ್ಭುತವಾದ ಪ್ರದರ್ಶನದೊಂದಿಗೆ ಮಾಜಿ ಸಹ ಆಟಗಾರನ ದಾಖಲೆಯನ್ನು ಮುರಿಯಲು ಸಾಧ್ಯವಾಯಿತು.
ಇನ್ನು ಆಸ್ಟ್ರೇಲಿಯಾದ ಶ್ರೇಷ್ಠ ಕ್ರಿಕೆಟಿಗ ಆಟಗಾರ ರಿಕಿ ಪಾಂಟಿಂಗ್ ಅವರು 341 ಇನ್ನಿಂಗ್ಸ್‌ಗಳಲ್ಲಿ 13,000 ಏಕದಿನ ರನ್ ಗಳಿಸುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಇದಲ್ಲದೆ ವಿರಾಟ್ ಕೊಹ್ಲಿ ತಮ್ಮ 112ನೇ 50+ ಸ್ಕೋರ್ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ (145) ಮತ್ತು ಕುಮಾರ ಸಂಗಕ್ಕಾರ (118) ನಂತರದ ಸ್ಥಾನ ಪಡೆದಿದ್ದಾರೆ.