ಮೆಲ್ಬೋರ್ನ್, ಡಿ. 30: ಟೀಂ ಇಂಡಿಯಾದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಅವರು ಮೂರನೇ ಟೆಸ್ಟ್ ಪಂದ್ಯದಲ್ಲಿ ಅರ್ಧ ಶತಕ ಗಳಿಸಿ ಔಟಾಗಿರಬಹುದು ಆದರೆ, ಆಸ್ಟ್ರೇಲಿಯಾ ವಿರುದ್ಧ ಹೊಸ ದಾಖಲೆ ಬರೆದಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹಳೆ ಸಾಧನೆಯನ್ನು ಸರಿಗಟ್ಟಿದ್ದಾರೆ.
ವಿರಾಟ್ ಕೊಹ್ಲಿ ಅವರು ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನದಂದು ಎರಡನೇ ಇನ್ನಿಂಗ್ಸ್ ನಲ್ಲಿ 54 ರನ್ ಗಳಿಸಿ ಔಟಾಗಿದ್ದಾರೆ. ಅದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಿ ಸಚಿನ್ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಆಸೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುವ ವಿದೇಶಿ ಆಟಗಾರನೊಬ್ಬ ಮಾಡಿದ್ದ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.
ವಿರಾಟ್ ಕೊಹ್ಲಿ ಅವರು 6 ಇನ್ನಿಂಗ್ಸ್ ನಲ್ಲಿ 83.16ರನ್ ಸರಾಸರಿಯಂತೆ 499 ರನ್ (3 ಶತಕ, 1 ಅರ್ಧ ಶತಕ) ಗಳಿಸಿ ಸಚಿನ್ ದಾಖಲೆ ಮುರಿದಿದ್ದಾರೆ. ಸಚಿನ್ ಅವರು 2007-08ರ ಸರಣಿಯಲ್ಲಿ 7 ಇನ್ನಿಂಗ್ಸ್ ನಲ್ಲಿ 480 ರನ್ ಗಳಿಸಿದ್ದಾರೆ.

26 ವರ್ಷ ವಯಸ್ಸಿನ ಕೊಹ್ಲಿ ಪ್ರಸಕ್ತ ಆಸ್ಟ್ರೇಲಿಯಾ ಸರಣಿಯಲ್ಲಿ ಆಡಿಲೇಡ್ ಟೆಸ್ಟ್ ನಲ್ಲೇ ಸತತ ಶತಕ ಬಾರಿಸಿದ್ದರು. ಬ್ರಿಸ್ಬೇನ್ ನಲ್ಲಿ ಅಷ್ಟಾಗಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಮೆಲ್ಬೋರ್ನ್ ನಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದರು. ಸಿಡ್ನಿಯಲ್ಲಿ ಜ.6 ರಂದು ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ಕೊಹ್ಲಿ ಅವರು ನಾಲ್ಕು ಟೆಸ್ಟ್ ಗಳ ಸರಣಿಯಲ್ಲಿ 500 ರನ್ ಗಡಿ ದಾಟುವ ಎಲ್ಲಾ ಸಾಧ್ಯತೆಗಳಿವೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕನಾಗಿ ಎರಡು ಇನ್ನಿಂಗ್ಸ್ ನಲ್ಲಿ ಶತಕ 115 ಹಾಗೂ 141 ಬಾರಿಸಿದ್ದು ದಾಖಲೆಯಾಗಿದೆ. ಬ್ರಿಸ್ಬೇನ್ ನಲ್ಲಿ 19 ಹಾಗೂ 1 ರನ್ ಸ್ಕೋರ್ ಮಾಡಿದ ಕೊಹ್ಲಿ ಮೆಲ್ಬೋರ್ನ್ ಮೈದಾನದಲ್ಲಿ ಮತ್ತೆ ಲಯ ಕಂಡು ಕೊಂಡು ವೈಯಕ್ತಿಕ ಅತ್ಯಧಿಕ ಮೊತ್ತ 169 ರನ್ ಗಳಿಸಿದ್ದರು.
ಸಚಿನ್ ತೆಂಡೂಲ್ಕರ್ ಅಲ್ಲದೆ ಟೆಸ್ಟ್ ಕ್ರಿಕೆಟ್ ದಿಗ್ಗಜರ(ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮನ್) ಸಾಲಿಗೆ ಕೊಹ್ಲಿ ಸೇರಿದ್ದಾರೆ.
1. ವಿರಾಟ್ ಕೊಹ್ಲಿ (ಭಾರತ) 499 ರನ್, 6 ಇನ್ನಿಂಗ್ಸ್ (2014-15)
2. ಸಚಿನ್ ತೆಂಡೂಲ್ಕರ್ (ಭಾರತ) (2007-08)
3. ಜಿಆರ್ ವಿಶ್ವನಾಥ್ (ಭಾರತ)473 ರನ್ 9 ಇನ್ನಿಂಗ್ಸ್ (1977-78)
4. ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್) 466 ರನ್ 8 ಇನ್ನಿಂಗ್ಸ್ (1992-93)
5. ಕೆನ್ ಬ್ಯಾರಿಂಗ್ಟನ್ (ಇಂಗ್ಲೆಂಡ್) 464 ರನ್ 8 ಇನ್ನಿಂಗ್ಸ್ (1965-66)