ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳಲ್ಲಿ ಕ್ಲಾಸಿಕ್ ಬ್ಯಾಟಿಂಗ್ ನಡೆಸಿರುವ ವಿರಾಟ್ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ತಮ್ಮ ಗುರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಅಪ್‌ಡೇಟ್ ವರ್ಷನ್‌ನಲ್ಲಿ ಬ್ಯಾಟ್ ಮಾಡಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ ಆರ್ಭಟಿಸಿರುವ ವಿರಾಟ್ ರನ್ ಮಹಲು ಕಟ್ಟಿದ್ದಾರೆ. ಇವರು ಮೂರು ಪಂದ್ಯಗಳಲ್ಲಿ 302 ರನ್ ಕಲೆ ಹಾಕಿದ್ದಾರೆ. ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ 135 ರನ್ ಬಾರಿಸಿದರೆ, ರಾಯ್ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 102 ರನ್ ಬಾರಿಸಿದ್ದರು. ಇನ್ನು ವಿಶಾಖಪಟ್ಟಣಂನಲ್ಲಿ ವಿರಾಟ್ 65 ರನ್ ಬಾರಿಸಿದ್ದರು. ಇವರ ಅಮೋಘ ಆಟಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

ಈ ಸರಣಿ ಶ್ರೇಷ್ಠ ಪ್ರಶಸ್ತಿಯ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ 21ನೇ ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿದೆ. ಇದರೊಂದಿಗೆ ವಿರಾಟ್, ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಕ್ರಿಕೆಟ್ ದೇವರು ಖ್ಯಾತಿ ಸಚಿನ್ ತೆಂಡೂಲ್ಕರ್ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಒಟ್ಟು 20 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಈಗ ಸಚಿನ್ ಅವರ ಶಿಷ್ಯ ವಿರಾಟ್ ಕೊಹ್ಲಿ ಈ ದಾಖಲೆ ಮುರಿದಿದ್ದಾರೆ.
ವಿರಾಟ್ ಕೊಹ್ಕಿ, 21 ಬಾರಿ
ಸಚಿನ್ ತೆಂಡೂಲ್ಕರ್, 20 ಬಾರಿ
ಶಕೀಬ್ ಅಲ್ ಹಸನ್, 17 ಬಾರಿ
ಜಾಕ್ ಕಾಲಿಸ್, 15 ಬಾರಿ
ಡೇವಿಡ್ ವಾರ್ನರ್, 13 ಬಾರಿ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 270 ರನ್‌ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ಪರ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ 89 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ ಸಹಾಯದಿಂದ 106 ರನ್ ಬಾರಿಸಿದರು. ತೆಂಬು ಬವುಮಾ 48 ರನ್ ಸಿಡಿಸಿದರು. ಭಾರತದ ಪರ ಪ್ರಸಿದ್ಧ್ ಕೃಷ್ಣ, ಕುಲ್‌ದೀಪ್ ಯಾದವ್ ತಲಾ 4 ವಿಕೆಟ್ ಕಬಳಿಸಿದರು. ಗುರಿಯನ್ನು ಹಿಂಬಾಲಿಸಿದ ಭಾರತ 39.5 ಓವರ್‌ಗಳಲ್ಲಿ 1 ವಿಕೆಟ್‌ಗೆ 271 ರನ್ ಸೇರಿಸಿತು. ಭಾರತದ ಪರ ಆರಂಭಿಕ ಯುವ ಆಟಗಾರ ಯಶಸ್ವಿ ಜೈಸ್ವಾಲ್ 121 ಎಸೆತಗಳಲ್ಲಿ 12 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 116 ರನ್ ಬಾರಿಸಿದರು. ಆರಂಭಿಕ ರೋಹಿತ್ ಶರ್ಮಾ 75, ವಿರಾಟ್ ಕೊಹ್ಲಿ ಅಜೇಯ 65 ರನ್ ಬಾರಿಸಿದರು.