
ಮೊಹಾಲಿ, ಮಾರ್ಚ್ 9: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬಂದರೆ ಟೀಮ್ ಇಂಡಿಯಾ ಅನಗತ್ಯ ದಾಖಲೆ ಬರೆದಿದ್ದು ಕಡಿಮೆಯೆ. ಅದರಲ್ಲೂ ತವರು ನೆಲದಲ್ಲಿ ನಡೆದ ಪಂದ್ಯಗಳಲ್ಲಿ ಭಾರತ ಕೆಟ್ಟ ದಾಖಲೆಗಳಿಗೆ ಗುರುತಿಸಿಕೊಂಡಿದ್ದು ತೀರಾ ಕಡಿಮೆ, ಹಾಗಂತ ಭಾರತದ ಹೆಸರಿನಲ್ಲಿ ದಾಖಲಾಗಿರುವ ಅನಗತ್ಯ ದಾಖಲೆಯನ್ನು ಮರೆ ಮಾಚುವಂತೆಯೂ ಇಲ್ಲ.
ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರ ಸ್ಟೇಡಿಯಂನಲ್ಲಿ ಭಾರತ ಮತ್ತು ಪ್ರವಾಸಿ ಆಸ್ಟ್ರೇಯಾ ತಂಡಗಳು ನಾಲ್ಕನೇ ಏಕದಿನ ಪಂದ್ಯಕ್ಕಾಗಿ ಭಾನುವಾರ (ಮಾರ್ಚ್ 10) ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಭಾರತವೇನಾದರೂ ಗೆದ್ದರೆ ಸುಮಾರು 23 ವರ್ಷಗಳ ಹಿಂದಿನ ಅನಗತ್ಯ ದಾಖಲೆ ಅಂತ್ಯಗೊಳ್ಳಲಿದೆ.
ಮೊಹಾಲಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಈವರೆಗೆ ನಾಲ್ಕು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗೆದ್ದಿದ್ದು ಒಂದೇಸಾರಿ. ಅದೂ 1996ರಲ್ಲಿ ನಡೆದಿದ್ದ ಪಂದ್ಯದಲ್ಲಿ. ದುರಾದೃಷ್ಟವೆಂದರೆ ಅನಂತರ 2006, 2009, 2013ರಲ್ಲಿ ನಡೆದ ಪಂದ್ಯಗಳಲ್ಲಿ ಭಾರತ ಮುಖಭಂಗವನ್ನೇ ಅನುಭವಿಸಿದೆ.
ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಎರಡು ಪಂದ್ಯಗಳನ್ನು ಆಸ್ಟ್ರೇಲಿಯಾ ಒಂದು ಪಂದ್ಯವನ್ನು ಗೆದ್ದುಕೊಂಡಿದೆ. ಮೊಹಾಲಿ ಪಂದ್ಯವನ್ನು ಭಾರತ ಗೆದ್ದರೆ ಏಕದಿನ ಸರಣಿ ನಮ್ಮ ವಶವಾಗುವುದಷ್ಟೇ ಅಲ್ಲ, 23 ವರ್ಷಗಳ ಸೋಲನ್ನು ಹೊಡೆದೋಡಿಸಿದಂತೆಯೂ ಆಗುತ್ತದೆ. ಒಟ್ಟಿನಲ್ಲಿ ಮೊಹಾಲಿಯಲ್ಲಿ ಕೊಹ್ಲಿ ಬಳಗ ಗೆಲ್ಲಲಿ ಅಷ್ಟೆ.