ಭಾರತ ತಂಡ ಪಾಕಿಸ್ತಾನವನ್ನು ಕೊಲಂಬೋದಲ್ಲಿ ಇಂದು ಎದುರಿಸುತ್ತಿದೆ. ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಈ ಮುಖಾಮುಖಿಯಾಗುತ್ತಿದ್ದು ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಎರಡು ತಮಡಗಳಿಗೂ ಅತ್ಯಂತ ಮಹತ್ವದ್ದಾಗಿರಲಿದೆ. ಪಾಕಿಸ್ತಾನ ಸೂಪರ್ 4 ಹಂತದಲ್ಲಿ ಈಗಾಗಲೇ ಬಾಂಗ್ಲಾದೇಶ ತಂಡವನ್ನು ಮಣಿಸಿದ್ದು ಈ ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದು ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಇತ್ತ ಭಾರತ ತಂಡ ಪಾಕ್ ಓಟಕ್ಕೆ ತಡೆಹಾಕಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೂಡ ಮಾಡಿಕೊಂಡಿದೆ.
ಇನ್ನು ಪಾಕಿಸ್ತಾನ ವಿರುದ್ಧದ ಪಂದ್ಯ ಎಂದರೆ ಅಲ್ಲಿ ಎಲ್ಲರ ಕಣ್ಣು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೇಲೆ ನೆಟ್ಟಿರುವುದು ಸಾಮಾನ್ಯ. ಗ್ರೂಪ್ ಹಂತದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಗ್ಗಕ್ಕೆ ವಿಕೆಟ್ ಕಳೆದುಕೊಂಡ ಕಾರಣ ಪಾಕಿಸ್ತಾನಕ್ಕೆ ಹೆಚ್ಚಿನ ಹಾನಿಯುಂಟು ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಮತ್ತೊಮ್ಮೆ ತನ್ನ ನೆಚ್ಚಿನ ಎದುರಾಳಿ ನೆಚ್ಚಿನ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿರುವಾಗ ಕೊಹ್ಲಿಯಿಂದ ಮತ್ತೊಂದು ಅದ್ಭುತ ಪ್ರದರ್ಶನ ನಿರೀಕ್ಷೆ ಮಾಡುವುದರಲ್ಲಿ ತಪ್ಪಿಲ್ಲ!

ಕೊಲಂಬೋದಲ್ಲಿ ಕಳೆದ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಆಡಿದ್ದಾಗ ಅಕ್ಷರಶಃ ರೌದ್ರಾವತಾರ ತಾಳಿದ್ದಾರೆ. ಕೊನೆಯ ಮೂರು ಪಂದ್ಯಗಳಲ್ಲಿ ಕೊಹ್ಲಿ ಸತತವಾಗಿ ಇಲ್ಲಿ ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. 2012ರಲ್ಲಿ ಶ್ರೀಲಂಕಾ ವಿರುದ್ಧ ಇಲ್ಲಿ ಮೊದಲ ಬಾರಿಗೆ ಆಡಿದ್ದಾಗ ಕೊಹ್ಲಿ 112 ಎಸೆತಗಳಲ್ಲಿ ಔಟಾಗದೆ 128 ರನ್‌ಗಳನ್ನು ಬಾರಿಸಿದ್ದರು. ಅದಾದ ಬಳಿಕ ಕೊಹ್ಲಿ ಈ ಕ್ರೀಡಾಂಗಣದಲ್ಲಿ ಆಡಿದ್ದು 2017ರಲ್ಲಿ. 96 ಎಸೆತಗಳಲ್ಲಿ 131 ರನ್‌ಗಳನ್ನು ಬಾರಿಸಿದ ವಿರಾಟ್ ಕೊಹ್ಲಿ ಕೊಲಂಬೋ ತನ್ನ ನೆಚ್ಚಿನ ಅಂಗಳ ಎನ್ನುವುದನ್ನು ಮತ್ತೊಮ್ಮೆ ಸಾರಿದ್ದರು. ಇನ್ನು 2017ರಲ್ಲಿಯೇ ಕೊಹ್ಲಿ ಮತ್ತೊಮ್ಮೆ ಇಲ್ಲಿ ಆಡಿದ್ದಾಗಲೂ ಶತಕ ಬಾರಿಸಿದ್ದಾರೆ. ಕೊನೆಯ ಬಾರಿ ಇಲ್ಲಿ ಆಡಿದ್ದಾಗ 116 ಎಸೆತಗಳಲ್ಲಿ 110 ರನ್‌ಗಳನ್ನು ಬಾರಿಸಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಸರಾಸರಿ ಹೊಂದಿರುವ ಕ್ರೀಡಾಂಗಣ ಎಂದರೆ ಅದು ಕೊಲಂಬೋ ಎಂದರೆ ನಂಬಲೇ ಬೇಕು. ವಿರಾಟ್ ಕೊಹ್ಲಿ ಇಲ್ಲಿ ಆಡಿರುವ 8 ಪಂದ್ಯಗಳಲ್ಲಿ ಗಳಿಸಿದ್ದು ಭರ್ಜರಿ 519 ರನ್. ಈ ಪಂದ್ಯಗಳಲ್ಲಿ ಅವರ ಸರಾಸರಿ 103.80ರಷ್ಟು ಅದ್ಭುತವಾಗಿದೆ. ಬೇರೆ ಯಾವುದೇ ಕ್ರೀಡಾಂಗಣದಲ್ಲಿಯೂ ಕೊಹ್ಲಿ ಇಂಥಾ ಅದ್ಭುತ ಸರಾಸರಿಯನ್ನು ಹೊಂದಿಲ್ಲ. ಇಲ್ಲಿ ಆಡಿದ ಪಂದ್ಯಗಳಲ್ಲಿ 94.70 ಸ್ಟ್ರೈಕ್‌ರೇಟ್ ಹೊಂದಿದ್ದಾರೆ ಕೊಹ್ಲಿ.
ವಿರಾಟ್ ಕೊಹ್ಲಿ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ 2007ರಿಂದ ಆಡಲು ಆರಂಭಿಸಿದ್ದು 2017ರಲ್ಲಿ ಕೊನೆಯ ಪಂದ್ಯವನ್ನು ಆಡಿದ್ದಾರೆ. ಈ ಅವಧಿಯಲ್ಲಿ ಕೊಹ್ಲಿ 8 ಪಂದ್ಯಗಳನ್ನ ಆಡಿದ್ದು ಇದರಲ್ಲಿ ಒಂದು ಅರ್ಧ ಶತಕ ಸಿಡಿಸಿದ ಸಾಧನೆ ಮಾಡಿದ್ದರೆ ಮೂರು ಭರ್ಜರಿ ಶತಕಗಳನ್ನು ಹೊಂದಿದ್ದಾರೆ ವಿರಾಟ್ ಕೊಹ್ಲಿ. ಈ ಕ್ರೀಡಾಂಗಣದಲ್ಲಿ ಒಟ್ಟು 54 ಬೌಂಡರಿಗಳನ್ನು ವಿರಾಟ್ ಬಾರಿಸಿದ್ದು 4 ಸಿಕ್ಸರ್ ಸಿಡಿಸಿದ್ದಾರೆ.