ಜನವರಿ 9 ರಿಂದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಗಾಗಿ ಶನಿವಾರ ಬಿಸಿಸಿಐ ಆಯ್ಕೆ ಸಮಿತಿ ಭಾರತ ತಂಡವನ್ನು ಘೋಷಣೆ ಮಾಡಿದೆ. ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸ್ಥಾನ ಪಡೆದಿದ್ದಾರೆ. ಗಾಯದಿಂದ ಬಳಲುತ್ತಿದ್ದ ಶ್ರೇಯಸ್ ಅಯ್ಯರ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಉಭಯ ತಂಡಗಳ ನಡುವಣ ದ್ವಿಪಕ್ಷೀಯ ಸರಣಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಎರಡೂ ತಂಡಗಳು ಮೈದಾನಕ್ಕೆ ಇಳಿದಾಗ ಗರಿಷ್ಠ ರನ್ ಬಾರಿಸಿದ್ದು ಯಾರು? ವಿರಾಟ್ ಕೊಹ್ಲಿ ಯಾವ ಸ್ಥಾನದಲ್ಲಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.
ಉಭಯ ದೇಶಗಳ ನಡುವಣ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಕೀರ್ತಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲುತ್ತದೆ. ಸಚಿನ್ ನ್ಯೂಜಿಲೆಂಡ್ ವಿರುದ್ಧ ಆಡಿದ 42 ಪಂದ್ಯಗಳಲ್ಲಿ 46ರ ಸರಾಸರಿಯಲ್ಲಿ 1750 ರನ್ ಸಿಡಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 8 ಅರ್ಧಶತಕಗಳು ಸೇರಿವೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಆಡಿದ 33 ಪಂದ್ಯಗಳಲ್ಲಿ 1657 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರ ಸರಾಸಾರಿ 55 ಆಗಿದ್ದು, 6 ಶತಕ, 9 ಅರ್ಧಶತಕಗಳನ್ನು ಕಲೆ ಹಾಕಿದ್ದಾರೆ.

ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತೊಂದು ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಇವರು ಈ ಸರಣಿಯಲ್ಲಿ 94 ರನ್ ಬಾರಿಸಿದ್ದೇ ಆದಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸಿ ಹಾಕಬಹುದು. ಈ ಮೂಲಕ ಉಭಯ ದೇಶಗಳ ನಡುವಣ ಏಕದಿನ ಸರಣಿಯಲ್ಲಿ ವಿರಾಟ್ ಗರಿಷ್ಠ ರನ್ ಬಾರಿಸಿದ ಆಟಗಾರನಾಗುವ ಅವಕಾಶವನ್ನು ಹೊಂದಿದ್ದಾರೆ.
ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ರಾಸ್ ಟೇಲರ್ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಆಡಿದ 35 ಪಂದ್ಯಗಳಲ್ಲಿ 47ರ ಸರಾಸರಿಯಲ್ಲಿ 1385 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರು 3 ಶತಕ, 8 ಅರ್ಧಶತಕಗಳು ಸೇರಿವೆ. ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕೇನ್ ವಿಲಿಯಮ್ಸನ್ ಇದ್ದಾರೆ. ಇವರು 44ರ ಸರಾಸರಿಯಲ್ಲಿ 1239 ರನ್ ಬಾರಿಸಿದ್ದರು. ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ನಾಥನ್ ಆಸ್ಟಲ್ ಐದನೇ ಸ್ಥಾನದಲ್ಲಿದ್ದಾರೆ. ಇವರು 29 ಪಂದ್ಯಗಳಲ್ಲಿ 1207 ರನ್ ಸಿಡಿಸಿದ್ದಾರೆ. ಈ ವೇಳೆ ಇವರು 5 ಶತಕ, 5 ಅರ್ಧಶತಕ ಬಾರಿಸಿದ್ದಾರೆ.

ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸಹ ಈ ಪಟ್ಟಿಯಲ್ಲಿ ಇದ್ದಾರೆ. ಇವರು ಆಡಿದ 31 ಪಂದ್ಯಗಳಲ್ಲಿ 1073 ರನ್ ಸಿಡಿಸಿದ್ದಾರೆ. ಇವರು ಈ ಸರಣಿಯಲ್ಲಿ ಮೂರು ಸಿಕ್ಸರ್ ಬಾರಿಸುತ್ತಿದ್ದಂತೆ ನ್ಯೂಜಿಲೆಂಡ್ ವಿರುದ್ಧ 50ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಮೊದಲ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಳ್ಳಲಿದ್ದಾರೆ.