ಐಪಿಎಲ್ ಆರಂಭಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕಾದಾಟ ನಡೆಸಲಿದೆ. ಈ ಬಿಗ್ ಫೈಟ್‌ಗಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಸುಮಾರು ಒಂದು ವರ್ಷದ ಬಳಿಕ ಮತ್ತೆ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಕ್ರಿಕೆಟ್ ಕಲರವ ಶುರುವಾಗಲಿದೆ. ಈ ವೇಳೆ ಎಲ್ಲರ ಕಣ್ಣುಗಳು ಆರ್‌ಸಿಬಿ ತಂಡದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರಲಿವೆ.
ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಈಗಾಗಲೇ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇವರು ಚಿನ್ನಸ್ವಾಮಿ ಮೈದಾನದಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಐಪಿಎಲ್ 2026ರಲ್ಲಿ ಅಬ್ಬರಿಸಿ, ತನ್ನಲ್ಲಿ ಇನ್ನು ಬ್ಯಾಟಿಂಗ್ ಕ್ಷಮತೆ ಇದೆ ಎಂಬುದನ್ನು ಸಾಬೀತುಪಡೆಸಲಿದ್ದಾರೆ. ಇದೇ ವೇಳೆ ವಿರಾಟ್ ಏಳು ದಾಖಲೆಗಳ ಮೇಲೆ ಕಣ್ಣು ನೆಟ್ಟಿದ್ದಾರೆ.

ಈಗಾಗಲೇ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ವಿರಾಟ್ ಕೊಹ್ಲಿ ಮತ್ತಷ್ಟು ದಾಖಲೆಗಳನ್ನು ಬರೆಯುವ ಕನಸಿನಲ್ಲಿದ್ದಾರೆ. ಈ ಆವೃತ್ತಿಯಲ್ಲಿ ಇವರು 339 ರನ್ ಬಾರಿಸಿದಲ್ಲಿ ಐಪಿಎಲ್ ಇತಿಹಾಸದಲ್ಲಿ 9 ಸಾವಿರ ರನ್ ಕಲೆ ಹಾಕಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಇವರು ಆಡಿರುವ 267 ಪಂದ್ಯಗಳಲ್ಲಿ 8661 ರನ್ ಸಿಡಿಸಿದ್ದಾರೆ.
ಕೊಹ್ಲಿ ಆರ್‌ಸಿಬಿ ತಂಡದ ಪರ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ. ಅಷ್ಟೇ ಅಲ್ಲ ಒಂದೇ ಫ್ರಾಂಚೈಸಿ ಪರ ಗರಿಷ್ಠ ರನ್ ಸೇರಿಸಿದ ಸಾಧಕ. ಇವರು ಇದೇ ಫ್ರಾಂಚೈಸಿ ಪರ 282 ಪಂದ್ಯಗಳನ್ನು ಆಡಿದ್ದು, 9085 ರನ್ ಕಲೆ ಹಾಕಿದ್ದಾರೆ. ಒಂದು ವೇಳೆ ಈ ಐಪಿಎಲ್‌ನಲ್ಲಿ ವಿರಾಟ್ 915 ರನ್ ಸಿಡಿಸಿದಲ್ಲಿ ಒಂದೇ ಫ್ರಾಂಚೈಸಿ ಪರ 10 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ.
ಈ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಇನ್ನು 296 ರನ್ ಬಾರಿಸಿದ್ದೇ ಆದಲ್ಲಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ದೇಶದಲ್ಲಿ 10 ಸಾವಿರ ರನ್ ಕಲೆ ಹಾಕಿದ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ವರೆಗೆ ಕೊಹ್ಲಿ ಭಾರತದಲ್ಲಿ ಆಡಿದ 284 ಟಿ20 ಪಂದ್ಯಗಳಲ್ಲಿ 9704 ರನ್ ಕಲೆ ಹಾಕಿದ್ದಾರೆ.
ಅಭಿಮಾನಿಗಳಿ ವಿರಾಟ್ ಕೊಹ್ಲಿ ಸಂದೇಶ: ಅದೇ ಅಧ್ಯಾಯ ಹೊಸ ಕಥೆ
ಈ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಅವರ ಚಿತ್ತ 300 ಸಿಕ್ಸರ್ ಮೇಲೂ ಇರಲಿದೆ. ಇವರು ಮುಂಬರುವ ಆವೃತ್ತಿಯಲ್ಲಿ 9 ಸಿಕ್ಸರ್ ಬಾರಿಸುವಲ್ಲಿ ಯಶಸ್ವಿಯಾದಲ್ಲಿ ಒಂದೇ ತಂಡದ ಪರ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಸಾಧನೆ ಮಾಡಲಿದ್ದಾರೆ.
ವಿರಾಟ್ ಕೊಹ್ಲಿ ಭಾರತ, ದೆಹಲಿ, ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿ ಒಟ್ಟು 414 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಇವರು 13,543 ರನ್ ಬಾರಿಸಿದ್ದಾರೆ. ಈ ಲೀಗ್‌ನಲ್ಲಿ 457 ರನ್ ಬಾರಿಸುವಲ್ಲಿ ವಿರಾಟ್ ಯಶಸ್ವಿಯಾದಲ್ಲಿ ಟಿ20 ಕ್ರಿಕೆಟ್‌ನಲ್ಲಿ 14 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ವಿಶ್ವಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಐದನೇ ಬ್ಯಾಟರ್ ಎಂಬ ದಾಖಲೆ ಬರೆಯಲಿದ್ದಾರೆ. ಇದಕ್ಕೂ ಮೊದಲು ಕ್ರಿಸ್ ಗೇಲ್, ಕೀರನ್ ಪೊಲಾರ್ಡ್, ಅಲೆಕ್ಸ್ ಹೆಲ್ಸ್, ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ್ದಾರೆ.

19ನೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಚಿನ್ನಸ್ವಾಮಿ ಅಂಗಳದಲ್ಲಿ ಸ್ಥಿರ ಪ್ರದರ್ಶನ ನೀಡಿ ಒಟ್ಟಾರೆ 382 ರನ್ ಕಲೆ ಹಾಕಿದಲ್ಲಿ ಒಂದೇ ಕ್ರಿಕೆಟ್ ಮೈದಾನದಲ್ಲಿ 4 ಸಾವಿರ ರನ್ ಕಲೆ ಹಾಕಿದ ಬ್ಯಾಟರ್ ಆಗಲಿದ್ದಾರೆ.

ವಿರಾಟ್ ಕೊಹ್ಲಿ ಮುಂಬರುವ ಆವೃತ್ತಿಯಲ್ಲಿ ಬೆಂಗಳೂರಿನ ಐಕಾನಿಕ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಇನ್ನೊಂದು ಶತಕ ಬಾರಿಸುವಲ್ಲಿ ಸಫಲರಾದಲ್ಲಿ, ಒಂದೇ ಅಂಗಳದಲ್ಲಿ ಅತಿ ಹೆಚ್ಚು ಟಿ20 ಶತಕ ಬಾರಿಸಿದ ಕ್ರಿಸ್ ಗೇಲ್ ದಾಖಲೆ ಸಮಕ್ಕೆ ನಿಲ್ಲಲಿದ್ದಾರೆ. ವಿರಾಟ್ ಚಿನ್ನಸ್ವಾಮಿ ಮೈದಾನದಲ್ಲಿ ಈ ವರೆಗೆ 4 ಶತಕ ಬಾರಿಸಿದ್ದಾರೆ. ಕ್ರಿಸ್ ಗೇಲ್ ಶೇರ್ ಏ ಬಾಂಗ್ಲಾ ಮೈದಾನದಲ್ಲಿ 5 ಶತಕ ಬಾರಿಸಿದ್ದಾರೆ.