ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ ಮೂರು ಏಕದಿನ ಪಂದ್ಯಗಳ ಮೊದಲ ಪಂದ್ಯ ಪರ್ತ್‌ನಲ್ಲಿ ನಡೆಯಲಿದೆ. ಈ ವೇಳೆ ಎಲ್ಲರ ಕಣ್ಣುಗಳು ಸ್ಟಾರ್ ಆಟಗಾರರ ಮೇಲೆ ನೆಟ್ಟಿರಲಿವೆ. ಅದರಲ್ಲೂ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ, ದುಬೈನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯ ಬಳಿಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಂ ಬ್ಯಾಕ್ ಮಾಡುತ್ತಿದ್ದಾರೆ. ಇವರು ಈಗಾಗಲೇ ಟೆಸ್ಟ್ ಹಾಗೂ ಟಿ20 ಸ್ವರೂಪಕ್ಕೆ ಗುಡ್ ಬಾಯ್ ಹೇಳಿದ್ದು, ಇನ್ನು ಏಕದಿನ ಮಾದರಿಯಲ್ಲಿ ಮಾತ್ರ ದೇಶವನ್ನು ಪ್ರತಿನಿಧಿಸಲಿದ್ದಾರೆ.
ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಅಂಗಳಕ್ಕೆ ಇಳಿದಾಗಲೆಲ್ಲಾ ಹೊಸ ದಾಖಲೆಗಳು ನಿರ್ಮಾಣವಾಗುತ್ತವೆ. ಹೀಗೆ ಈ ಬಾರಿಯೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ದೊಡ್ಡ ದಾಖಲೆಯನ್ನು ನಿರ್ಮಿಸುವ ಕನಸಿನಲ್ಲಿದ್ದಾರೆ. ಈ ಮೂಲಕ ತಾವು ಇನ್ನು ಫಿಟ್ ಆಗಿದ್ದು, ಏಕದಿನ ವಿಶ್ವಕಪ್‌ಗೆ ತಮ್ಮನ್ನು ಪರಿಗಣಿಸುವಂತೆ ಬಿಸಿಸಿಐ ಆಯ್ಕೆ ಸಮಿತಿಗೆ ಒತ್ತಾಯಿಸಲಿದ್ದಾರೆ. ಆಸ್ಟ್ರೇಲಿಯಾದ ನೆಲದಲ್ಲಿ ವಿರಾಟ್ ಕೊಹ್ಲಿ ಕ್ರಿಕೆಟ್ ಇತಿಹಾಸದಲ್ಲಿ ಯಾವೊಬ್ಬ ಬ್ಯಾಟರ್ ಮಾಡದ ದಾಖಲೆಯನ್ನು ತಮ್ಮ ಹೆಸರಿಗೆ ನಮೂದಿಸಿಕೊಳ್ಳಲಿದ್ದಾರೆ. ಹಾಗಿದ್ದರೆ ಅವರು ಬರೆಯಲಿರುವ ಆ ದಾಖಲೆ ಏನು?

ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ವೇಳೆ ಎಲ್ಲರ ಕಣ್ಣುಗಳು ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರಲಿವೆ. ಇವರು ಈ ಮೂರು ಪಂದ್ಯಗಳಲ್ಲಿ ಒಂದು ಶತಕವನ್ನು ಬಾರಿಸಿದ್ದೇ ಆದಲ್ಲಿ ದಾಖಲೆಯ ಪುಟಕ್ಕೆ ಸ್ಥಾನವನ್ನು ಪಡೆಯಲಿದ್ದಾರೆ. ಅಲ್ಲದೆ ಇಡೀ ಕ್ರಿಕೆಟ್ ಜಗತ್ತೇ ತಿರುಗಿ ನೋಡುವ ಸಾಧನೆಯನ್ನು ಮಾಡಲಿದ್ದಾರೆ.
ರನ್ ಮಶೀನ್ ಖ್ಯಾತಿಯ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಇವರು ಆಡಿರುವ 302 ಏಕದಿನ ಪಂದ್ಯಗಳ 290 ಇನಿಂಗ್ಸ್‌ಗಳಲ್ಲಿ 51 ಶತಕ ಬಾರಿಸಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ 50 ಓವರ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನು ಬರೆದಿದ್ದಾರೆ. ಈ ಮೊದಲು ಈ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಸಚಿನ್ 463 ಏಕದಿನ ಪಂದ್ಯಗಳಲ್ಲಿ 49 ಶತಕ ಸಿಡಿಸಿದ್ದಾರೆ.

ಮೂರು ಪಂದ್ಯಗಳ ಸರಣಿಯಲ್ಲಿ ವಿರಾಟ್ ಒಂದು ಶತಕವನ್ನು ಬಾರಿಸುವಲ್ಲಿ ಯಶಸ್ವಿಯಾದರೆ, ವಿಶ್ವ ಕ್ರಿಕೆಟ್‌ನಲ್ಲಿ ಯಾವುದೇ ಫಾರ್ಮೆಟ್‌ನಲ್ಲಿ (ಏಕದಿನ, ಟೆಸ್ಟ್, ಟಿ20) ಯಾರು ಬಾರಿಸದಷ್ಟು ಶತಕಗಳನ್ನು ಬಾರಿಸಲಿದ್ದಾರೆ. ಅಂದರೆ ಸದ್ಯ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 51 ಶತಕ ಬಾರಿಸಿದ ಹಿರಿಮೆ ಇದೆ. ಇನ್ನು ವಿರಾಟ್ ಆಸೀಸ್ ನೆಲದಲ್ಲಿ ಶತಕ ಬಾರಿಸಿದ್ದೇ ಆದಲ್ಲಿ, ಏಕದಿನ ಕ್ರಿಕೆಟ್‌ನಲ್ಲಿ 52 ಶತಕ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಯಾವುದೇ ಒಂದು ಸ್ವರೂಪದಲ್ಲಿ ಅತಿ ಹೆಚ್ಚು ಶತಕವನ್ನು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.