
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ಇನ್ನು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದಿದ್ದು, ಈ ಬಾರಿಯ ಐಪಿಎಲ್ ಟೂರ್ನಿಯ ಚೊಚ್ಚಲ ಪಂದ್ಯ ಇದೇ ತಿಂಗಳ 26ರಂದು ನಡೆಯಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಳೆದ ಬಾರಿಯ ಐಪಿಎಲ್ ಆವೃತ್ತಿಯ ರನ್ನರ್ ಅಪ್ ಆಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹಲವಾರು ತಂಡಗಳು ನೂತನ ನಾಯಕ ಹಾಗೂ ಆಟಗಾರರೊಂದಿಗೆ ಕಣಕ್ಕಿಳಿಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಲವು ವರ್ಷಗಳ ನಂತರ ನೂತನ ನಾಯಕನ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ. ಹೌದು, ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಣಕ್ಕಿಳಿದ ಅಂತಿಮ ಟೂರ್ನಿಯಾಗಿದ್ದು, ವಿರಾಟ್ ಕೊಹ್ಲಿ ಆರ್‌ಸಿಬಿ ತಂಡಕ್ಕೆ ರಾಜೀನಾಮೆ ನೀಡಿದ ನಂತರ ಇದೀಗ ಈ ಬಾರಿಯ ಮೆಗಾ ಹರಾಜಿನಲ್ಲಿ 7 ಕೋಟಿಗೆ ತಂಡ ಸೇರಿದ ಫಾಫ್ ಡು ಪ್ಲೆಸಿಸ್ ಹೆಗಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನಾಯಕತ್ವದ ಜವಾಬ್ದಾರಿಯನ್ನು ನೀಡಿದೆ.
ಇನ್ನು ಟೂರ್ನಿ ಸಮೀಪಿಸುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಹಲವು ಆಟಗಾರರು ಮುಂಬೈ ತಲುಪಿ ಅಭ್ಯಾಸಗಳನ್ನು ಆರಂಭಿಸಿದ್ದು, ತಂಡಕ್ಕೆ ನೂತನ ನಾಯಕನಾಗಿ ಆಯ್ಕೆಯಾಗಿರುವ ಫಾಫ್ ಡು ಪ್ಲೆಸಿಸ್ ಕೂಡ ಈ ಅಭ್ಯಾಸದ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ತಂಡದ ಆಟಗಾರರ ಅಭ್ಯಾಸದ ಚಿತ್ರಗಳನ್ನು ಸಾಮಾಜಿ ಜಾಲತಾಣದಲ್ಲಿ ಹಂಚಿಕೊಂಡಾಗಲೆಲ್ಲಾ ನೆಟ್ಟಿಗರು ವಿರಾಟ್ ಕೊಹ್ಲಿ ಯಾವಾಗ ತಂಡ ಸೇರಲಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿ ಎನ್ನುವ ಪ್ರಶ್ನೆಗಳನ್ನು ಕಾಮೆಂಟ್ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಕೇಳುತ್ತಿದ್ದರು. ಇನ್ನು ಅಭಿಮಾನಿಗಳ ಈ ಪ್ರಶ್ನೆಗಳಿಗೆಲ್ಲಾ ಇಂದು ( ಮಾರ್ಚ್ 22 ) ಉತ್ತರ ದೊರಕಿದ್ದು, ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಂಪ್ ಸೇರಿಕೊಂಡಿದ್ದಾರೆ.
ಹೌದು, ವಿರಾಟ್ ಕೊಹ್ಲಿ ಇಂದು ( ಮಾರ್ಚ್ 22 ) ಮುಂಬೈ ತಲುಪಿದ್ದು, ಈ ಚಿತ್ರಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ ಟ್ಟಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಅಭಿಮಾನಿಗಳು ವಿರಾಟ್ ಕೊಹ್ಲಿ ಯಾವಾಗ ಕ್ಯಾಂಪ್ ಸೇರುತ್ತಾರೆ ಎಂದು ಕೇಳಿದ್ದ ಪ್ರಶ್ನೆಗಳ ಚಿತ್ರವನ್ನೂ ಕೂಡ ಈ ಟ್ವೀಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ವಿರಾಟ್ ಕೊಹ್ಲಿ ಆರ್‌ಸಿಬಿ ಕ್ಯಾಂಪ್ ಸೇರಿದ ಸುದ್ದಿಯನ್ನು ಕೇಳಿದ ಅಭಿಮಾನಿಗಳು ಕಾಮೆಂಟ್ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದು, ವಿರಾಟ್ ಕೊಹ್ಲಿಗೆ ಸ್ವಾಗತವನ್ನು ಕೋರಿದ್ದಾರೆ.
ಇನ್ನು ವಿರಾಟ್ ಕೊಹ್ಲಿಯ ಚಿತ್ರಗಳನ್ನು ಹಂಚಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 'ರಾಜ ಬಂದಾಯ್ತು! ಅದೇ ಸುದ್ದಿ. ಅಷ್ಟೇ' ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್ ( ನಾಯಕ ), ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹೇಜಲ್‌ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫಾನ್ ರುದರ್‌ಫೋರ್ಡ್, ಜೇಸನ್ ಬೆಹ್ರೆಂಡ್, ಜೇಸನ್ ಬೆಹ್ರಾಯ್ ಮಿಲಿಂದ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್
