
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ಅವರ ಜೀವಮಾನ ಸಾಧನೆಯೊಂದನ್ನು ಮುರಿಯುವ ಹಂತದಲ್ಲಿದ್ದಾರೆ. ಕ್ರಿಕೆಟ್ ದೇವರು ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಸಚಿನ್ ಅವರು ನಿರ್ಮಿಸಿರುವ ಹಲವಾರು ದಾಖಲೆಗಳ ಸನಿಹ ಬರುವುದೇ ಕಷ್ಟ ಎಂದು ಹೇಳಲಾಗುತ್ತಿತ್ತು. ಆದರೆ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ಅವರು ನಿರ್ಮಿಸಿರುವ ಸಾರ್ವಕಾಲಿಕ ದಾಖಲೆಯೊಂದರ ಸನಿಹದಲ್ಲಿದ್ದಾರೆ.
ಹೌದು ವಿರಾಟ್ ಕೊಹ್ಲಿ ಅತಿ ಹೆಚ್ಚು ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ದಾಖಲೆಯನ್ನು ಸಚಿನ್ ತೆಂಡೂಲ್ಕರ್ ಅವರ ಜತೆ ಸರಿದೂಗಿಸಿಕೊಳ್ಳುವ ಸನಿಹದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜರ್ನಿಯಲ್ಲಿ ಇದುವರೆಗೂ ಸಹ ಎಲ್ಲಾ ಆವೃತ್ತಿಗಳನ್ನೂ ಸೇರಿ ಒಟ್ಟು 20 ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ವಿರಾಟ್ ಕೊಹ್ಲಿ ಅವರು 19 ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಸಚಿನ್ ಅವರಿಗಿಂತ ಕೇವಲ ಒಂದೇ ಒಂದು ಹೆಜ್ಜೆ ಹಿಂದಿದ್ದಾರೆ.

ಸಚಿನ್ ತೆಂಡೂಲ್ಕರ್ ಎಲ್ಲಾ ಆವೃತ್ತಿಯನ್ನೊಳಗೊಂಡು ಒಟ್ಟು 183 ಸರಣಿಗಳನ್ನು ಆಡಿದ್ದು ಇದರಲ್ಲಿ 5 ಟೆಸ್ಟ್ ಮತ್ತು 15 ಏಕದಿನ ಸರಣಿಗಳಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಟಿ ಟ್ವೆಂಟಿ ಸರಣಿಗಳಲ್ಲಿ ಸಚಿನ್ ಅವರು ಯಾವುದೇ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿಲ್ಲ ಹೀಗಾಗಿ ಒಟ್ಟು 20 ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಎಲ್ಲಾ ಆವೃತ್ತಿಯ ಒಟ್ಟು 128 ಸರಣಿಗಳನ್ನು ಆಡಿರುವ ವಿರಾಟ್ ಕೊಹ್ಲಿ 3 ಟೆಸ್ಟ್ , 9 ಏಕದಿನ ಮತ್ತು 7 ಟಿ ಟ್ವೆಂಟಿ ಸರಣಿಗಳಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಪಡೆದು ಒಟ್ಟು 19 ಬಾರಿ ಸರಣಿ ಶ್ರೇಷ್ಠರಾಗಿದ್ದಾರೆ. ಮುಂದಿನ ದಿನಗಳಲ್ಲಿ ಒಂದು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ವಿರಾಟ್ ಪಡೆದರೆ ಸಾಕು ಸಚಿನ್ ಅವರ ಸಾರ್ವಕಾಲಿಕ ದಾಖಲೆಯನ್ನು ಸರಿದೂಗಿಸಿಕೊಳ್ಳಲಿದ್ದಾರೆ ಹಾಗೂ ಸಚಿನ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ವಿರಾಟ್ ಮುಂದಿನ ದಿನಗಳಲ್ಲಿ ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ.