2023ರ ಏಷ್ಯಾ ಕಪ್‌ಗೂ ಮುನ್ನ ಯೋ-ಯೋ ಟೆಸ್ಟ್ ಪಾಸ್ ಮಾಡಿದ ವಿರಾಟ್ ಕೊಹ್ಲಿ; ಗಳಿಸಿದ ಅಂಕಗಳೆಷ್ಟು?
ಭಾರತ ಕ್ರಿಕೆಟ್ ತಂಡದ 2023ರ ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ಪಂದ್ಯಾವಳಿಗಳಲ್ಲಿ ತೊಡಗಿಸಿಕೊಳ್ಳಲು ಬಿಡುವಿಲ್ಲದ ವೇಳಾಪಟ್ಟಿಗೆ ಸಜ್ಜಾಗುತ್ತಿರುವ ವಿರಾಟ್ ಕೊಹ್ಲಿ ಯೋ-ಯೋ ಟೆಸ್ಟ್ ಪಾಸ್ ಮಾಡಿದ್ದಾರೆ.
ಇದನ್ನು ಸ್ವತಃ ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದು, ಸ್ಟಾರ್ ಬ್ಯಾಟರ್ ತಮ್ಮ ಫಿಟ್‌ನೆಸ್ ಪರೀಕ್ಷೆಯ ನಂತರ ಮೈದಾನದಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ತಮ್ಮ ಯೋ-ಯೋ ಟೆಸ್ಟ್ ಸ್ಕೋರ್ 17.2 ಎಂದು ಬಹಿರಂಗಪಡಿಸಿದ್ದಾರೆ.

ವರದಿಗಳ ಪ್ರಕಾರ, ಬಿಸಿಸಿಐ ಯೋ-ಯೋ ಟೆಸ್ಟ್‌ಗಳಲ್ಲಿ ಆಟಗಾರರು ಕನಿಷ್ಠ 16.5 ಅಂಕಗಳನ್ನು ಗಳಿಸಬೇಕು ಎಂದು ನಿಗದಿಪಡಿಸಿದೆ. ಆದರೆ ವಿರಾಟ್ ಕೊಹ್ಲಿ ಅದಕ್ಕಿಂತಲೂ ಹೆಚ್ಚಿನ ಸ್ಕೋರ್ ಗಳಿಸಿ ಫಿಟ್‌ನೆಸ್‌ನಲ್ಲಿ ಮುಂದಿದ್ದಾರೆ.
ಇನ್ನು ಏಷ್ಯಾ ಕಪ್ ಆರಂಭಕ್ಕೂ ಮುನ್ನ ಆಟಗಾರರಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬೆಂಗಳೂರಿನ ಆಲೂರಿನಲ್ಲಿ ಪೂರ್ವಸಿದ್ಧತಾ ಶಿಬಿರವನ್ನು ಆಯೋಜಿಸಿದೆ ಎಂದು ತಿಳಿದುಬಂದಿದೆ.
ಹೆಚ್ಚಿನ ಆಟಗಾರರು ಈಗಾಗಲೇ ಶಿಬಿರವನ್ನು ಸೇರಿದ್ದರೆ, ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ನಿರತರಾಗಿದ್ದ ಆಟಗಾರರು ಆಗಸ್ಟ್ 25ರಂದು ಸೇರುವ ನಿರೀಕ್ಷೆಯಿದೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ನಲ್ಲಿ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಉಳಿದ ಸಿಬ್ಬಂದಿಗಳು ಶಿಬಿರಕ್ಕಾಗಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
2023ರ ಏಷ್ಯಾ ಕಪ್ ಪಂದ್ಯಾವಳಿಯು ಆಗಸ್ಟ್ 30ರಂದು ಪ್ರಾರಂಭವಾಗಲಿದ್ದು, ಭಾರತ ತಂಡದ ಮೊದಲ ಪಂದ್ಯವು ಸೆಪ್ಟೆಂಬರ್ 2ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ನಡೆಯಲಿದೆ.
ಕಳೆದ ಒಂದು ದಶಕದಲ್ಲಿ ಭಾರತ ತಂಡ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗಿದೆ. ಹೀಗಾಗಿ ಮುಂಬರುವ ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ಬಹಳಷ್ಟು ಪ್ರಾಮುಖ್ಯತೆ ಹೊಂದಿದೆ. ಮುಂಬರುವ ಪಂದ್ಯಾವಳಿಗೆ ಸಜ್ಜಾಗಲು ಭಾರತ ತಂಡದ ಆಟಗಾರರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಳೆದ ಆವೃತ್ತಿಯ ಏಷ್ಯಾ ಕಪ್ ಮತ್ತು 2022ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಗಮನಾರ್ಹ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಮತ್ತೊಮ್ಮೆ ತಂಡದ ಆಧಾರಸ್ತಂಭವಾಗಲಿದ್ದಾರೆ. ಅವರ ಬ್ಯಾಟಿಂಗ್ ಪ್ರದರ್ಶನವು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. 2011ರ ಏಕದಿನ ವಿಶ್ವಕಪ್ ಗೆದ್ದ ಅನುಭವ ವಿರಾಟ್ ಕೊಹ್ಲಿಗಿದೆ. ಇದು ಒಂದು ಹಂತದಲ್ಲಿ ಪ್ರಯೋಜನಕ್ಕೆ ಬರಲಿದೆ.
ಇನ್ನು ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸದ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರಂತಹ ಆಟಗಾರರನ್ನು ಏಷ್ಯಾ ಕಪ್ ಪಂದ್ಯಾವಳಿಗೆ ಅಯ್ಕೆ ಮಾಡುವ ಮೂಲಕ ಆಯ್ಕೆ ಸಮಿತಿ ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಕೂಡ ತಮ್ಮ ಪುನರಾಗಮನ ಮಾಡಲು ಸಿದ್ಧರಾಗಿದ್ದಾರೆ. ಈ ಸ್ಟಾರ್ ಆಟಗಾರರು ಕೆಲವು ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳಬಹುದು. ಆದ್ದರಿಂದ, ಇಶಾನ್ ಕಿಶನ್ ಅವರನ್ನು ಬ್ಯಾಕಪ್ ಆಗಿ ಆಯ್ಕೆ ಮಾಡಲಾಗಿದೆ.
2023ರ ಏಷ್ಯಾ ಕಪ್‌ಗಾಗಿ ಭಾರತ ಸಂಪೂರ್ಣ ತಂಡ
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ) ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).
ಏಷ್ಯಾ ಕಪ್ ಪಂದ್ಯಾವಳಿ ಮುಗಿದ ನಂತರ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಏಕದಿನ ವಿಶ್ವಕಪ್‌ನ ಸಿದ್ಧತೆಗಳತ್ತ ಸಂಪೂರ್ಣ ಗಮನ ಹರಿಸುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications