ಚೆನ್ನೈ, ಜುಲೈ 23: ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ರಜೆ ಕಾಲವನ್ನು ಸದುಪಯೋಗ ಪಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಉಗ್ರಪ್ರತಾಪಿಯಾದರೂ ಉತ್ಸಾಹಿ ಕ್ರಿಕೆಟರ್ ಆಗಿರುವ ಕೊಹ್ಲಿ ಅವರು ಈಗ ಚೇತೇಶ್ವರ್ ಪೂಜಾರಾ ಅವರ ನಾಯಕತ್ವದಲ್ಲಿ ಆಡಲು ಅನುಮತಿ ಕೋರಿದ್ದಾರೆ.
ಶ್ರೀಲಂಕಾ ಪ್ರವಾಸಕ್ಕೆ ತಂಡ ಗುರುವಾರ ಪ್ರಕಟವಾಗಿದೆ. ಇದಕ್ಕೂ ಮುನ್ನವೇ ವಿರಾಟ್ ಕೊಹ್ಲಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದೆ ಹೀಗೊಂದು ಮನವಿ ಸಲ್ಲಿಸಿದ್ದಾರೆ.[ಶ್ರೀಲಂಕಾ ಸರಣಿಗೆ ತಂಡ ಪ್ರಕಟ,ಕೆಎಲ್ ರಾಹುಲ್ ಆಯ್ಕೆ]
ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ನಡುವೆ ನಡೆಯುತ್ತಿರುವ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ಆಡಲು ಅನುಮತಿ ನೀಡಿ ಇದರಿಂದ ನನಗೆ ಬೇಕಾದ ಅಗತ್ಯ ತಯಾರಿ ಸಿಗುತ್ತದೆ ಎಂದು ಕೊಹ್ಲಿ ಕೋರಿದ್ದಾರೆ.

ಉಭಯ ತಂಡಗಳ ನಡುವೆ ಚೆನ್ನೈನಲ್ಲಿ ಜುಲ್ಲೈ 28 ರಿಂದ 31ರ ವರೆಗೆ ಎರಡನೇ ನಾಲ್ಕು ದಿನಗಳ ಪಂದ್ಯ ನಡೆಯಲಿದೆ.
ಶ್ರೀಲಂಕಾ ಸರಣಿಗೂ ಮುನ್ನ ಅಗತ್ಯ ತರಬೇತಿ ಪಡೆಯಲು ಕೊಹ್ಲಿ ಅವರು ಮನವಿ ಸಲ್ಲಿಸಿದ್ದಾರೆ. ಶ್ರೀಲಂಕಾದಲ್ಲಿ ಒಂದೇ ಒಂದು ಅಭ್ಯಾಸ ಪಂದ್ಯವಾಡಲಾಗುತ್ತದೆ. ಹೀಗಾಗಿ ಎರಡನೇ ಪಂದ್ಯದಲ್ಲಿ ಕೊಹ್ಲಿ ಆಡಲು ಅನುಮತಿ ನೀಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.
ಚೆನ್ನೈನ ಚೆಪಾಕ್ ನ ಕ್ರೀಡಾಂಗಣ ಪಿಚ್ ಹಾಗೂ ಶ್ರೀಲಂಕಾದ ಪಿಚ್ ಗಳಿಗೂ ಸಾಮ್ಯತೆ ಇದೆ. ಪ್ರಥಮ ದರ್ಜೆ ಪಂದ್ಯವನ್ನಾಡಿ ಸೂಕ್ತ ಅಭ್ಯಾಸ ಪಡೆಯಲು ಕೊಹ್ಲಿ ಬಯಸಿದ್ದರಲ್ಲಿ ತಪ್ಪೇನಿಲ್ಲ. ಪೂಜಾರಾ ಅವರನ್ನು ಇಡೀ ಸರಣಿಗೆ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಕೊಹ್ಲಿ ಅವರು ಪೂಜಾರಾ ನಾಯಕತ್ವದಲ್ಲೇ ಆಡಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ. (ಪಿಟಿಐ)