ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಸರಣಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ನವೆಂಬರ್ 22 ರಂದು ಪರ್ತ್‌ನಲ್ಲಿ ನಡೆಯಲಿದೆ. ಭಾರತದ ಪರ ಹಲವು ಸ್ಟಾರ್ ಆಟಗಾರರು ಅಂಗಳ ಪ್ರವೇಶಿಸಲಿದ್ದಾರೆ. ಆದರೆ ಈ ಬಾರಿ ಎಲ್ಲರ ಕಣ್ಣು ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರುತ್ತದೆ. ವಿರಾಟ್ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಆದರೆ ಅವರು ಆಸ್ಟ್ರೇಲಿಯಾದಲ್ಲಿ ಫಾರ್ಮ್ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿ ಅಬ್ಬರದ ಆಟವನ್ನೇ ಆಡಿದ್ದಾರೆ. ವಿರಾಟ್ ಅವರಿಗೆ ಈ ಪಿಚ್‌ಗಳ ಮೇಲೆ ಆಡುವುದು ಎಂದರೆ ಇಷ್ಟ. ಇದಕ್ಕೆ ಇವರ ಅಂಕಿ ಅಂಶಗಳೇ ಸಾಕ್ಷಿ. ಭಾರತೀಯ ಕ್ರಿಕೆಟ್‌ನ ಭರವಸೆಯ ಬ್ಯಾಟ್ಸ್‌ಮನ್ ಆಸ್ಟ್ರೇಲಿಯಾದ ಬೌಲರ್‌ಗಳ ನಿದ್ದೆ ಗೆಡಿಸಿದ್ದಾರೆ. ವಿರಾಟ್ ಬಾರ್ಡರ್ ಗವಾಸ್ಕರ್ ಸರಣಿಯ ವೇಳೆ ಫಾರ್ಮ್‌ಗೆ ಮರಳುವುದರೊಂದಿಗೆ ಹಲವು ದಾಖಲೆಗಳನ್ನು ಮರಿಯುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಐದು ಪಂದ್ಯಗಳನ್ನು ಆಡಲಾಗುತ್ತಿದೆ. ಈ ವೇಳೆ ಅಬ್ಬರದ ಆಟವನ್ನು ಪ್ರದರ್ಶಿಸಿದರೆ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸಿ ಹಾಕಬಹುದು. ಆಸ್ಟ್ರೇಲಿಯಾದಲ್ಲಿ ಕೊಹ್ಲಿ 13 ಟೆಸ್ಟ್ ಪಂದ್ಯಗಳಲ್ಲಿ 54 ರ ಸರಾಸರಿಯಲ್ಲಿ 1352 ರನ್ ಗಳಿಸಿದ್ದಾರೆ. ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ವಿರಾಟ್ 458 ರನ್ ಗಳಿಸುವಲ್ಲಿ ಯಶಸ್ವಿಯಾದರೆ, ಸಚಿನ್ ದಾಖಲೆಯನ್ನು ಮುರಿಯಬಹುದು. ಆಸೀಸ್ ನೆಲದಲ್ಲಿ ಮಾಸ್ಟರ್ ಬ್ಲಾಸ್ಟರ್ 1,809 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸುವ ಸನಿಹದಲ್ಲಿ ನಿಂತಿದ್ದಾರೆ. ಈ ಸರಣಿಲ್ಲಿ ವಿರಾಟ್ 33 ರನ್ ಬಾರಿಸುವಲ್ಲಿ ಯಶಸ್ವಿಯಾದರೆ, ಟೆಸ್ಟ್ ಸ್ಪೇಷಲಿಸ್ಟ್ ಚೇತೇಶ್ವರ್ ಪೂಜಾರ ಅವರ ದಾಖಲೆಯನ್ನು ಅಳಿಸಿ ಹಾಕಬಹುದು. ಪೂಜಾರ ಆಸ್ಟ್ರೇಲಿಯಾ ವಿರುದ್ಧ 2074 ರನ್ ಗಳಿಸಿದ್ದು, ವಿರಾಟ್ 2042 ರನ್ ಗಳಿಸಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಈ ದಾಖಲೆಯನ್ನು ಮೀರಿ ನಿಲ್ಲುವ ಸಾಧ್ಯತೆ ಇದೆ.

ಟೀಮ್ ಇಂಡಿಯಾದ ಭರವಸೆಯ ಆಟಗಾರ ವಿರಾಟ್ ಕೊಹ್ಲಿ, ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಮತ್ತೊಂದು ದಾಖಲೆ ಬರೆಯಬಹುದು. ಈ ವೇಳೆ ವಿರಾಟ್, ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಅಳಿಸಿ ಹಾಕಬಹುದು. ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ದ್ರಾವಿಡ್ ಒಟ್ಟು 2143 ರನ್‌ಗಳನ್ನು ಬಾರಿಸಿದ್ದಾರೆ. ಈ ದಾಖಲೆ ಅಳಿಸಲು ವಿರಾಟ್‌ಗೆ ಇನ್ನು 102 ರನ್ ಅವಶ್ಯಕತೆ ಇದೆ.
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಥಿರ ಪ್ರದರ್ಶನ ನೀಡಿದ್ದಾರೆ. ಒಟ್ಟಾರೆ ಇವರು 25 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 47.48ರ ಸರಾಸರಿಯಲ್ಲಿ 2042 ರನ್ ಸಿಡಿಸಿದ್ದಾರೆ. ಇದರಲ್ಲಿ 8 ಶತಕ ಹಾಗೂ 5 ಅರ್ಧಶತಕ ಸೇರಿವೆ.